-->
ನೌಕರನ ವಿರುದ್ಧ FIR ದಾಖಲಾಗಿದೆ ಎಂಬ ಕಾರಣಕ್ಕೆ ಮುಂಭಡ್ತಿ ನಿರಾಕರಿಸಲಾಗದು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ನೌಕರನ ವಿರುದ್ಧ FIR ದಾಖಲಾಗಿದೆ ಎಂಬ ಕಾರಣಕ್ಕೆ ಮುಂಭಡ್ತಿ ನಿರಾಕರಿಸಲಾಗದು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ನೌಕರನ ವಿರುದ್ಧ FIR ದಾಖಲಾಗಿದೆ ಎಂಬ ಕಾರಣಕ್ಕೆ ಮುಂಭಡ್ತಿ ನಿರಾಕರಿಸಲಾಗದು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು





ಕ್ರಿಮಿನಲ್ ದೂರಿನ ಆಧಾರದಲ್ಲಿ ಸರಕಾರಿ ನೌಕರನ ವಿರುದ್ಧ ಎಫ್ಐಆರ್ / ಪ್ರಥಮ ವರ್ತಮಾನ ವರದಿ ದಾಖಲಾಗಿದೆ ಎಂಬ ಕಾರಣಕ್ಕೆ ಆತನಿಗೆ ಸಿಗತಕ್ಕ ಭಡ್ತಿಯನ್ನು ನಿರಾಕರಿಸುವಂತಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಎಸ್. ಆರ್. ಕೃಷ್ಣಕುಮಾರ್ ಮತ್ತು ಜಿ. ಬಸವರಾಜ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು "ಜಯಶ್ರೀ Vs ಕರ್ನಾಟಕ ಸರಕಾರ ಮತ್ತು ಇತರರು" ಪ್ರಕರಣದಲ್ಲಿ ದಿನಾಂಕ 5.10.2023 ರಂದು ಈ ತೀರ್ಪು ನೀಡಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.

ಜಯಶ್ರೀ ಎಂಬವರು ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯಲ್ಲಿ ದಿನಾಂಕ 16-3-2005 ರಿಂದ ಸೇವೆ ಸಲ್ಲಿಸುತ್ತಿದ್ದರು. ಕ್ರಿಮಿನಲ್ ದೂರಿನ ಆಧಾರದಲ್ಲಿ ಅವರ ವಿರುದ್ಧ ಅಪರಾಧ ಪ್ರಕರಣ ಸಂಖ್ಯೆ 34/2017 ದಾಖಲಾಗಿತ್ತು.


ಜಯಶ್ರೀ ಅವರನ್ನು ಒಳಗೊಂಡಂತೆ ಅರ್ಹ ಅಭ್ಯರ್ಥಿಗಳನ್ನು ಮುಂಭಡ್ತಿಗೆ ಪರಿಗಣಿಸುವ ಸಲುವಾಗಿ ದಿನಾಂಕ 20.12.2021ರಂದು ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆಯು ಜರಗಿದ್ದು ಸದರಿ ಸಮಿತಿಯು ಶ್ರೀಮತಿ ಜಯಶ್ರೀ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಸಂಖ್ಯೆ 34/2017 ದಾಖಲಾಗಿರುವುದರಿಂದ ಅವರಿಗೆ ಬಡ್ತಿಯನ್ನು ನಿರಾಕರಿಸಿತ್ತು. ಸದರಿ ಸಮಿತಿ ಸಭೆಯು ನಡೆದ ಬಳಿಕ ದಿನಾಂಕ 1.2.2022 ರಂದು ಜಯಶ್ರೀ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.


ತನಗೆ ಪದೋನ್ನತಿ ನೀಡುವಂತೆ ಕೋರಿ ದಿನಾಂಕ 13.5.2022 ರಂದು ಜಯಶ್ರೀ ಧಾರವಾಡ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ದಿನಾಂಕ 5.7.2022 ರಂದು ಸದರಿ ಮನವಿಯನ್ನು ತಿರಸ್ಕರಿಸಿ ಅರ್ಜಿದಾರರಿಗೆ ಹಿಂಬರಹ ನೀಡಲಾಯಿತು. ಸದರಿ ಹಿಂಬರಹವನ್ನು ರದ್ದುಪಡಿಸಿ ತನ್ನನ್ನು ಭಡ್ತಿಗೆ ಪರಿಗಣಿಸುವಂತೆ ನೇಮಕಾತಿ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಜಯಶ್ರೀ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆ.ಎ‌.ಟಿ.)ಅರ್ಜಿ ಸಂಖ್ಯೆ 10911/2022 ಅನ್ನು ದಾಖಲಿಸಿದರು.


ಸದರಿ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯು ದಿನಾಂಕ 30.3.2023ರಂದು ಹೊರಡಿಸಲಾದ ತನ್ನ ಆದೇಶದಲ್ಲಿ ತಿರಸ್ಕರಿಸಿತು. ಕೆಎಟಿಯ ಆದೇಶದಿಂದ ಬಾಧಿತರಾದ ಶ್ರೀಮತಿ ಜಯಶ್ರೀ ಅವರು ಮಾನ್ಯ ಕರ್ನಾಟಕ ಹೈಕೋರ್ಟಿನಲ್ಲಿ ಅರ್ಜಿ ಸಂಖ್ಯೆ 102595/2023 ದಾಖಲಿಸಿದರು.


ರಿಟ್ ಅರ್ಜಿದಾರರ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ಸರಕಾರಿ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿ ಇರುವುದು ಆತನಿಗೆ ಮುಂಭಡ್ತಿ ನೀಡದಿರುವುದಕ್ಕೆ ಆಧಾರವಾಗುವುದಿಲ್ಲ. ದಿನಾಂಕ 14.3.1993 ರಂದು ಕರ್ನಾಟಕ ರಾಜ್ಯ ಸರಕಾರವು ಸುತ್ತೋಲೆ ಹೊರಡಿಸಿ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆ ನಡೆಯುವ ದಿನದಂದು ಸರಕಾರಿ ನೌಕರರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗದಿದ್ದರೆ ಕೇವಲ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಎಂಬ ಕಾರಣಕ್ಕೆ ಭಡ್ತಿ ನಿರಾಕರಿಸಬಾರದು. ಮುಚ್ಚಿದ ಲಕೋಟೆ ಪ್ರಕ್ರಿಯೆ ಅಂದರೆ ಭಡ್ತಿ ನಿರ್ಣಯವನ್ನು ಮುಚ್ಚಿದ ಲಕೋಟೆಯಲ್ಲಿ ಇಡುವ ಕ್ರಮ ಅನುಸರಿಸಬಾರದು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ನಂತರ ಮುಚ್ಚಿದ ಲಕೋಟೆ ಪ್ರಕ್ರಿಯೆಯ ವಿಧಾನವನ್ನು ಅಳವಡಿಸಬೇಕಾಗುತ್ತದೆ.


ರಿಟ್ ಅರ್ಜಿದಾರರ ಪರ ವಕೀಲರು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಭಾರತ ಸರಕಾರ Vs ಕೆ.ವಿ.ಜಾನಕಿರಾಮನ್ ಹಾಗೂ ಭಾರತ ಸರಕಾರ Vs ಅನಿಲ್ ಕುಮಾರ್ ಸರ್ಕಾರ್ ಈ ಪ್ರಕರಣಗಳಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿ, ಕೇವಲ ಕ್ರಿಮಿನಲ್ ದೂರು ದಾಖಲಾಗಿದೆ ಎಂಬ ಕಾರಣಕ್ಕೆ ನೌಕರನಿಗೆ ಮುಂಭಡ್ತಿಯನ್ನು ನಿರಾಕರಿಸುವಂತಿಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದ ಉಲ್ಲೇಖಿತ ತೀರ್ಪುಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಮಾನ್ಯ ನ್ಯಾಯ ಪೀಠದ ಅವಗಾಹನೆಗೆ ತಂದರು.


ಎದುರುದಾರರ ಪರವಾಗಿ ಪ್ರಾಜ್ಞ ಸರಕಾರಿ ವಕೀಲರು ತಮ್ಮ ವಾದವನ್ನು ಮಂಡಿಸಿ. ಮಾನ್ಯ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯು ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವುದು ನಿಯಮಾನುಸಾರ ಸಮರ್ಪಕವಾಗಿದೆ. ಕರ್ನಾಟಕ ರಾಜ್ಯ ಸರಕಾರವು ಸದರಿ ತೀರ್ಪನ್ನು ಬೆಂಬಲಿಸುತ್ತದೆ. ಅರ್ಜಿದಾರರು ಸಲ್ಲಿಸಿದ ರಿಟ್ ನಲ್ಲಿ ಪುರಸ್ಕರಿಸಲ್ಪಡುವ ಯಾವುದೇ ಅಂಶಗಳಿಲ್ಲ. ಆದುದರಿಂದ ಅರ್ಜಿಯನ್ನು ತಿರಸ್ಕರಿಸಬೇಕೆಂದು ಪ್ರಾರ್ಥಿಸಿದರು.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ನ್ಯಾಯಪೀಠವು ದಿನಾಂಕ 14.7.1993 ರ ಸರಕಾರಿ ಸುತ್ತೋಲೆಯಲ್ಲಿನ ಅಂಶಗಳನ್ನು, ದಿನಾಂಕ 20.12.2021ರಲ್ಲಿ ಜರಗಿದ ಇಲಾಖಾ ಪದೋನ್ನತಿ ಸಮಿತಿಯ ಸಭೆಯಲ್ಲಿ ಪರಿಗಣಿಸಿಲ್ಲ. ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗದಿದ್ದರೂ ಕೇವಲ ಕ್ರಿಮಿನಲ್ ದೂರು ವಿಚಾರಣೆಗೆ ಬಾಕಿ ಇದೆ ಎಂಬ ಕಾರಣಕ್ಕಾಗಿ ಸರಕಾರಿ ನೌಕರರಿಗೆ ಬಡ್ತಿ ನಿರಾಕರಿಸಲಾಗದು ಎಂಬುದಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ಅಂಶಗಳನ್ನು ಕೂಡ ಕೆಎಟಿ ತನ್ನ ಆದೇಶದಲ್ಲಿ ಪರಿಗಣಿಸಿಲ್ಲ. ಸಾಮಾನ್ಯವಾಗಿ ಕ್ರಿಮಿನಲ್ ದೂರು ನೀಡಿದ ಕೂಡಲೇ ಪ್ರಥಮ ವರ್ತಮಾನ ವರದಿ ದಾಖಲಿಸಲಾಗುವುದು. ಪ್ರಕರಣದ ತನಿಖೆಯ ಬಳಿಕ ಆರೋಪ ಕುರಿತು ಸೂಕ್ತ ಸಾಕ್ಷಾಧಾರಗಳು ಇದ್ದಲ್ಲಿ ಮಾತ್ರ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗುವುದು. ಒಂದು ವೇಳೆ ಆರೋಪಗಳು ನಿರಾಧಾರವಾಗಿದ್ದಲ್ಲಿ ಬಿ ವರದಿ ಸಲ್ಲಿಸಲಾಗುವುದು. ಆದುದರಿಂದ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಳಿಕವೇ ಮುಚ್ಚಿದ ಲಕೋಟೆ ಪ್ರಕ್ರಿಯೆಯ ವಿಧಾನವನ್ನು ಅಳವಡಿಸಬೇಕಾಗುತ್ತದೆ.


ರಿಟ್ ಅರ್ಜಿದಾರರಿಗೆ ಸಂಬಂಧಪಟ್ಟಂತೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ಮೊದಲು ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆ ನಡೆದಿರುವುದನ್ನು ನ್ಯಾಯ ಪೀಠವು ಗಮನಿಸಿತು. ಹಾಗೂ ದಿನಾಂಕ 14.7.1993 ರ ಸರಕಾರಿ ಸುತ್ತೋಲೆ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯಗಳು ನೀಡಿದ ತೀರ್ಪುಗಳ ಬೆಳಕಿನಲ್ಲಿ ಕೆಎಟಿ ದಿನಾಂಕ 30.3.2023 ರಂದು ಹೊರಡಿಸಿದ ಆದೇಶ ರದ್ದುಪಡಿಸಲು ಅರ್ಹವಾಗಿದೆ ಎಂದು ತೀರ್ಮಾನಿಸಿ ರಿಟ್ ಅರ್ಜಿಯನ್ನು ಪುರಸ್ಕರಿಸಿತು


ತಮಗೆ ಮುಂಬಡ್ತಿ ನೀಡುವಂತೆ ಕೋರಿ ದಿನಾಂಕ 13.5.2022 ರಂದು ಶ್ರೀಮತಿ ಜಯಶ್ರೀ ಅವರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿ ಧಾರವಾಡದ ಜಿಲ್ಲಾಧಿಕಾರಿಯವರು ದಿನಾಂಕ 5.7.2022 ರಂದು ನೀಡಿದ ಹಿಂಬರಹವನ್ನು ಎತ್ತಿ ಹಿಡಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿತು. ಜೊತೆಗೆ ಮುಂದಿನ ಮೂರು ತಿಂಗಳೊಳಗೆ ಎಲ್ಲಾ ಸೇವಾ ಸೌಲಭ್ಯಗಳೊಂದಿಗೆ ಅರ್ಜಿದಾರರನ್ನು ಪ್ರಥಮ ದರ್ಜೆ ಸಹಾಯಕ/ಕಂದಾಯ ನಿರೀಕ್ಷಕರ ಹುದ್ದೆಗೆ ಪರಿಗಣಿಸಬೇಕು ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ




Ads on article

Advertise in articles 1

advertising articles 2

Advertise under the article