-->
ಮುಷ್ಕರದ ಹಕ್ಕು ಮೂಲಭೂತ ಹಕ್ಕೇ..?: ಸುಪ್ರೀಂ ಕೋರ್ಟ್ ವಿಧಿಸಿದ ಕಂಡೀ‍ಷನ್ ಏನು...?

ಮುಷ್ಕರದ ಹಕ್ಕು ಮೂಲಭೂತ ಹಕ್ಕೇ..?: ಸುಪ್ರೀಂ ಕೋರ್ಟ್ ವಿಧಿಸಿದ ಕಂಡೀ‍ಷನ್ ಏನು...?

ಮುಷ್ಕರದ ಹಕ್ಕು ಮೂಲಭೂತ ಹಕ್ಕೇ..?: ಸುಪ್ರೀಂ ಕೋರ್ಟ್ ವಿಧಿಸಿದ ಕಂಡೀ‍ನ್ ಏನು...?

ಮುಷ್ಕರದ ಹಕ್ಕು ಮೂಲಭೂತ ಹಕ್ಕು ಅಲ್ಲ: ಸುಪ್ರೀಂ ಕೋರ್ಟ್ ವಿಧಿಸಿದ ಸಾಂವಿಧಾನಿಕ ನಿಬಂಧನೆಗಳು


ಮುಷ್ಕರ ಮಾಡುವ ಹಕ್ಕು ಶಾಸನಬದ್ಧ ಮತ್ತು ಕಾನೂನಾತ್ಮಕ ಹಕ್ಕಾಗಿದ್ದರೂ ಅದು ಮೂಲಭೂತ ಹಕ್ಕು ಎಂದು ಹೇಳಲಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವಿವಿಧ ಪ್ರಕರಣಗಳಲ್ಲಿ ನೀಡಿದ ತೀರ್ಪಿನಲ್ಲಿ ಪುನರುಚ್ಚರಿಸಿದೆ.


ಕಾರ್ಮಿಕ ಕಾಯಿದೆಗಳು ಅನ್ವಯವಾಗುವ ಬ್ಯಾಂಕ್, ವಿಮಾ ಕಂಪನಿಗಳು ಮತ್ತು ಸಾರ್ವಜನಿಕ ಉದ್ಯಮ ಸಂಸ್ಥೆಗಳ ನೌಕರರು ಟ್ರೇಡ್ ಯೂನಿಯನ್ ಆಕ್ಟ್ 1926 ಹಾಗೂ ಕೈಗಾರಿಕಾ ವಿವಾದಗಳ ಕಾಯ್ದೆ 1947 ರ ಅವಕಾಶಗಳಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಮುಷ್ಕರ ಹೂಡುವ ಶಾಸನಬದ್ಧ ಹಾಗೂ ಕಾನೂನಾತ್ಮಕ ಹಕ್ಕು ಹೊಂದಿದ್ದರೂ ಅದು ಮೂಲಭೂತ ಹಕ್ಕು ಅಲ್ಲ.


ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಸರಕಾರಿ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಮುಷ್ಕರ ಹೂಡಲು ಯಾವುದೇ ಕಾನೂನಾತ್ಮಕ ನೈತಿಕ ಅಥವಾ ಸಮಾನ ಹಕ್ಕು ಹೊಂದಿರುವುದಿಲ್ಲ ಎಂಬುದಾಗಿ ಭಾರತದ ಸರ್ವೋಚ್ಚ ನ್ಯಾಯಾಲಯವು ಟಿ.ಕೆ. ರಂಗರಾಜನ್ ವಿರುದ್ಧ ತಮಿಳುನಾಡು ಸರಕಾರ ಮತ್ತಿತರರು ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.


ಎರಡು ದಶಕಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ದಿ.ಜಯಲಲಿತ ಸರಕಾರದ ನೌಕರ ವಿರೋಧಿ ಕ್ರಮಗಳಾದ ತುಟ್ಟಿಭತ್ಯೆ ನಿಲುಗಡೆ, ನೂತನ ಪಿಂಚಣಿ ಪದ್ಧತಿಯ ಅನುಷ್ಠಾನಗಳನ್ನು ವಿರೋಧಿಸಿ ತಮಿಳುನಾಡು ರಾಜ್ಯದ ಸರಕಾರಿ ನೌಕರರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರವನ್ನು ದಮನಿಸುವ ಸಲುವಾಗಿ ಸುಗ್ರೀವಾಜ್ಞೆ ಮೂಲಕ ತಮಿಳುನಾಡು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ 2002 (ಟೆಸ್ಮಾ) ಜಾರಿಗೊಳಿಸಿ 176000 ಸರಕಾರಿ ನೌಕರರನ್ನು ವಜಾಗೊಳಿಸಿದ ತಮಿಳುನಾಡು ರಾಜ್ಯ ಸರಕಾರದ ಆದೇಶವನ್ನು ಹಾಗೂ ಟೆಸ್ಮಾ ಆರ್ಡಿನೆನ್ಸ್ 2 ರ ಸಿಂಧುತ್ವವನ್ನು ಪ್ರಶ್ನಿಸಿ ದಾಖಲಿಸಲಾದ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ ಮದ್ರಾಸ್ ಹೈಕೋರ್ಟಿನ ಏಕ ಸದಸ್ಯ ನ್ಯಾಯ ಪೀಠವು ನೌಕರರ ವಜಾ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದರೂ ವಿಭಾಗಿಯ ಪೀಠವು ಮಧ್ಯಂತರ ಆದೇಶವನ್ನು ರದ್ದುಗೊಳಿಸಿದ್ದುದರಿಂದ ವಿಭಾಗಿಯ ಪೀಠದ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು.


ಸರಕಾರಿ ನೌಕರರ ಹಕ್ಕುಗಳ ಮೇಲೆ ಪರಿಣಾಮ ಬೀರುವ ಮಹತ್ತರ ತೀರ್ಪಿನಲ್ಲಿ ಮುಷ್ಕರವನ್ನು ಆಶ್ರಯಿಸುವ ನೈತಿಕ ಹಕ್ಕು ಸರಕಾರಿ ನೌಕರರಿಗೆ ಇಲ್ಲ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಘೋಷಿಸಿತು. ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯು ರಾಜ್ಯ ಅಥವಾ ರಾಷ್ಟ್ರದ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಅಥವಾ ನಾಗರಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎಮ್. ಬಿ. ಶಾ ಮತ್ತು ಶ್ರೀ ಆರ್. ಲಕ್ಷ್ಮಣನ್ ಅವರನ್ನೊಳಗೊಂಡ ಪೀಠ ತೀರ್ಪು ನೀಡಿತು. ವಜಾಗೊಂಡ ನೌಕರರ ಪೈಕಿ ನಿಶ್ಶರ್ಥ ಕ್ಷಮೆ ಯಾಚಿಸಿ ಭವಿಷ್ಯದಲ್ಲಿ ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಟ್ಟ 156106 ನೌಕರರನ್ನು ಸೇವೆಗೆ ಮರು ನಿಯುಕ್ತಿ ಮಾಡಲಾಯಿತು.


ಸರಕಾರಿ ನೌಕರರ ಮುಷ್ಕರಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಯಮಗಳ ಮೂಲಕ ಕಾನೂನುಬಾಹಿರಗೊಳಿಸಿವೆ. ನಾಗರೀಕ ಸೇವಾ ನಿಯಮಗಳು ಮತ್ತು ಸರಕಾರಿ ನೌಕರರ ನಡತೆ ನಿಯಮಗಳು ಸರಕಾರದ ವಿರುದ್ಧ ನೌಕರರು ನಡೆಸುವ ಸಾರ್ವಜನಿಕ ಸಭೆಗಳನ್ನು ಮತ್ತು ಮುಷ್ಕರಗಳನ್ನು ನಿಷೇಧಿಸುತ್ತವೆ ಹಾಗೂ ಸದರಿ ಅವಧಿಯನ್ನು ಅನಧಿಕೃತ ಗೈರುಹಾಜರಿ ಎಂದು ಪರಿಗಣಿಸಲು ಅಧಿಕಾರಿಗಳಿಗೆ ನಿರ್ದೇಶಿಸುತ್ತವೆ.


*ಮುಷ್ಕರದ ಹಕ್ಕಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು*


1‌ ಸಶಸ್ತ್ರ ಪಡೆಗಳು ಮತ್ತು ಪೊಲೀಸರು ತಮ್ಮ ಸೇವಾ ಜೀವನದಲ್ಲಿ ಪಾಲಿಸಬೇಕಾದ ಅತ್ಯಂತ ಮುಖ್ಯವಾದ ಮತ್ತು ಪೂರ್ವಾಪೇಕ್ಷಿತ ವಿಷಯವೆಂದರೆ ಶಿಸ್ತು. ಸಾರ್ವಜನಿಕ ಸುವ್ಯವಸ್ಥೆ ಮತ್ತು ಇತರ ಅಂಶಗಳನ್ನು ಪರಿಗಣಿಸಿ ದೇಶದ ಸಾರ್ವಭೌಮತೆಯ ಹಿತಾಸಕ್ತಿ ಅಡಿ ಪೊಲೀಸರು ಮತ್ತು ಸಶಸ್ತ್ರ ಪಡೆಗಳು ಸಂಘವನ್ನು ರಚಿಸುವ ಮೂಲಭೂತ ಹಕ್ಕನ್ನು ಸಹ ಸಂವಿಧಾನದ ವಿಧಿ 19 (4) ರಡಿ ನಿರ್ಬಂಧಿಸಬಹುದು.


2. ಸಂವಿಧಾನದ ಅನುಚ್ಚೇದ 33 ರಡಿ ಸಂಸತ್ತು ಕಾನೂನಿನ ಮೂಲಕ ಸಶಸ್ತ್ರ ಪಡೆಗಳ ಸದಸ್ಯರ ಹಕ್ಕುಗಳನ್ನು ನಿರ್ಬಂಧಿಸಬಹುದು. ಅಥವಾ ರದ್ದುಗೊಳಿಸಬಹುದು. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಗುರುತರ ಜವಾಬ್ದಾರಿ ಹೊಂದಿರುವ ಸಶಸ್ತ್ರ ಪಡೆಗಳು ತಮ್ಮ ಕರ್ತವ್ಯಗಳ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಬಂಧ ಅವಶ್ಯಕವಾಗಿದೆ.


3. 1947 ರ ಕೈಗಾರಿಕಾ ವಿವಾದಗಳ ಕಾಯ್ದೆಯಡಿ ಕಾರ್ಮಿಕ ಕಾಯ್ದೆಗಳು ಅನ್ವಯವಾಗುವ ಸಂಸ್ಥೆಗಳ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕೈಗೊಳ್ಳುವ ಮುಷ್ಕರವನ್ನು ಅವರ ಶಾಸನಬದ್ಧ ಹಕ್ಕು ಎಂದು ಭಾರತ ಸರಕಾರ ಗುರುತಿಸಿದೆ.


4. ಮುಷ್ಕರದ ಬಗ್ಗೆ ಭಾರತದ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ. ಮುಷ್ಕರ ಮೂಲಭೂತ ಹಕ್ಕಲ್ಲ ಎಂದು ಹೇಳುವ ಮೂಲಕ ಕಾಮೇಶ್ವರ ಪ್ರಸಾದ್ ವಿರುದ್ಧ ಬಿಹಾರ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ 1958ರಲ್ಲಿ ಇತ್ಯರ್ಥಪಡಿಸಿತು. ಸರಕಾರಿ ನೌಕರರಿಗೆ ಮುಷ್ಕರ ನಡೆಸಲು ಕಾನೂನಾತ್ಮಕ ಅಥವಾ ನೈತಿಕ ಹಕ್ಕುಗಳಿಲ್ಲ ಎಂದು ಪ್ರತಿಪಾದಿಸಿತು.


5. ದೆಹಲಿ ಪೊಲೀಸ್ ವಿರುದ್ಧ ಭಾರತ ಸರಕಾರ ಈ ಪ್ರಕರಣದಲ್ಲಿ 1986ರಲ್ಲಿ ತೀರ್ಪು ನೀಡಿದ ಸುಪ್ರೀಂಕೋರ್ಟ್ ಪೊಲೀಸ್ ಪಡೆಗಳ (ಹಕ್ಕುಗಳ ನಿರ್ಬಂಧ) ಕಾಯಿದೆ, 1966 ರ ನಂತರ ಗೆಜೆಟೆಡ್ ಅಲ್ಲದ ಪೊಲೀಸ್ ಪಡೆಯ ಸದಸ್ಯರು ಸಂಘವನ್ನು ರಚಿಸುವ ನಿರ್ಬಂಧಗಳನ್ನು ಎತ್ತಿ ಹಿಡಿದಿದೆ. ತತ್ಪರಿಣಾಮವಾಗಿ ತಿದ್ದುಪಡಿ ಮಾಡಲಾದ ನಿಯಮಗಳು 1970 ಜಾರಿಗೆ ಬಂತು.


6. ಸರಕಾರಿ ನೌಕರರಿಗೆ ಸಂಘವನ್ನು ರಚಿಸುವ ಸ್ವಾತಂತ್ರ್ಯದ ಹಕ್ಕು ಮೂಲಭೂತವಾಗಿದ್ದರೂ ಅಂತಹ ಸಂಘವನ್ನು ಗುರುತಿಸುವುದು ಮೂಲಭೂತ ಹಕ್ಕಲ್ಲ. ಸಂಸತ್ತು ಕಾನೂನಿನ ಮೂಲಕ ಅಂತಹ ಸಂಘಗಳ ಕಾರ್ಯ ಚಟುವಟಿಕೆಗಳ ಮೇಲೆ ಶರತ್ತುಗಳು ಮತ್ತು ನಿರ್ಬಂಧಗಳನ್ನು ವಿಧಿಸುವ ಮೂಲಕ ಅವುಗಳ ಕಾರ್ಯವೈಖರಿಯನ್ನು ನಿಯಂತ್ರಿಸಬಹುದು ಎಂದು ನ್ಯಾಯಾಲಯ ಹೇಳಿದೆ.


*ಮುಷ್ಕರದ ಬಗ್ಗೆ ಅಂತರ್ರಾಷ್ಟ್ರೀಯ ನಿಯಮಗಳು*


1. ಆಂಗ್ಲ ನ್ಯಾಯಾಂಗ ಮುಷ್ಕರ ಮಾಡುವ ಹಕ್ಕಿನ ಬಗ್ಗೆ ಬಹಳ ಸಹಾನುಭೂತಿ ಹೊಂದಿದೆ. ಮುಷ್ಕರದ ಹಕ್ಕನ್ನು ನ್ಯಾಯ ಸಮ್ಮತವೆಂದು ಪರಿಗಣಿಸಲಾಗಿದೆ. ಲಾರ್ಡ್ ಡೆನ್ನಿಂಗ್ ಅವರು ಮುಷ್ಕರವು ಕೊನೆಯ ಪರಿಹಾರವಾಗಿದೆ ಮತ್ತು ಇದು ಕಾರ್ಮಿಕರ ಅಂತರ್ಗತ ಹಕ್ಕಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


2. ಅಮೇರಿಕಾದಲ್ಲಿ ರಾಷ್ಟ್ರೀಯ ಕಾರ್ಮಿಕ ಸಂಬಂಧಗಳ ಕಾಯ್ದೆ 1935 ಉತ್ತಮ ವೇತನ ಮತ್ತು ಕೆಲಸದ ಪರಿಸ್ಥಿತಿಗಳು ಹಾಗೂ ಆರೋಗ್ಯ ಮತ್ತು ನೈರ್ಮಲ್ಯ ಇತ್ಯಾದಿಗಳನ್ನು ಪಡೆಯಲು ಮುಷ್ಕರ ಮಾಡುವ ಹಕ್ಕನ್ನು ಒದಗಿಸುತ್ತದೆ. ಆದರೆ ಭಾರತದಲ್ಲಿ ಇದು ಕೇವಲ ಶಾಸನಬದ್ಧ ಹಕ್ಕು. ಮೂಲಭೂತ ಹಕ್ಕು ಎಂದು ಇದುವರೆಗೂ ಪರಿಗಣಿಸಲ್ಪಟ್ಟಿಲ್ಲ.


3. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯು ನೌಕರರಿಗೆ ಸಂಘಟಿಸುವ ಮತ್ತು ಸಾಮಾಜಿಕ ಚೌಕಾಶಿ ಮಾಡುವ ಹಕ್ಕನ್ನು ನೀಡಬೇಕೆಂದು ಆದೇಶಿಸಿದೆ. ಆದಾಗ್ಯೂ ಮುಷ್ಕರ ಮಾಡುವ ಹಕ್ಕಿನ ಬಗ್ಗೆ ಯಾವುದೇ ಲಿಖಿತ ನಿಬಂಧನೆಗಳಿಲ್ಲ. ಆದರೆ ತಜ್ಞರ ಸಮಿತಿಯು ಈ ಹಕ್ಕನ್ನು ಅನಿವಾರ್ಯ ಮತ್ತು ಸಂಘಟಿಸುವ ಹಕ್ಕಿನ ಅವಿಭಾಜ್ಯ ಅಂಗವೆಂದು ಪರಿಗಣಿಸಿದೆ.


4. ಮುಷ್ಕರ ಮಾಡುವ ಹಕ್ಕನ್ನು ಹೊರತುಪಡಿಸಿ ಭಾರತವು ಎರಡು ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಅಡಕವಾಗಿರುವ ಬಹುತೇಕ ಎಲ್ಲಾ ತತ್ವಗಳನ್ನು ಜಾರಿಗೆ ತಂದಿದೆ ಮತ್ತು ಪ್ರಚಾರ ಮಾಡಿದೆ. ತಮಿಳ್ನಾಡಿನಲ್ಲಿ 1,76,000 ನೌಕರರನ್ನು ವಜಾ ಮಾಡಿದ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಮಧ್ಯ ಪ್ರವೇಶಿಸಿದುದರಿಂದ ಸಮಸ್ಯೆ ಬಗೆಹರಿಯಲು ಸಹಕಾರಿಯಾಯಿತು.


5. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ 1948 ಕಾರ್ಮಿಕರ ಹಿತಾಸಕ್ತಿಗಳಿಗೆ ರಕ್ಷಣೆ ಒದಗಿಸುತ್ತದೆ. ಕಾರ್ಮಿಕರು ಸಂಘಗಳನ್ನು ರಚಿಸುವ ಮತ್ತು ಮುಷ್ಕರ ಮಾಡುವ ಹಕ್ಕನ್ನು ಈ ಮೂಲಕ ಪಡೆದಿರುತ್ತಾರೆ.


6. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರಾಷ್ಟ್ರೀಯ ಒಪ್ಪಂದ 1966 ಸದಸ್ಯ ರಾಷ್ಟ್ರಗಳ ಕಾನೂನಿಗೆ ಅನುಗುಣವಾಗಿರುವ ಶರತ್ತಿನೊಂದಿಗೆ ಮುಷ್ಕರ ಮಾಡುವ ಹಕ್ಕನ್ನು ಗುರುತಿಸಲು ಸಹಕರಿಸುತ್ತದೆ.


ನೌಕರರ ಸೇವಾ ಸ್ಥಿತಿಗತಿ ಉತ್ತಮ ಮಟ್ಟದಲ್ಲಿದ್ದರೆ ಯಾರೂ ಮುಷ್ಕರಕ್ಕೆ ಇಳಿಯುವುದಿಲ್ಲ ಎಂಬುದನ್ನು ಉದ್ಯೋಗದಾತರು ಪರಿಗಣಿಸಬೇಕು. ಮುಷ್ಕರವು ಕೊನೆಯ ಅಸ್ತ್ರದ ಬಳಕೆಯಾಗಿದೆ. ಮಾನವ ದಿನಗಳ ನಷ್ಟಕ್ಕೆ ಮುಷ್ಕರಗಳು ಕಾರಣವೆಂಬುದು ಜನಸಾಮಾನ್ಯರ ಅನಿಸಿಕೆಯಾಗಿದೆ. ಸಂಪನ್ಮೂಲಗಳ ಅಗಾಧ ಮೊತ್ತವನ್ನು ವೇತನ ರೂಪದಲ್ಲಿ ನೌಕರರಿಗೆ ನೀಡಲಾಗುತ್ತದೆ ಎಂಬ ಮಿಥ್ಯೆಯನ್ನು ವ್ಯಾಪಕವಾಗಿ ಪ್ರಚಾರಪಡಿಸಲಾಗಿದೆ.


ಅಂತಿಮವಾಗಿ ಮುಷ್ಕರವು ಕೆಲಸದ ಪರಿಸ್ಥಿತಿಗಳಲ್ಲಿನ ಉದ್ವೇಗದ ಕೂಗು ಹೊರತು ಬೇರೇನು ಅಲ್ಲ. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಯೋಗವೆಂದು ಹೇಳಬಹುದು. ಆದರೆ ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ಮುಷ್ಕರ ಮೂಲಭೂತ ಹಕ್ಕು ಅಲ್ಲ. ಯಾವುದೇ ಸಮಾನತೆಯ ನೆಲೆಯಲ್ಲಿ ಮುಷ್ಕರಗಳನ್ನು ಸಮರ್ಥಿಸಲಾಗುವುದಿಲ್ಲ.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ

Ads on article

Advertise in articles 1

advertising articles 2

Advertise under the article