ಪೊಲೀಸರ ಮೇಲೆ ಕಾರು ಹತ್ತಿಸಿದ ಆರೋಪಿ ಪೊಲೀಸ್!- ನಿರೀಕ್ಷಣಾ ಜಾಮೀನು ರಿಜೆಕ್ಟ್!
ಪೊಲೀಸರ ಮೇಲೆ ಕಾರು ಹತ್ತಿಸಿದ ಆರೋಪಿ ಪೊಲೀಸ್!- ನಿರೀಕ್ಷಣಾ ಜಾಮೀನು ರಿಜೆಕ್ಟ್!
ಪೊಲೀಸ್ ಅಧಿಕಾರಿ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿದೆ.
ಶ್ರೀಧರ್ ಪೂಜಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರು ನಗರದ 56ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿದೆ.
ಬಿಟ್ ಕಾಯಿನ್ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಯಾಗಿರವ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಅವರನ್ನು ಬಂಧಿಸಲು ವಿಶೇಷ ತನಿಖಾ ತಂಡ ಸಜ್ಜಾಗಿತ್ತು. ಆ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಇದ್ದ ಪೊಲೀಸರ ಮೇಲೆ ಕಾರು ಹತ್ತಿಸಲು ಶ್ರೀಧರ್ ಪೂಜಾರ್ ಯತ್ನಿಸಿದ್ದರು ಎಂದು ಆರೋಪಿಸಲಾಗಿ ಅವರ ವಿರುದ್ಧ ಕೊಲೆ ಯತ್ನದ ಕೇಸ್ ದಾಖಲಾಗಿತ್ತು.
2020ರಲ್ಲಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀಧರ್ ಪೂಜಾರ್, ಲಕ್ಷ್ಮೀಕಾಂತಯ್ಯ ಹಾಗೂ ಚಂದ್ರಾಧರ್ ವಿರುದ್ಧ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪ್ರಕರಣ ದಾಖಲಿಸಿತ್ತು. ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಆಲಿಯಾಸ್ ಶ್ರೀಕೃಷ್ಣನನ್ನು ಅಕ್ರಮವಾಗಿ ಬಂಧಿಸಿ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಹಾಗೂ ಸಾಕ್ಷ್ಯ ನಾಶ ಪಡಿಸಿದ ಆರೋಪ ಇವರ ಮೇಲೆ ಇದೆ.
ಸಿಟಿ ಸಿವಿಲ್ ಕೋರ್ಟ್ ಸಮೀಪ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಇದ್ದರು ಎಂಬ ಮಾಹಿತಿ ಮೇರೆಗೆ ಅವರನ್ನು ಬಂಧಿಸಲು ಪೊಲೀಸರು ಹೋಗಿದ್ದರು. ಹಾಗೆ ತೆರಳಿದ್ದ ಇನ್ಸ್‌ಪೆಕ್ಟರ್ ಅನಿಲ್ ಕುಇಮಾರ್, ಎಎಸ್‌ಐ ಭಾಸ್ಕರ್ ನೇತೃತ್ವದ ತಂಡದ ಮೇಲೆ ಕಾರು ನುಗ್ಗಿಸಿ ಆರೋಪಿ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಎಎಸ್‌ಐ ಭಾಸ್ಕರ್ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿತ್ತು. ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಡಿವೈಎಸ್‌ಪಿ ಶ್ರೀಧರ್ ಪೂಜಾರ್ ಕೋರ್ಟ್ ಮೆಟ್ಟಿಲೇರಿದ್ದರು.
ನಾಪತ್ತೆಯಾಗಿರುವ ಶ್ರೀಧರ್ ಪೂಜಾರ್ ಬಂಧನಕ್ಕೆ 1ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಆರೋಪಿ ಶ್ರೀಧರ್ ಪೂಜಾರ್ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.