ಪಿಂಚಣಿ ಸ್ಥಗಿತ- ಬ್ಯಾಂಕ್, ಸರ್ಕಾರಕ್ಕೆ ದಂಡ: ಪಿಂಚಣಿದಾರರ ಪರ ಹೈಕೋರ್ಟ್ ಮಹತ್ವದ ತೀರ್ಪು!
ಪಿಂಚಣಿ ಸ್ಥಗಿತ- ಬ್ಯಾಂಕ್, ಸರ್ಕಾರಕ್ಕೆ ದಂಡ: ಪಿಂಚಣಿದಾರರ ಪರ ಹೈಕೋರ್ಟ್ ಮಹತ್ವದ ತೀರ್ಪು!
ಲೈಫ್ ಸರ್ಟಿಫೀಕೇಟ್ (ಜೀವಂತ ಪ್ರಮಾಣಪತ್ರ) ನೀಡದ ಹಿನ್ನೆಲೆಯಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ ಮತ್ತು ಬ್ಯಾಂಕ್ ವಿರುದ್ಧ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದ್ದು, ದಂಡದ ಜೊತೆಗೆ ಬಡ್ಡಿ ಸಹಿತ ಬಾಕಿ ಹಣವನ್ನು ಪಿಂಚಣಿದಾರರಿಗೆ ನೀಡುವಂತೆ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.
ಪಿಂಚಣಿದಾರರು ಜೀವ ಪ್ರಮಾಣ ಸಲ್ಲಿಸದಿದ್ದರೆ, ಪಿಂಚಣಿಯನ್ನು ನಿಲ್ಲಿಸುವ ಮೊದಲು ಪಿಂಚಣಿದಾರರ ಮನೆಗೆ ಭೇಟಿ ನೀಡಬೇಕು. ಪಿಂಚಣಿ ಜೀವ ಪ್ರಮಾಣ ಸಲ್ಲಿಸದೇ ಇರುವುದಕ್ಕೆ ಕಾರಣ ತಿಳಿದುಕೊಳ್ಳಬೇಕಾಗಿರುವುದು ಬ್ಯಾಂಕಿನ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಬ್ಯಾಂಕ್ ಅಧಿಕಾರಿಗಳ ಕಿವಿ ಹಿಂಡಿದೆ.
ಪ್ರಕರಣದ ಪ್ರತಿವಾದಿ 1ರಿಂದ 4ರವರು ಸಂತ್ರಸ್ತ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸುವಂತೆ ನಿರ್ದೇಶಿಸಿದ ನ್ಯಾಯಪೀಠ, ಬಾಕಿ ಇರುವ ಪಿಂಚಣಿ ಹಣ ರೂ. 371,280/-ನ್ನು ಎರಡು ವಾರದೊಳಗೆ ಶೇ. 6ರ ಬಡ್ಡಿದರ ಸಹಿತ ನೀಡಬೇಕು. ಇದಕ್ಕೆ ತಪ್ಪಿದ್ದಲ್ಲಿ 24-12-2018ರಿಂದ ಶೇ. 18ರ ದಂಡನಾ ಬಡ್ಡಿದರದ ಸಹಿತ ಪೂರ್ತಿ ಹಣವನ್ನು ನೀಡಬೇಕು ಎಂದು ಎದುರುದಾರರಿಗೆ ತಾಕೀತು ಮಾಡಿದೆ.
ಪ್ರಕರಣದ ವಿವರ:
101 ವರ್ಷ ಪ್ರಾಯದ ಎಚ್. ನಾಗಭೂಷಣ ರಾವ್ ಅವರು ತಮಗೆ ಪಿಂಚಣಿ(ಕೇಂದ್ರ ಗೌರವ ಧನ)ಯನ್ನು ನೀಡದೆ ಬಾಕಿ ಇರಿಸಿದ್ದ ಎದುರುದಾರರು (ಕೇಂದ್ರ ಸರ್ಕಾರ ಮತ್ತು ಕೆನರಾ ಬ್ಯಾಂಕ್) ತಮಗೆ ನೀಡಬೇಕಾಗಿರುವ ಪಿಂಚಣಿಯನ್ನು ಕಾಲಬದ್ಧ ನೆಲೆಯಲ್ಲಿ ಬಡ್ಡಿ ಸಹಿತ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
ಅರ್ಜಿದಾರರು 1974ರಿಂದ ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಯೋಧರ ಸಮ್ಮಾನ್ ಗೌರವ ಧನ(ಪಿಂಚಣಿ) ಫಲಾನುಭವಿಯಾಗಿರುತ್ತಾರೆ. ಈ ಪಿಂಚಣಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಿಂಚಣಿದಾರ ಅರ್ಜಿದಾರರಿಗೆ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಮೂಲಕ ನೀಡುತ್ತಿದ್ದವು.
01-11-2017ರಲ್ಲಿ ಪಿಂಚಣಿಯನ್ನು ಏಕಾಏಕಿ ಸ್ಥಗಿತಗೊಳಿಸಲಾಯಿತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಅರ್ಜಿದಾರರು ಪಿಂಚಣಿಗೆ ವಾರ್ಷಿಕವಾಗಿ ಸಲ್ಲಿಸಬೇಕಾಗಿದ್ದ ಲೈಫ್ ಸರ್ಟಿಫಿಕೇಟ್ ಸಲ್ಲಿಸದಿರುವುದೇ ಕಾರಣ ಎಂದು ತಿಳಿಯಿತು. ಅದರ ಪ್ರಕಾರ, ಅರ್ಜಿದಾರರು 24-12-2018ರಂದು ಲೈಫ್ ಸರ್ಟಿಫಿಕೇಟ್‌ನ್ನು ಸಲ್ಲಿಸಿದರು. ಸರ್ಕಾರವು 24-12-2018ರಿಂದ 05-10-2020ರವರೆಗಿನ ಪಿಂಚಣಿ ಹಣವನ್ನು ನೀಡಲು ಆದೇಶ ಹೊರಡಿಸಿತು. ಆದರೆ 1-11-2017ರಿಂದ 24-12-2018ರ ವರೆಗಿನ ರೂ. 371,280/- ಪಿಂಚಣಿ ಮೊತ್ತವನ್ನು ಬಾಕಿ ಇರಿಸಿತು. ಈ ಹಣವನ್ನು ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ 24-06-2020ರಂದು (WP 7813/2020) ಎರಡು ವಾರದೊಳಗೆ ಬಾಕಿ ಪಿಂಚಣಿ ನೀಡಬೇಕು ಎಂದು ಆದೇಶ ಹೊರಡಿಸಿತು.
ಆದರೆ, ಕೇಂದ್ರ ಸರ್ಕಾರವು ಬಾಕಿ ಪಿಂಚಣಿ ನೀಡುವ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಮತ್ತೆ ಹೈಕೋರ್ಟ್ ಮೊರೆ ಹೋಯಿತು. ಲೈಫ್ ಸರ್ಟಿಫಿಕೇಟ್ ನೀಡದೇ ಇದ್ದ ಕಾರಣ ಫಲಾನುಭವಿಗೆ ಪಿಂಚಣಿ ನೀಡಲಾಗಿಲ್ಲ ಮತ್ತು ಆ ಪಿಂಚಣಿ ಹಣಕ್ಕೆ ಅವರು ಅರ್ಹರಲ್ಲ ಎಂದು ಕೇಂದ್ರ ಸರ್ಕಾರ ವಾದ ಮಂಡನೆ ಮಾಡಿತು.
ಗೌರವ ಸಮ್ಮಾನ್ ಪಿಂಚಣಿ ನೀಡುವ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಅಧಿಕೃತ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮಾರ್ಗಸೂಚಿ ಹೊರಡಿಸಿದ್ದು, ಈ ಪ್ರಕಾರ, ಲೈಫ್ ಸರ್ಟಿಫಿಕೇಟ್ ಸಂಗ್ರಹಿಸುವುದು ಬ್ಯಾಂಕ್‌ನ ಕರ್ತವ್ಯ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಪಿಂಚಣಿದಾರರು ವಯೋವೃದ್ಧರಾಗಿದ್ದರೆ, ಅವರ ವಾಸಸ್ಥಳಕ್ಕೆ ಭೇಟಿ ನೀಡಿ ಲೈಫ್ ಸರ್ಟಿಫಿಕೇಟ್ ಪಡೆಯಬೇಕಾಗಿರುವುದು ಬ್ಯಾಂಕ್ ಅಧಿಕಾರಿಯ ಕರ್ತವ್ಯ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು.
ಅದರಲ್ಲೂ ಪಿಂಚಣಿದಾರರು 80 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ವರ್ಷಕ್ಕೆ ಎರಡು ಬಾರಿ (ಮೇ ಮತ್ತು ನವೆಂಬರ್) ಈ ಲೈಫ್ ಸರ್ಟಿಫಿಕೇಟ್ ಪಡೆದುಕೊಳ್ಳುವುದು ಕಡ್ಡಾಯ. ಒಂದು ವೇಳೆ, ಲೈಫ್ ಸರ್ಟಿಫಿಕೇಟ್ ಸಲ್ಲಿಕೆಯಾಗದೇ ಇದ್ದ ಪಕ್ಷದಲ್ಲಿ ಅವರ ವಾಸಸ್ಥಳಕ್ಕೆ ಭೇಟಿ ನೀಡಿ ಯಾವ ಕಾರಣಕ್ಕೆ ಇದನ್ನು ಸಲ್ಲಿಸಿಲ್ಲ ಎಂಬ ಮಾಹಿತಿ ಕಲೆ ಹಾಕಬೇಕು ಎಂದು ಮಾರ್ಗಸೂಚಿಸಿ ಹೇಳಿತ್ತು.
ಆದರೆ, ಪಿಂಚಣಿಯನ್ನು ಸ್ಥಗಿತಗೊಳಿಸಿರುವ ಕ್ರಮ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಪಿಂಚಣಿದಾರರು ಬಾಕಿ ಇರುವ ಮೊತ್ತವನ್ನು ಪಡೆಯಲು ಅರ್ಹರು ಎಂಬುದು ವಿವಾದಾತೀತ. ಸದ್ರಿ ಪ್ರಕರಣದಲ್ಲಿ ಲೈಫ್ ಸರ್ಟಿಫಿಕೇಟ್ ಪಡೆದುಕೊಳ್ಳುವುದು ಬ್ಯಾಂಕ್‌ನ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಕ್ಕೆ ದಂಡ ವಿಧಿಸಿ ತೀರ್ಪು ನೀಡಿತು.
ಪ್ರಕರಣ: ಎಚ್. ನಾಗಭೂಷಣ ರಾವ್ Vs ಅಪರ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯ ಮತ್ತಿತರರು
ಕರ್ನಾಟಕ ಹೈಕೋರ್ಟ್, WS 405/2023 Dated 17-02-2023