-->
ಲಂಚ ಪಡೆದವರನ್ನು ವಿಚಾರಣೆಗೆ ಒಳಪಡಿಸುವಂತೆ ಲಂಚ ನೀಡಿದವರನ್ನೂ ವಿಚಾರಣೆಗೆ ಒಳಪಡಿಸಬೇಕು- ಹೈಕೋರ್ಟ್ ಮಹತ್ವದ ತೀರ್ಪು

ಲಂಚ ಪಡೆದವರನ್ನು ವಿಚಾರಣೆಗೆ ಒಳಪಡಿಸುವಂತೆ ಲಂಚ ನೀಡಿದವರನ್ನೂ ವಿಚಾರಣೆಗೆ ಒಳಪಡಿಸಬೇಕು- ಹೈಕೋರ್ಟ್ ಮಹತ್ವದ ತೀರ್ಪು

ಲಂಚ ಪಡೆದವರನ್ನು ವಿಚಾರಣೆಗೆ ಒಳಪಡಿಸುವಂತೆ ಲಂಚ ನೀಡಿದವರನ್ನೂ ವಿಚಾರಣೆಗೆ ಒಳಪಡಿಸಬೇಕು- ಹೈಕೋರ್ಟ್ ಮಹತ್ವದ ತೀರ್ಪು





ಸಾರ್ವಜನಿಕ ಅಧಿಕಾರಿ ಲಂಚ ಪಡೆಯುವುದು ಅಪರಾಧ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಲಂಚ ನೀಡುವುದು ಸಹ ಅಷ್ಟೇ ಶಿಕ್ಷಾರ್ಹ ಅಪರಾಧ ಎಂಬುದು ಕೆಲವರಿಗೆ ತಿಳಿದಿಲ್ಲ.


ಲಂಚ ಪಡೆಯುವವರನ್ನು ವಿಚಾರಣೆಗೆ ಒಳಪಡಿಸುವಂತೆ ಲಂಚ ನೀಡುವವರನ್ನು ವಿಚಾರಣೆಗೆ ಒಳಪಡುವಂತೆ ಮಾಡುವ ಮೂಲಕ ಭ್ರಷ್ಟಾಚಾರದ ಹಾವಳಿಗೆ ಕಡಿವಾಣ ಹಾಕಬೇಕಾಗಿದೆ ಎಂಬುದಾಗಿ ಮಾನ್ಯ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ನ್ಯಾಯಪೀಠವು "ಕೈಲಾಶ್ ರಾಜ್ ಮತ್ತಿತರರು VS ಕರ್ನಾಟಕ ಸರಕಾರ" ಪ್ರಕರಣದಲ್ಲಿ ದಿನಾಂಕ 26.6.2023 ರಂದು ಮಹತ್ವದ ತೀರ್ಪನ್ನು ನೀಡಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ ರಾಸಾಯನಿಕ ತೈಲ ಪೂರೈಕೆ ಮಾಡುವುದಕ್ಕೆ ಬಿಲ್ ಪಾವತಿಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಕೆ.ಎಸ್.ಡಿ.ಎಲ್ ಅಧ್ಯಕ್ಷರಾಗಿದ್ದ ಬಿಜೆಪಿಯ ಮಾಜಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ ಸರಕಾರಿ ಅಧಿಕಾರಿಯಾದ ಪ್ರಶಾಂತ್ ಕುಮಾರ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಆರೋಪವಾಗಿದೆ.


ಈ ಸಂದರ್ಭದಲ್ಲಿ ಲಂಚ ನೀಡಲು ತಂದಿದ್ದ ಹಣವು ಲೋಕಾಯುಕ್ತ ಪೊಲೀಸರ ಶೋಧನೆಯ ವೇಳೆ ವಾಣಿಜ್ಯ ಕಂಪನಿಯಾದ ಆರೋಮಾ ಸಂಸ್ಥೆಯ ಉದ್ಯೋಗಿಗಳಾದ ನಿಕೋಲಸ್ ಮತ್ತು ಗಂಗಾಧರ್ ಅವರ ಬಳಿ ದೊರೆತಿತ್ತು. ವಾಣಿಜ್ಯ ಕಂಪನಿಯಾದ ಅರೋಮಾ ಸಂಸ್ಥೆಯ ಉದ್ಯೋಗಿಗಳಾದ ಇಬ್ಬರೂ ತಲಾ 45 ಲಕ್ಷ ರೂಪಾಯಿ ಮೊತ್ತದ 2 ಬ್ಯಾಗುಗಳನ್ನು ಮಾಡಾಳ್ ಅವರ ಪುತ್ರ ಪ್ರಶಾಂತ್ ಅವರ ವೈಯಕ್ತಿಕ ಕಚೇರಿಯಲ್ಲಿ ಇಟ್ಟುಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಈ ಸಂಬಂಧ ಕಂಪನಿಯ ಮಾಲೀಕರು ಮತ್ತು ಉದ್ಯೋಗಿಗಳ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು. ಆದರೆ ಮಾನ್ಯ ಹೈಕೋರ್ಟ್ ಅವರ ಅರ್ಜಿಗಳನ್ನು ಈ ಕೆಳಗಿನ ಕಾರಣಗಳಿಗಾಗಿ ತಿರಸ್ಕರಿಸಿತು.


ಲಂಚ ಪಡೆಯುವವರು ಮತ್ತು ಸ್ವೀಕರಿಸುವವರನ್ನು ಅಭಿಯೋಜನೆ ಒಂದೇ ನೆಲೆಯಲ್ಲಿ ನಿಲ್ಲುವಂತೆ ಮಾಡುವ ರೀತಿಯಲ್ಲಿ 2018 ರ ಜುಲೈ 26ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.


ದೇಶದ ಸಾರ್ವಜನಿಕ ಬದುಕಿನ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ವ್ಯಾಪಿಸಿದ್ದು ಎಲ್ಲೆಡೆಯಲ್ಲೂ ಸಮಸ್ಯೆ ಉಂಟಾಗಿದೆ. ಭ್ರಷ್ಟಾಚಾರ ಸಾಂವಿಧಾನಿಕ ಆಡಳಿತಕ್ಕೆ ಮಾರಕವಾಗಿ ಪರಿಣಮಿಸಿದೆ. ಭ್ರಷ್ಟಾಚಾರ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.


ಲಂಚ ನೀಡುವುದು ಮತ್ತು ಲಂಚ ಪಡೆಯುವುದು ಎರಡೂ ಭಾರತೀಯ ದಂಡ ಸಂಹಿತೆ 1860 ಮತ್ತು ಭ್ರಷ್ಟಾಚಾರ ತಡೆ ಕಾಯಿದೆ (ಪಿಸಿಎ) 1988 ರ ಅಡಿ ಅಪರಾಧಗಳು ಎಂದು ಕರೆಯಲಾಗುತ್ತದೆ.


ಲಂಚ ನೀಡುವುದು ಭ್ರಷ್ಟಾಚಾರ ತಡೆ ಕಾಯಿದೆಯ (ಪಿಸಿಎ) ಸೆಕ್ಷನ್ 12ರ ವ್ಯಾಪ್ತಿಯಲ್ಲಿ ಬರುವ ಶಿಕ್ಷೆ ಅಪರಾಧವಾಗಿದೆ ಲಂಚ ನೀಡುವವರು ಕಾಯ್ದೆಯ ಸೆಕ್ಷನ್ 7 ಅಥವಾ 11ರಡಿಯಲ್ಲಿ ಅಪರಾಧಗಳಿಗೆ ಪ್ರಚೋದನೆ ನೀಡುವವರಾಗಿದ್ದಾರೆ.


ಭಾರತೀಯ ದಂಡ ಸಂಹಿತೆ ಸೆಕ್ಷನ್ 109 ಪ್ರಚೋದನೆಯ ಅಪರಾಧಕ್ಕೆ ಶಿಕ್ಷೆಯನ್ನು ಒದಗಿಸುತ್ತದೆ. ಸೆಕ್ಷನ್ 107 ಪ್ರಚೋದನೆ ಎಂದರೇನು ಎಂಬುದನ್ನು ವ್ಯಾಖ್ಯಾನಿಸುತ್ತದೆ. ಆದುದರಿಂದ ಲಂಚ ನೀಡುವವರು ಮತ್ತು ಲಂಚ ಪಡೆಯುವವರು ಇಬ್ಬರೂ ಪಿಸಿಎ ಸೆಕ್ಷನ್ 12ರ ಪ್ರಕಾರ 3 ವರ್ಷಗಳಿಂದ 7 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು ದಂಡದ ಶಿಕ್ಷೆಗೆ ಹೊಣೆಗಾರರಾಗಿರುತ್ತಾರೆ.


ಲಂಚ ನೀಡುವವರು ಮತ್ತು ಲಂಚ ತೆಗೆದುಕೊಳ್ಳುವವರು ಇಬ್ಬರೂ ಲಂಚವನ್ನು ಕಾನೂನುಬಾಹಿರ ಎಂದು ತಿಳಿದುಕೊಂಡು ಸ್ವೀಕರಿಸಿದರೆ ಅಥವಾ ನೀಡಿದರೆ ಮಾತ್ರ ಅವರ ವಿರುದ್ಧ ಕ್ರಮ ಜರಗಿಸಲಾಗುವುದು. ಸಾರ್ವಜನಿಕ ಸೇವಕರು ಲಂಚದ ಪ್ರಸ್ತಾವವನ್ನು ತಿರಸ್ಕರಿಸಿದರೆ ಲಂಚ ನೀಡಿದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬಹುದು. ಆದುದರಿಂದ ಸಾರ್ವಜನಿಕ ಸೇವಕರು ಲಂಚವನ್ನು ಸ್ವೀಕರಿಸಿದಾಗ ಅಥವಾ ತಿರಸ್ಕರಿಸಿದಾಗ ಮಾತ್ರ ಲಂಚವನ್ನು ನೀಡುವುದು ಮತ್ತು ತೆಗೆದುಕೊಳ್ಳುವುದು ಪಿಸಿಎ ಯ ಸೆಕ್ಷನ್ 24 ರ ಅಡಿಯಲ್ಲಿ ಅಪರಾಧವಾಗುತ್ತದೆ.


ಲಂಚ ನೀಡುವವನಿಗೆ ಲಂಚ ನೀಡುವುದು ಇಷ್ಟವಿಲ್ಲದೆ ಇದ್ದರೂ ತನ್ನ ಕೆಲಸ ಈಡೇರಬೇಕಾದರೆ ಬಲವಂತವಾಗಿ ಆತನಿಂದ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂಬ ಸಂಗತಿಗಳನ್ನು ಲಂಚ ನೀಡುವವನು ಲೋಕಾಯುಕ್ತ ಇಲಾಖೆಗೆ ಮೊದಲೇ ತಿಳಿಸಿದ್ದಲ್ಲಿ ಹಾಗೂ ಆ ಬಳಿಕ ಆತ ಲಂಚ ನೀಡಿದ್ದಲ್ಲಿ ಅದು ಶಿಕ್ಷಾರ್ಹ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ. ಆತನ ವಿರುದ್ಧ ಲಂಚ ನೀಡಿದ ಕಾರಣಕ್ಕಾಗಿ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಹಾಗೆಯೇ ಲಂಚದ ಬೇಡಿಕೆಯನ್ನು ಸಾಬೀತುಪಡಿಸಿದಲ್ಲಿ ಮಾತ್ರ ಪಿಸಿಎ ಕಾಯ್ದೆಯ ಸೆಕ್ಷನ್ 7 ರಡಿ ಲಂಚ ಪಡೆದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಆದರೆ ಈ ಪ್ರಕರಣದಲ್ಲಿ ಲಂಚ ನೀಡುವವರು ಅಕ್ರಮ ಬೇಡಿಕೆಯ ಬಗ್ಗೆ ಲೋಕಾಯುಕ್ತ ಕಚೇರಿಗೆ ಯಾವುದೇ ಮುನ್ಸೂಚನೆಯನ್ನು ನೀಡಿರುವುದಿಲ್ಲ.


ಕೇವಲ ಲಂಚದ ಹಣ ಸಾರ್ವಜನಿಕ ಅಧಿಕಾರಿಯ ಬಳಿ ದೊರೆತಿದೆ ಎಂಬ ಆಧಾರದ ಮೇಲೆ ಆತನ ವಿರುದ್ಧ ಭ್ರಷ್ಟಾಚಾರದ ಆರೋಪದಡಿಯಲ್ಲಿ ದೋಷಾರೋಪಣೆ ಮಾಡಲಾಗುವುದಿಲ್ಲ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸುವುದು ಅತ್ಯಗತ್ಯ ಎಂಬುದನ್ನು ಸುಪ್ರೀಂ ಕೋರ್ಟ್ ಬಿ ಜಯರಾಜ್ ವಿರುದ್ಧ ಆಂಧ್ರಪ್ರದೇಶ ರಾಜ್ಯ ಈ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಹೇಳಿದೆ.


ತಮಗೆ ಜಾಮೀನು ನೀಡುವಂತೆ ಕೋರಿ ಲಂಚ ನೀಡಿದ ಆರೋಪಿಗಳು ಸಲ್ಲಿಸಿದ ಈ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಹಾಗೂ ಲಂಚ ನೀಡಿದ ಬಗ್ಗೆ ಆರೋಪಿಗಳ ನಡುವೆ ನಡೆದ ಸಂಭಾಷಣೆಗಳ ಪುರಾವೆ ಅಭಿಯೋಜನೆಗೆ ದೊರೆತಿವೆ.


ಬ್ರಷ್ಟಾಚಾರ ಇಂದು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಒಂದು ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಭ್ರಷ್ಟಾಚಾರ ವಿವಿಧ ವರ್ಣಗಳು ಮತ್ತು ರೂಪಗಳಲ್ಲಿ ಹೊರಹೊಮ್ಮುತ್ತದೆ. ಸ್ಟೇಟ್ ಆಫ್ ಗುಜರಾತ್ ವಿರುದ್ಧ ಮನ್ಸುಖಭಾಯ್ ಕಾಂಜಿಭಾಯ್ ಶಾ ಈ ತೀರ್ಪಿನಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಖಂಡಿಕೆಯನ್ನು ಉಲ್ಲೇಖಿಸುವುದು ಈ ಸಂದರ್ಭದಲ್ಲಿ ಸೂಕ್ತವಾಗುತ್ತದೆ ಎಂದು ಮಾನ್ಯ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಸುಪ್ರೀಂ ಕೋರ್ಟ್ ಈ ಕೆಳಗಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.


ಬ್ರಷ್ಟಾಚಾರದ ಕಡೆಗೆ ಶೂನ್ಯ ಸಹಿಷ್ಣುತೆಯು ವ್ಯವಸ್ಥೆ ಆಧಾರಿತ ಮತ್ತು ನೀತಿ ಚಾಲಿತ ಪಾರದರ್ಶಕ ಮತ್ತು ಸ್ಪಂದಿಸುವ ಆಡಳಿತವನ್ನು ಖಾತ್ರಿಪಡಿಸಿಕೊಳ್ಳಲು ಉನ್ನತ ದರ್ಜೆಯ ಆದ್ಯತೆಯಾಗಿರಬೇಕು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ ಏಕಸ್ವಾಮ್ಯಯವನ್ನು ಕಡಿಮೆ ಮಾಡುವ ಮೂಲಕ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾರದರ್ಶಕತೆಯನ್ನು ಸಕ್ರಿಯಗೊಳಿಸುವ ಮೂಲಕ ಕಾರ್ಯತಂತ್ರವಾಗಿ ಕಡಿಮೆ ಮಾಡಬಹುದು. ಭ್ರಷ್ಟಾಚಾರ ಮುಕ್ತ ಸಮಾಜವನ್ನು ಸಾಧಿಸಲು ರಾಷ್ಟ್ರ ನಿರ್ಮಾಣಕ್ಕಾಗಿ ಸಾಮಾಜಿಕ ಮತ್ತು ನೈತಿಕ ಅಂಶವು ದೀರ್ಘಾವಧಿಯ ನೀತಿಯ ಅವಿಭಾಜ್ಯ ಅಂಗವಾಗಿರಬೇಕು.


ಪ್ರಕರಣದ ಸಂಗತಿಗಳನ್ನು ಅವಲೋಕಿಸಿದಾಗ ಲಂಚ ನೀಡಿದ ಆರೋಪಕ್ಕೆ ಒಳಪಟ್ಟ ಆರೋಪಿಗಳ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದುಪಡಿಸಲು ಯಾವುದೇ ಪೂರಕ ಅಂಶಗಳು ಕಂಡು ಬಾರದೆ ಇರುವ ಕಾರಣಕ್ಕಾಗಿ ಅವರು ಸಲ್ಲಿಸಿದ ಅರ್ಜಿಗಳನ್ನು ಮಾನ್ಯ ಹೈಕೋರ್ಟ್ ತಿರಸ್ಕರಿಸಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ



Sri. Prakash Nayak, Mangaluru


Ads on article

Advertise in articles 1

advertising articles 2

Advertise under the article