ಕೆಳದರ್ಜೆಯ ಅಧಿಕಾರಿಗೆ ಉನ್ನತ ಹುದ್ದೆ: ಸಿಎಂ ಸಹಿ ಇದ್ದರೆ ಸಾಲದು ಎಂದ ಹೈಕೋರ್ಟ್
ಕೆಳದರ್ಜೆಯ ಅಧಿಕಾರಿಗೆ ಉನ್ನತ ಹುದ್ದೆ: ಸಿಎಂ ಸಹಿ ಇದ್ದರೆ ಸಾಲದು ಎಂದ ಹೈಕೋರ್ಟ್
ಉನ್ನತ ಹುದ್ದೆಗಳಿಗೆ ಕೆಳ ದರ್ಜೆಯ ಅಧಿಕಾರಿಗಳನ್ನು ನೇಮಿಸಲು ಕೇವಲ ಮುಖ್ಯಮಂತ್ರಿಗಳ ಸಹಿ ಇದ್ದರೆ ಸಾಲದು. ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕೆಳ ದರ್ಜೆಯ ಅಧಿಕಾರಿಗಳನ್ನು ಉನ್ನತ ದರ್ಜೆಯ ಹುದ್ದೆಗೆ ನೇಮಕ ಮಾಡುವ ಸಂಬಂಧ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾ. ಕೆ. ಸೋಮಶೇಖರ್ ಮತ್ತು ನ್ಯಾ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ತಮ್ಮ ವರ್ಗಾವಣೆ ಪ್ರಶ್ನಿಸಿ ಕೆಎಎಸ್ ಅಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪ್ರಕರಣದ ವಿವರ
ಡಾ. ಪ್ರಜ್ಞಾ ಅಮ್ಮೆಂಬಳ ಅವರು 2006ರಲ್ಲಿ ತಹಶೀಲ್ದಾರ್ ಆಗಿ ನೇರ ನೇಮಕಾತಿ ಹೊಂದಿದ್ದರು. 2015ರಲ್ಲಿ ಅವರು ಕೆಎಎಸ್ ಕಿರಿಯ ಶ್ರೇಣಿಗೆ ಬಡ್ತಿ ಪಡೆದಿದ್ದರು. 2021ರಲ್ಲಿ ಅವರು ಕೆಎಎಸ್ ಹಿರಿಯ ಶ್ರೇಣಿಗೆ ಪದೋನ್ನತಿ ಹೊಂದಿದ್ದರು.
ಪ್ರಜ್ಞಾ ಅವರನ್ನು 2023ರಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಆ ಹೆಚ್ಚುವರಿ ನಿರ್ದೇಶಕ ಸ್ಥಾನದಲ್ಲಿ ಅಧಿಕಾರಿಯಾಗಿ ನಿಯುಕ್ತರಾಗಿದ್ದ ಪಾತರಾಜು ಅವರು ಈ ವರ್ಗಾವಣೆಯನ್ನು ಪ್ರಶ್ನಿಸಿ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮೆಟ್ಟಿಲೇರಿದ್ದರು. ಸಿಎಂ ಪೂರ್ವಾನುಮತಿ ಇಲ್ಲದೆ ವರ್ಗಾವಣೆ ಮಾಡಲಾಗಿದೆ ಎಂದು ಅವರು ವಾದಿಸಿದ್ದರು.
ರಾಜ್ಯ ಸರ್ಕಾರ ಸಿಎಂ ಅನುಮೋದನೆ ಪಡೆದೇ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿತ್ತು. ಆದರೂ, ಪ್ರಜ್ಞಾ ಆ ಹೆಚ್ಚುವರಿ ನಿರ್ದೇಶಕರ ಹುದ್ದೆಗೆ ಅರ್ಹರಲ್ಲ ಎಂದು ಕೆಎಟಿ ವರ್ಗಾವಣೆಯ ಆದೇಶವನ್ನು ರದ್ದುಗೊಳಿಸಿತ್ತು.
ಕೆಎಟಿಯ ಈ ಆದೇಶವನ್ನು ಪ್ರಶ್ನಿಸಿ ಪ್ರಜ್ಞಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು.