ಭೂಗತ ಪಾತಕಿ ಸಹಚರರಿಂದ ವಕೀಲರಿಗೆ ಬೆದರಿಕೆ- ಹಫ್ತಾ ನೀಡಲು ಡಿಮ್ಯಾಂಡ್!
ಭೂಗತ ಪಾತಕಿ ಸಹಚರರಿಂದ ವಕೀಲರಿಗೆ ಬೆದರಿಕೆ- ಹಫ್ತಾ ನೀಡಲು ಡಿಮ್ಯಾಂಡ್!
ಭೂಗತ ಲೋಕದ ಪಾತಕಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನ ಸಹಚರರು ವಕೀಲರೊಬ್ಬರಿಗೆ ಭಾರೀ ಮೊತ್ತದ ಹಫ್ತಾ ವಸೂಲಿಗೆ ಡಿಮ್ಯಾಂಡ್ ಮಾಡಿದ್ದು, ದುಷ್ಕರ್ಮಿಗಳ ವಿರುದ್ಧ ವಕೀಲರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಪುತ್ತೂರಿನ ವಕೀಲರಾದ ಪ್ರಶಾಂತ್ ರೈ ಅವರಿಗೆ ಕೆಲ ದಿನಗಳ ಹಿಂದೆ ಭೂಗತ ಲೋಕದ ಜಗ್ಗು ಶೆಟ್ಟಿ ಯಾನೆ ಜಗದೀಶ ಶೆಟ್ಟಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ತನಗೆ 25 ಲಕ್ಷ ರೂ. ನೀಡಬೇಕು. ಹಣವನ್ನು ಪಡೆದುಕೊಳ್ಳಲು ನನ್ನ ಸಹಚರರನ್ನು ಕಳಿಸುತ್ತೇನೆ. ಹಣ ಕೊಡದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಮೇ 2ರಂದು ರಾತ್ರಿ ಕರೆ ಮಾಡಿದ್ದ ಆ ವ್ಯಕ್ತಿ, ನೀನು ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ತುಂಬ ಹಣ ಗಳಿಸಿದ್ದೀಯಾ? ಈ ಹಣದಿಂದ ಜಮೀನು, ಕಟ್ಟಡಗಳು ಹಾಗೂ ಇತರ ಸ್ವತ್ತುಗಳನ್ನು ಮಾಡಿದ್ದೀಯಾ.. ಎಂದು ಹೇಳಿದ್ದ. ಇದೆಲ್ಲ ನಿನಗ್ಯಾಕೆ ಎಂದು ಪ್ರಶ್ನಿಸಿದ ವಕೀಲರನ್ನು ಹಣ ನೀಡದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ತಿರುಗುತ್ತರ ನೀಡಿದ್ದ.
ಜುಲೈ 6ರಂದು ವಕೀಲ ಪ್ರಶಾಂತ್ ರೈ ತಮ್ಮ ಕಕ್ಷಿದಾರರಿಬ್ಬರ ಜೊತೆ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಇಬ್ಬರು ಅಪರಿಚಿತರು ಬಂದು ಜಗ್ಗು ಬಾಸ್ ಕಳಿಸಿದ್ದಾರೆ. ನಮಗೆ 25 ಲಕ್ಷ ರೂ. ಕೊಡಿ. ಇಲ್ಲದಿದ್ದರೆ ನಿಮ್ಮನ್ನು ಕೊಲೆ ಮಾಡಲು ಆದೇಶ ನೀಡಿದ್ದಾರೆ ಎಂದು ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ವಕೀಲರು ತಮ್ಮ ಖಾಸಗಿ ದೂರಿನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.