ರಾಜ್ಯ ವಕೀಲರ ಸಮ್ಮೇಳನ: ಡಿ.ಕೆ.ಶಿ. ಭಾಗಿ ವಿವಾದ- "ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ" ಎಂದ ಡಿಸಿಎಂ
ರಾಜ್ಯ ವಕೀಲರ ಸಮ್ಮೇಳನ: ಡಿ.ಕೆ.ಶಿ. ಭಾಗಿ ವಿವಾದ- "ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ" ಎಂದ ಡಿಸಿಎಂ
ಮೈಸೂರಿನಲ್ಲಿ ಶನಿವಾರದಿಂದ ನಡೆಯಲಿರುವ ಎರಡು ದಿನಗಳ ರಾಜ್ಯ ವಕೀಲರ ಸಮ್ಮೇಳನ ಅತಿಥಿಗಳ ವಿಚಾರಕ್ಕೆ ವಿವಾದಕ್ಕೀಡಾಗಿತ್ತು. ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಧಾನ ಅತಿಥಿಗಳಾಗಿರುವ ಸಮಾರಂಭದ ಮುಖ್ಯ ವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗಿಯಾಗುವ ಬಗ್ಗೆ ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಲೇ ಡಿ.ಕೆ. ಶಿವಕುಮಾರ್, ಈ ಸಮಾರಂಭದಿಂದ ದೂರ ಸರಿಯಲು ನಿರ್ಧರಿಸಿದ್ಧಾರೆ.
ನಾನು ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿರುವ ಡಿ.ಕೆ. ಶಿವಕುಮಾರ್, ತಮ್ಮ ಮೇಲೆ ಬೊಟ್ಟು ಮಾಡಿರುವ ಸುರೇಶ್ ಕುಮಾರ್ ಅವರು ಯಡಿಯೂರಪ್ಪ ಅವರ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ತಿರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧವೂ ನ್ಯಾಯಾಲಯದಲ್ಲಿ ಪ್ರಕರಣಗಳಿವೆ. ಹಾಗಿದ್ದರೂ ಅವರು ನ್ಯಾಯಾಂಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲವೇ..? ಸುರೇಶ್ ಕುಮಾರ್ ಮೊದಲು ಅದರ ಬಗ್ಗೆ ಮಾತನಾಡಲಿ ಎಂದು ಹೇಳಿದರು.
ತಮ್ಮ ಕುಟುಂಬ ಸದಸ್ಯರ ಮದುವೆ, ಶುಭ ಕಾರ್ಯಕ್ರಮಕ್ಕೆ ನ್ಯಾಯಮೂರ್ತಿಗಳು ನನ್ನನ್ನು ಆಹ್ವಾನಿಸಿದ್ದಾರೆ. ಆದರೆ, ಅವರಿಗೆ ಮುಜುಗರ ಆಗಬಾರದು ಎಂದು ನಾನೇ ಇಂತಹ ಕಾರ್ಯಕ್ರಮಗಳಿಂದ ದೂರ ಇದ್ದೆ... ಭಾಗವಹಿಸಿಲ್ಲ ಎಂದು ಹೇಳಿದ ಅವರು, ಈಗಲೂ ನಾನು ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.