Dying Declaration: ಮರಣ ಶಯ್ಯೆ ಹೇಳಿಕೆಯೇ ಶಿಕ್ಷೆಗೆ ಆಧಾರವಲ್ಲ: ಸುಪ್ರೀಂ ಕೋರ್ಟ್
Dying Declaration: ಮರಣ ಶಯ್ಯೆ ಹೇಳಿಕೆಯೇ ಶಿಕ್ಷೆಗೆ ಆಧಾರವಲ್ಲ: ಸುಪ್ರೀಂ ಕೋರ್ಟ್
ಕೊಲೆ ಯತ್ನಕ್ಕೆ ಒಳಗಾದ ವ್ಯಕ್ತಿಯು ಮರಣಶಯ್ಯೆಯಲ್ಲಿ ನೀಡುವ ಹೇಳಿಕೆ -Dying Declaration- ಯಾವಾಗಲೂ ಶಂಕಿತ ಆರೋಪಿಗೆ ಶಿಕ್ಷೆ ವಿಧಿಸಲು ಆಧಾರವಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಬಿ. ಆರ್. ಗವಾಯಿ, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಮರಣಕಾಲೀನ ಹೇಳಿಕೆ ಅಥವಾ ಡೈಯಿಂಗ್ ಡಿಕ್ಲರೇಷನ್ ಒಂದೇ ಶಿಕ್ಷೆಗೆ ಆಧಾರವಾಗದು. ಒಂದು ವೇಳೆ, ಡೈಯಿಂಗ್ ಡಿಕ್ಲರೇಷನ್‌ಗಳ ಸತ್ಯಾಸತ್ಯತೆ ಬಗ್ಗೆ ಅನುಮಾನವಿದ್ದರೆ ಅಥವಾ ಅದು ಸುಳ್ಳು ಎನ್ನುವುದನ್ನು ಲಭ್ಯ ಪುರಾವೆಗಳು ತೋರಿಸಿಕೊಟ್ಟರೆ ಆಗ ಅದನ್ನು ಒಂದು ಸಾಕ್ಷ್ಯವಾಗಿ ಪರಿಗಣಿಸಬಾರದು ಎಂದು ನ್ಯಾಯಪೀಠ ಹೇಳಿದೆ.
ಮರಣಕಾಲೀನ ಹೇಳಿಕೆಗಳನ್ನು ಸತ್ಯ ಎಂದೇ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಮೃತ್ಯುವಿನ ಸಮಯದಲ್ಲಿ ಯಾರೂ ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆಯೂ ವ್ಯಾಪಕವಾಗಿದೆ. ಆದರೆ, ನ್ಯಾಯವಿಚಾರಣೆಯಲ್ಲಿ ಅವುಗಳನ್ನು ಅವಲಂಬಿಸುವಾಗ ಗುರುತರವಾದ ಎಚ್ಚರ ವಹಿಸುವುದು ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
2014ರಲ್ಲಿ ಮೂವರ ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟು ಮರಣದಂಡನೆಯ ಶಿಕ್ಷೆಗೆ ಗುರಿಯಾದ ಉತ್ತರ ಪ್ರದೇಶದ ಆರೋಪಿಯೊಬ್ಬನ ಮನವಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ತೀರ್ಪು ಪ್ರಕಟಿಸಿದೆ.