ಕಾನೂನು ಮಾಹಿತಿ: Birth & Death Certificate Correction: ಜಾತಿ ದಾಖಲೆ ತಪ್ಪು ತಿದ್ದುವ ಅಧಿಕಾರ ಯಾರಿಗಿದೆ..?
ಕಾನೂನು ಮಾಹಿತಿ: Birth & Death Certificate Correction: ಜಾತಿ ದಾಖಲೆ ತಪ್ಪು ತಿದ್ದುವ ಅಧಿಕಾರ ಯಾರಿಗಿದೆ..?
ಶಾಲಾ ಕಾಲೇಜುಗಳ ದಾಖಲೆಗಳಲ್ಲಿ ಜಾರಿ ಕುರಿತಂತೆ ನಮೂದಾಗಿರುವ ತಪ್ಪುಗಳನ್ನು ಸರಿಪಡಿಸುವಂತೆ ನಿರ್ದೇಶಿಸುವ ಅಧಿಕಾರ ಶಿಕ್ಷಣ ಇಲಾಖೆಗೂ ಇಲ್ಲ, ಕಂದಾಯ ಅಧಿಕಾರಿಗಳಿಗೂ ಇಲ್ಲ. ಜನನ ಮತ್ತು ಮರಣ ನೋಂದಣಿ ಅಧಿಕಾರಿಗೂ ಇಲ್ಲ. ಹಾಗಾದರೆ, ಕಾನೂನು ಪ್ರಕಾರ ಈ ಅಧಿಕಾರ ಯಾರಿಗೆ ಇದೆ..?
ಈ ಬಗ್ಗೆ ಹಿಂಬರಹ (Endorsement) ಮೇಲೆ ಸೂಕ್ತ ದಾವಾ ವಿಚಾರಣೆ ನಡೆಸಿ ಆದೇಶ ಪ್ರಕಟಿಸುವ ಅಧಿಕಾರ ಸಿವಿಲ್ ನ್ಯಾಯಾಲಯಗಳಿಗೆ ಮಾತ್ರ ಇದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಶಾಲಾ ಕಾಲೇಜು ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿದ ಬೋವಿ ಜಾತಿಗೆ ಬದಲಾಗಿ ಗೌಡ ಎಂದು ನಮೂದಾಗಿರುವ ಅಂಶವನ್ನು ಸರಿಪಡಿಸಲು ಕೋರಿ ಸಲ್ಲಿಸಲಾಗಿದ್ದ ದಾವೆಯನ್ನು ವಿಚಾರಣೆಗೆ ಪರಿಗಣಿಸುವ ಅಧಿಕಾರ ತನಗಿಲ್ಲ ಎಂದು ಕೊಡಗು ಜಿಲ್ಲೆಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶದಿಂದ ಬಾಧಿತರಾದ ಕೊಡಗಿನ ಇಬ್ಬರು ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹಾಜರುಪಡಿಸಿದ ದಾಖಲೆಗಳ ಪ್ರಕಾರ ದಾವೆದಾರ ವಿದ್ಯಾರ್ಥಿನಿಯರು ಭೋವಿ ಸಮುದಾಯಕ್ಕೆ ಸೇರಿದ್ದಾರೆ. ಈ ಕುರಿತು ಅವರಿಗೆ ತಹಶೀಲ್ದಾರ್ ಸಹ ಜಾತಿ ಪ್ರಮಾಣ ಪತ್ರವನ್ನೂ ವಿತರಿಸಿದ್ದಾರೆ. ಜಾತಿ ಪ್ರಮಾಣ ಪತ್ರದ ಮಾನ್ಯತೆಯನ್ನು ಮೌಲ್ಯೀಕರಣಕ್ಕೆ ದಾವೆದಾರರು ಕೋರಿಲ್ಲ. ಮೀಸಲು ಕೆಟಗರಿ ಅಥವಾ ಹಿಂದುಳಿದ ವರ್ಗಗಡಿ ಸರ್ಕಾರಿ ಉದ್ಯೋಗ ಕೋರಿದ ವೇಳೆ ಜಾತಿ ಪ್ರಮಾಣ ಪತ್ರದ ಮಾನ್ಯತೆಯ ಮೌಲ್ಯೀಕರಣದ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಮುಂದೆ ಪರಿಹಾರ ಕೋರುವ ಅಗತ್ಯ ಅವರಿಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತಹಶೀಲ್ದಾರ್ ವಿತರಿಸಿದ ಜಾತಿ ಪ್ರಮಾಣ ಪತ್ರವನ್ನು ಆಧರಿಸಿ ಶಾಲಾ ಕಾಲೇಜುಗಳಲ್ಲಿ ದಾಖಲೆಗಳಲ್ಲಿ ಉಂಟಾಗಿರುವ ದೋಷವನ್ನು ಸರಿಪಡಿಸಲು ದಾವೆದಾರರು ಕೋರಿದ್ದು, ಈ ಕುರಿತು ವಿಚಾರಣೆ ನಡೆಸಿ ಪರಿಹಾರ ಕಲ್ಪಿಸುವುದಕ್ಕೆ ಸಿವಿಲ್ ನ್ಯಾಯಾಲಯಗಳಿಗೆ "ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲು ಇತ್ಯಾದಿ) ಕಾಯ್ದೆ- 1990"ಯ ನಿಯಮಗಳು ಅಡ್ಡ ಬರುವುದಿಲ್ಲ.
ಜಾತಿ ಪ್ರಮಾಣ ಆಧರಿಸಿ ಶಾಲಾ ಕಾಲೇಜುಗಳ ದಾಖಲೆಗಳಲ್ಲಿ ಉಂಟಾಗಿರುವ ದೋಷ ಸರಿಪಡಿಸಲು ಕೋರಿದ ಮನವಿಯನ್ನು ಪರಿಗಣಿಸಿ ಅಗತ್ಯ ಪರಿಹಾರ ಒದಗಿಸಲು ಸಿವಿಲ್ ನ್ಯಾಯಾಲಯ ಅಧಿಕಾರ ವ್ಯಾಪ್ತಿ ಹೊಂದಿದೆ ಎಂದು ಹೈಕೋರ್ಟ್ ನ್ಯಾಯಪೀಠ ವಿವರವಾಗಿ ಸ್ಪಷ್ಟಪಡಿಸಿದೆ.