ಸುಪ್ರೀಂ ನ್ಯಾಯಮೂರ್ತಿ ಸ್ಥಾನಕ್ಕೆ ವರಾಳೆ, ಕರ್ನಾಟಕ ಸಿಜೆ ಹುದ್ದೆಗೆ ಪಿ.ಎಸ್. ದಿನೇಶ್ ಕುಮಾರ್ ಹೆಸರು ಶಿಫಾರಸು
ಸುಪ್ರೀಂ ನ್ಯಾಯಮೂರ್ತಿ ಸ್ಥಾನಕ್ಕೆ ವರಾಳೆ, ಕರ್ನಾಟಕ ಸಿಜೆ ಹುದ್ದೆಗೆ ಪಿ.ಎಸ್. ದಿನೇಶ್ ಕುಮಾರ್ ಹೆಸರು ಶಿಫಾರಸು
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.
ಅದೇ ಸಂದರ್ಭದಲ್ಲಿ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ಹೆಸರನ್ನು ಕೊಲೀಜಿಯಂ ಶಿಫಾರಸು ಮಾಡಿದೆ.
ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ಕೊಲೀಜಿಯಂ ಈ ಶಿಫಾರಸ್ಸು ಮಾಡಿದೆ.
ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ
ವರಾಳೆ ಅವರು ದಲಿತ ಸಮುದಾಯಕ್ಕೆ ಸೇರಿದ್ದು, ಕೇಂದ್ರ ಸರ್ಕಾರವು ಕೊಲೀಜಿಯಂ ಶಿಫಾರಸ್ಸನ್ನು ಅನುಮೋದಿಸಿದರೆ, ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಸಮುದಾಯದ ಮೂರನೇ ನ್ಯಾಯಮೂರ್ತಿಯಾಗಿ ವರಾಳೆ ಗುರುತಿಸಿಕೊಳ್ಳಲಿದ್ದಾರೆ.
ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಸಿ.ಟಿ. ರವಿಕುಮಾರ್ ಅವರು ಈಗ ಕರ್ತವ್ಯನಿರತರಾಗಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿರುತ್ತಾರೆ.
23 ವರ್ಷಗಳ ಕಾಲ ವಕೀಲರಾಗಿ ಕಾನೂನು ವೃತ್ತಿಯ ಸೇವೆ ಸಲ್ಲಿಸಿರುವ ವರಾಳೆ ಅವರು ಅಖಿಲ ಭಾರತ ಜ್ಯೇಷ್ಟತೆಯಲ್ಲಿ ಆರನೇಯವರಾಗಿ ಗುರುತಿಸಿಕೊಂಡಿದ್ದಾರೆ.
ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರ ಹಿರಿತನದಲ್ಲಿ ಅವರು ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ ಎಂಬುದನ್ನು ಕೊಲೀಜಿಯಂ ವಿಶೇಷವಾಗಿ ಉಲ್ಲೇಖಿಸಿದೆ.
ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್
2015ರಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ದಿನೇಶ್ ಕುಮಾರ್ 2024ರ ಫೆಬ್ರವರಿ 24ರಂದು ನಿವೃತ್ತರಾಗಲಿದ್ದಾರೆ.