ಚಲಾವಣೆಯಾದ ಒಟ್ಟು ಮತ: 48 ಗಂಟೆಗಳಲ್ಲಿ ಮಾಹಿತಿ ಏಕಿಲ್ಲ?- ಸುಪ್ರೀಂ ಕೋರ್ಟ್ ಪ್ರಶ್ನೆ
ಚಲಾವಣೆಯಾದ ಒಟ್ಟು ಮತ: 48 ಗಂಟೆಗಳಲ್ಲಿ ಮಾಹಿತಿ ಏಕಿಲ್ಲ?- ಸುಪ್ರೀಂ ಕೋರ್ಟ್ ಪ್ರಶ್ನೆ
2024ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮತದಾನ ಕೇಂದ್ರಗಳಲ್ಲೂ ಚಲಾವಣೆಯಾದ ಒಟ್ಟು ಮತಗಳ ವಿವರಗಳನ್ನು 48 ಗಂಟೆಗಳಲ್ಲಿ ಅಂತಿಮ ಅಧಿಕೃತ ದತ್ತಾಂಶದ ಮೂಲಕ ಏಕೆ ಬಹಿರಂಗ ಪಡಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ಪ್ರಶ್ನೆ ಮಾಡಿದ್ದು, ಇದಕ್ಕೆ ಸೂಕ್ತ ವಿವರ ನೀಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಚಲಾವಣೆಯಾದ ಮತಗಳ ವಿವರಗಳನ್ನು 48 ಗಂಟೆಗಳ ಒಳಗೆ ಅಂತಿಮ ಅಧಿಕೃತ ದತ್ತಾಂಶದ ಮೂಲಕ ಮಾಹಿತಿ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಈ ನಿರ್ದೇಶನ ಜಾರಿಗೊಳಿಸಿದೆ.
ಮತದಾನದ ಮಾಹಿತಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ಏನು ಸಮಸ್ಯೆ ಇದೆ ಮಿಸ್ಟರ್ ಶರ್ಮಾ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಚುನಾವಣಾ ಆಯೋಗದ ಪರ ವಕೀಲರಾದ ಅಮಿತ್ ಶರ್ಮಾ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶರ್ಮಾ, ನಾವು ಸಾಕಷ್ಟು ದತ್ತಾಂಶವನ್ನು ಸಂಗ್ರಹಿಸಬೇಕಿದ್ದು, ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಮತಗಟ್ಟೆಯ ಪ್ರತಿ ಅಧಿಕಾರಿಯು ಸಂಜೆಯ ವೇಳೆ ಆಪ್ ಮೂಲಕ ದತ್ತಾಂಶ ಹಂಚಿಕೊಳ್ಳುತ್ತಾರೆ. ಅಲ್ಲವೇ? ದಿನದ ಅಂತ್ಯಕ್ಕೆ ಚುನಾವಣಾಧಿಕಾರಿ ಬಳಿ ಇಡೀ ಕ್ಷೇತ್ರದ ದತ್ತಾಂಶ ಇರುವುದಿಲ್ಲವೇ..? ಎಂದು ನ್ಯಾಯಪೀಠ ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಚುನಾವಣಾ ಆಯೋಗದ ವಕೀಲ ಶರ್ಮಾ, ತಕ್ಷಣಕ್ಕೆ ಲಭ್ಯವಾಗುವುದಿಲ್ಲ ಎಂದರು. ಮಾರನೇ ದಿನಕ್ಕಾದರೂ ಈ ಡಾಟಾ ಸಿಗುವುದಿಲ್ಲವೇ ಚಂದ್ರಚೂಡ್ ಮರುಪ್ರಶ್ನಿಸಿದರು.
ಮತದಾನದ ದಿನದಂದು ಘೋಷಿಸಲಾದ ಆರಂಭಿಕ ಅಂದಾಜಿಗೆ ಹೋಲಿಸಿದರೆ, ಎರಡು ಹಂತಗಳಿಗೆ ಘೋಷಿಸಿಲಾದ ಅಂತಿಮ ಮತದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳದ ಬಗ್ಗೆ ಭಾರೀ ವಿವಾದದ ಸುಂಟರಗಾಳಿ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು.