-->
ಬಂಧಿತ ಪೊಲೀಸರ ಬಿಡುಗಡೆ, ವಕೀಲರ ವಿರುದ್ಧ ಪ್ರಕರಣ: ಪ್ರತಿಭಟನೆ ಕೈಬಿಟ್ಟ ಪೊಲೀಸರು!

ಬಂಧಿತ ಪೊಲೀಸರ ಬಿಡುಗಡೆ, ವಕೀಲರ ವಿರುದ್ಧ ಪ್ರಕರಣ: ಪ್ರತಿಭಟನೆ ಕೈಬಿಟ್ಟ ಪೊಲೀಸರು!

ಬಂಧಿತ ಪೊಲೀಸರ ಬಿಡುಗಡೆ, ವಕೀಲರ ವಿರುದ್ಧ ಪ್ರಕರಣ: ಪ್ರತಿಭಟನೆ ಕೈಬಿಟ್ಟ ಪೊಲೀಸರು!





ಚಿಕ್ಕಮಗಳೂರಿನ ವಕೀಲ ಪ್ರೀತಮ್ ಮೇಲಿನ ಪೊಲೀಸರ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸರು ಮತ್ತು ವಕೀಲರ ನಡುವಿನ ಕಾನೂನು ಸಮರ ಕ್ಷಣಕ್ಷಣಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.



ಪೊಲೀಸ್ ಸಿಬ್ಬಂದಿಯೇ ಕರ್ತವ್ಯ ತೊರೆದು ಇಡೀ ರಾತ್ರಿ ಪ್ರತಿಭಟನೆ ನಡೆಸಿದ್ದು, ಬಂಧಿಸಲಾಗಿದ್ದ ಪೊಲೀಸ್ ಕಾನ್ಸ್‌ಟೆಬಲ್‌ ಗುರುಪ್ರಸಾದ್ ಅವರು ಬಿಡುಗಡೆಗೊಂಡಿದ್ದು, ವಕೀಲರ ವಿರುದ್ಧ ಮೊಕದ್ದಮೆ ದಾಖಲುಗೊಳಿಸಲಾಗಿದೆ. 


ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಪ್ರತಿಭಟನಾ ನಿರತ ಪೊಲೀಸರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.


ಬೈಕ್ ಚಾಲನೆ ವೇಳೆ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣಕ್ಕೆ ವಕೀಲರಾದ ಪ್ರೀತಮ್ ಅವರ ಮೇಲೆ ಗುರುವಾರ ರಾತ್ರಿ ಪೊಲೀಸರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಪೂಜಾರಿ, ಎಎಸ್‌ಐ ರಾಮಪ್ಪ, ಮುಖ್ಯ ಕಾನ್ಸ್‌ಟೆಬಲ್ ಶಶಿಧರ್, ಕಾನ್ಸ್‌ಟೆಬಲ್‌ಗಳಾದ ಗುರುಪ್ರಸಾದ್, ಬಿ.ಕೆ. ನಿಖಿಲ್, ವಿ.ಟಿ. ಯುವರಾಜ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಸಸ್ಪೆಂಡ್ ಮಾಡಿದ್ದರು.


ಆರೋಪಿ ಪೊಲೀಸರನ್ನು ಬಂಧಿಸಬೇಕು ಎಂದು ವಕೀಲರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ತ್ವರಿತ ವಿಚಾರಣೆಯನ್ನು ನಡೆಸಿದ್ದರು.


ಇನ್ನೊಂದೆಡೆ, ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿಯ ಕುಟುಂಬದ ಸದಸ್ಯರು ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದರು. ತಮಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಪೊಲೀಸ್ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದರು.




ಕಾನ್ಸ್‌ಟೆಬಲ್ ಗುರುಪ್ರಸಾದ್ ಅವರನ್ನು ಪೊಲೀಸರು ಬಂಧಿಸಿರುವ ಸುದ್ದಿ ತಿಳಿದ ಪೊಲೀಸ್ ಸಿಬ್ಬಂದಿಯ ಕುಟುಂಬದ ಸದಸ್ಯರು ಮತ್ತು ಪೊಲೀಸರು ನೂರಾರು ಸಂಖ್ಯೆಯಲ್ಲಿ ನಗರ ಠಾಣೆಯ ಮುಂದೆ ಸೇರಿ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಸಮವಸ್ತ್ರದಲ್ಲೇ ಧರಣಿ ನಡೆಸಿದರು. ಪೊಲೀಸ್ ಅಧಿಕಾರಿಗಳ ಕಿವಿಮಾತಿಗೂ ಜಗ್ಗಲಿಲ್ಲ.


ವಕೀಲ ಪ್ರೀತಮ್ ಪೊಲೀಸರ ಕಪಾಳಕ್ಕೆ ಹೊಡೆದಿದ್ದಾರೆ. ಸುಧಾರಕ್ ಮತ್ತು ಮಹೇಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಬಂಧಿತ ಪೊಲೀಸ್ ಸಿಬ್ಬಂದಿ ಗುರುಪ್ರಸಾದ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು.


ಪೊಲೀಸ್ ಕೆಲಸದಲ್ಲಿ ಇರುವ ಕಾರಣಕ್ಕೆ ಎಲ್ಲ ಅನ್ಯಾಯವನ್ನು ಸಹಿಸಬೇಕೇ..? ನಮಗೂ ನ್ಯಾಯಬೇಕು. ನ್ಯಾಯ ಸಿಗುವ ವರೆಗೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.


ಪಶ್ಚಿಮ ವಲಯದ ಐಜಿಪಿ ಚಂದ್ರಗುಪ್ತ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪೊಲೀಸರು ಮತ್ತು ಅವರ ಕುಟುಂಬದ ಸದಸ್ಯರ ಮನವೊಲಿಸಿದರು. ಆದರೆ, ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳುವ ವ್ಯವಧಾನವನ್ನು ಪೊಲೀಸರು ತೋರಿಸಲಿಲ್ಲ. ಜಿಲ್ಲೆಯ ವಿವಿಧ ಕಡೆಗಳಿಂದ ಪೊಲೀಸರು ಮತ್ತು ಅವರ ಕುಟುಂಬ ಸದಸ್ಯರು ತಂಡೋಪತಂಡವಾಗಿ ಬಂದು ಪ್ರತಿಭಟನೆಗೆ ಕೈಜೋಡಿಸಿದರು. ಒಂದು ಹಂತದಲ್ಲಿ ತಮ್ಮ ಪೊಲೀಸ್ ಲಾಠಿಗಳನ್ನು ಬೆಂಕಿಗೆ ಹಾಕಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.



ಬಳಿಕ ಕಾನ್ಸ್‌ಟೆಬಲ್ ಗುರುಪ್ರಸಾದ್ ಅವರನ್ನು ಧರಣಿ ಸ್ಥಳಕ್ಕೆ ಕರೆತಂದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತರ ಮುಂದೆ ಬಿಡುಗಡೆ ಮಾಡಿದರು. ಆದರೂ ಪೊಲೀಸರು ಮಾತ್ರ ತಮ್ಮ ಪ್ರತಿಭಟನೆಯನ್ನು ಕೈಬಿಡಲಿಲ್ಲ. ಪೊಲೀಸರ ಪ್ರತಿಭಟನಾ ಹೋರಾಟ ಬೆಳಿಗ್ಗಿನ ಜಾವದ ತನಕವೂ ಮುಂದುವರಿಯಿತು.


ಪೊಲೀಸರಿಗೆ ಕಪಾಳಕ್ಕೆ ಹೊಡೆದ ಪ್ರೀತಮ್ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಪಟ್ಟುಹಿಡಿದರು.


ಅಂತಿಮವಾಗಿ ಪ್ರೀತಮ್ ವಿರುದ್ಧ ಪ್ರತ್ಯೇಕ ಮೊಕದ್ದಮೆ ಮತ್ತು ಏಳು ವಕೀಲರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿದ ಬಳಿಕ ಪೊಲೀಸರು ಮತ್ತು ಅವರ ಕುಟುಂಬ ವರ್ಗ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.

.

Ads on article

Advertise in articles 1

advertising articles 2

Advertise under the article