![ಅನುಮತಿ ಇಲ್ಲದೇ ದೀರ್ಘ ರಜೆಯಲ್ಲಿದ್ದ ಉದ್ಯೋಗಿಯ ಮರುನೇಮಕ: ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್! ಅನುಮತಿ ಇಲ್ಲದೇ ದೀರ್ಘ ರಜೆಯಲ್ಲಿದ್ದ ಉದ್ಯೋಗಿಯ ಮರುನೇಮಕ: ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್!](https://blogger.googleusercontent.com/img/b/R29vZ2xl/AVvXsEiWzXsXq2cWChO1OK_oFXtE3t_onAE7VB9pqAuLYGqt-3jt30TV2H1ofjT1vN6DDJJAmeexLXyk1_M9hYbefXq5WMB4mDahuj6W-yVmfw-rKOwEYLXNoC78g7qYGnjBwjPbn_tCkx0Xh9P0cUmpBXKHHjiCdMGgSWkFwR1o8PBSrXeAsbUcY6jjLGIe39yu/w640-h352/1234.jpg)
ಅನುಮತಿ ಇಲ್ಲದೇ ದೀರ್ಘ ರಜೆಯಲ್ಲಿದ್ದ ಉದ್ಯೋಗಿಯ ಮರುನೇಮಕ: ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್!
ಅನುಮತಿ ಇಲ್ಲದೇ ದೀರ್ಘ ರಜೆಯಲ್ಲಿದ್ದ ಉದ್ಯೋಗಿಯ ಮರುನೇಮಕ: ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್!
ಇಲಾಖೆ ಅಧಿಕಾರಿಗಳ ಅನುಮತಿ ಇಲ್ಲದೇ ಸುದೀರ್ಘ ಅವಧಿಯ ಕಾಲ ರಜೆಯಲ್ಲಿದ್ದ ಉದ್ಯೋಗಿಯನ್ನು ಸೇವೆಗೆ ಮರುನೇಮಕ ಮಾಡುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(KPTCL)ಕ್ಕೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ವಿಭಾಗೀಯ ನ್ಯಾಯಪೀಠ ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ, ನ್ಯಾಯ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ತಾನು ಇನ್ನು ಮುಂದೆ ಕರ್ತವ್ಯಕ್ಕೆ ಗೈರು ಹಾಜರಾಗುವುದಿಲ್ಲ ಎಂದು ಉದ್ಯೋಗಿ ಮುಚ್ಚಳಿಕೆ ಬರೆದುಕೊಟ್ಟ ಹೊರತಾಗಿಯೂ ನೌಕರ ಕಿರಣ್ ಅನಧಿಕೃತ ರಜೆ ಮಾಡಿದ್ದ ಹಿನ್ನೆಲೆಯಲ್ಲಿ ಆತನನ್ನು 2014ರ ಜನವರಿ 3ರಂದು ಸೇವೆಯಿಂದ ವಜಾ ಮಾಡಲಾಗಿತ್ತು.
ಕೆಪಿಟಿಸಿಎಲ್‌ನ ಈ ವಜಾ ಆದೇಶದ ವಿರುದ್ಧ ಕಿರಣ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಏಕಸದಸ್ಯ ಪೀಠ ಕೆಪಿಟಿಸಿಎಲ್‌ನ ಆದೇಶವನ್ನು ರದ್ದುಗೊಳಿಸಿ ನೌಕರ ಕಿರಣ್‌ನನ್ನು ಮರುನೇಮಕ ಮಾಡುವಂತೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ KPTCL ಮೇಲ್ಮನವಿ ಸಲ್ಲಿಸಿತ್ತು.
ಉದ್ಯೋಗ ಬದುಕಿಗೆ ಅಮೂಲ್ಯ. ಯಾರೂ ಉದ್ಯೋಗ ಬಿಡಲು ಬಯಸಲಾರರು. ಕೆಪಿಟಿಸಿಎಲ್ ಸರ್ಕಾರಿ ಸಂಸ್ಥೆಯಾಗಿದ್ದು, ಅದು ನ್ಯಾಯಯುತವಾಗಿ ವರ್ತಿಸಬೇಕು ಎಂದಿರುವ ನ್ಯಾಯಪೀಠ, ಏಕಸದಸದ್ಯ ಪೀಠದ ಆದೇಶಕ್ಕೆ ಮಧ್ಯಪ್ರವೇಶ ಮಾಡುವುದು ಸೂಕ್ತವಲ್ಲ ಎಂದು ಹೇಳಿದೆ.
ಪ್ರಕರಣದ ಪ್ರತಿವಾದಿ ಕಿರಣ್ ಅವರು ಉದ್ದೇಶಪೂರ್ವಕವಾಗಿ ದೀರ್ಘಾವಧಿ ರಜೆ ಹಾಕಿಲ್ಲ. ಮತ್ತು ಆ ದೀರ್ಘಕಾಲೀನ ರಜೆಗೆ ಅವರು ಸೂಕ್ತ ಕಾರಣವನ್ನು ನೀಡಿದ್ದಾರೆ. ಹಾಗಾಗಿ, ಅವರನ್ನು ಸೇವೆಗೆ ಮರು ನೇಮಕ ಮಾಡಿ ಆದೇಶ ಹೊರಡಿಸಿರುವುದು ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಹೇಳಿದೆ.
2008ರಲ್ಲಿ ಕಿರಣ್ ಅವರು ಸ್ಟೇಷನ್ ಅಟೆಂಡರ್ ಆಗಿ ಕೆಪಿಟಿಸಿಎಲ್‌ನಲ್ಲಿ ಸೇವೆ ಆರಂಭಿಸಿದರು. ಆನಂತರ 2011ರ ಬಳಿಕ ಅವರು ಅನುಮತಿ ಪಡೆಯದೇ ಕರ್ತವ್ಯಕ್ಕೆ ಹಾಜರಾಗುತ್ತಿರಲಿಲ್ಲ. ಒಟ್ಟಾರೆ 632 ದಿನಗಳ ಕಾಲ ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. 2012ರ ಆಗಸ್ಟ್ 24ರಲ್ಲಿ ಅವರು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದು, ಅದರಲ್ಲಿ ಅವರು ತಾವು ಇನ್ನು ಮುಂದೆ ಕರ್ತವ್ಯಕ್ಕೆ ಗೈರುಹಾಜರಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆ ಬಳಿಕವೂ ಅನಧಿಕೃತ ರಜೆ ಹಾಕುವುದನ್ನು ಮುಂದುವರಿಸಿದರು. ಇದರ ಪರಿಣಾಮ 2014ರ ಜನವರಿ 3ರಂದು ಕಿರಣ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.
ಕಾರ್ಮಿಕ ನ್ಯಾಯಾಲಯ
ಈ ಅದೇಶವನ್ನು ಪ್ರಶ್ನಿಸಿ ಬಾಧಿತ ವ್ಯಕ್ತಿಯಾಗಿದ್ದ ಕಿರಣ್ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಾವು ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ರಜೆ ಹಾಕಿಲ್ಲ. ತಾವು ಮಾನಸಿಕ ಖಿನ್ನತೆಯ ಖಾಯಿಲೆಯಿಂದ ಬಳಲುತ್ತಿದ್ದು, ನಿರಂತರ ಚಿಕಿತ್ಸೆಯಲ್ಲಿ ಇದ್ದೆ. ಹಲವು ಬಾರಿ ಮನೆ ತೊರೆದಿದ್ದು, ಮನೆಯವರಿಗೆ ತನ್ನನ್ನು ಪತ್ತೆ ಮಾಡಲು ಕಷ್ಟವಾಗಿದೆ ಎಂದು ವಾದಿಸಿದ ಕಿರಣ್, ವೈದ್ಯಕೀಯ ಚಿಕಿತ್ಸೆ ಪಡೆದಿರುವ ದಾಖಲೆಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇದನ್ನು ಪುರಸ್ಕರಿಸಿದ ಕಾರ್ಮಿಕ ನ್ಯಾಯಾಲಯವು 2019ರ ಮಾರ್ಚ್ 21ರಂದು ಕೆಪಿಟಿಸಿಎಲ್ ಆದೇಶವನ್ನು ಬದಿಗೆ ಸರಿಸಿತ್ತು. ಕಿರಣ್ ಅವರು ಹಿಂದಿನ ವೇತನಕ್ಕೆ ಅರ್ಹರಲ್ಲ. ಆದರೆ, ಅವರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಆದೇಶ ನೀಡಿತು.
ಇದನ್ನು ಪ್ರಶ್ನಿಸಿ ಕೆಪಿಟಿಸಿಎಲ್ ಹೈಕೋರ್ಟ್ ಮೊರೆ ಹೋಗಿತ್ತು.
ಪ್ರಕರಣ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(KPTCL) Vs ಕಿರಣ್
ಕರ್ನಾಟಕ ಹೈಕೋರ್ಟ್, WA 217/2023 Dated 30-10-2023