ನೇಮಕಾತಿಯಲ್ಲಿ ಮೀಸಲು ಕಡ್ಡಾಯ- ಹೊರಗುತ್ತಿಗೆಗೂ ಮೀಸಲಾತಿ: ಶೇ. 33 ಮಹಿಳೆಯರಿಗೆ ಮೀಸಲಾತಿ- ರಾಜ್ಯ ಸರ್ಕಾರ ಆದೇಶ
ನೇಮಕಾತಿಯಲ್ಲಿ ಮೀಸಲು ಕಡ್ಡಾಯ- ಹೊರಗುತ್ತಿಗೆಗೂ ಮೀಸಲಾತಿ: ಶೇ. 33 ಮಹಿಳೆಯರಿಗೆ ಮೀಸಲಾತಿ- ರಾಜ್ಯ ಸರ್ಕಾರ ಆದೇಶ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಸುವ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಎಲ್ಲ ನೇಮಕಾತಿ ಪ್ರಕ್ರಿಯೆಗಳಲ್ಲೂ ಮೀಸಲು ಕಡ್ಡಾಯ. ಇದು ಹೊರಗುತ್ತಿಗೆಗೂ ಅನ್ವಯವಾಗಲಿದ್ದು, ಶೇ. 33ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲೇಬೇಕು ಎಂದು ಈ ಆದೇಶದಲ್ಲಿ ಸೂಚಿಸಲಾಗಿದೆ.
ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹಂತದ ಸಿಬ್ಬಂದಿ ನೇಮಕಾತಿಯನ್ನು ಹೊರಗುತ್ತಿಗೆ ಆಧಾರದಲ್ಲಿ ವಿವಿಧ ಏಜೆನ್ಸಿಗಳ ಮೂಲಕ ಮಾಡಲಾಗುತ್ತಿತ್ತು. ಇದರಿಂದ ಮೀಸಲಾತಿ ಸಿಗುತ್ತಿರಲಿಲ್ಲ. ಏಜೆನ್ಸಿಗಳು ತಮಗೆ ಬೇಕಾದವರಿಗೆ ಉದ್ಯೋಗ ನೀಡುತ್ತಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಆಕಾಂಕ್ಷಿಗಳಿಗೆ ಉದ್ಯೋಗ ಲಭ್ಯವಾಗುತ್ತಿರಲಿಲ್ಲ.
ಈ ಲೋಪವನ್ನು ಸರಿಪಡಿಸಲು ರಾಜ್ಯ ಸರ್ಕಾರ ಈ ಕ್ರಾಂತಿಕಾರಿ ಆದೇಶವನ್ನು ಹೊರಡಿಸಿದೆ. ಸಾಮಾಜಿಕ ನ್ಯಾ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೆ, ಈ ಉದ್ಯೋಗದಡಿ ನೇಮಕಾತಿ ಆದವರನ್ನು ಖಾಯಂ ನೌಕರಿಗೆ ಪರಿಗಣಿಸುವಂತಿಲ್ಲ. ಅದೇ ರೀತಿ, 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗೆ ಹೊರಗುತ್ತಿಗೆ ಮೀಸಲಾತಿ ನಿಯಮ ಅನ್ವಯಿಸುವುದಿಲ್ಲ.
ಪ್ರತಿ ವರ್ಷ ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಟೆಂಡರ್ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿಗೆ ಅನುಗುಣವಾಗಿ ಹುದ್ದೆ ಹಂಚಿಕೆ ಮಾಡಿ ಸಿಬ್ಬಂದಿಯನ್ನು ಪೂರೈಸಲು ಷರತ್ತುಗಳನ್ನು ನಮೂದಿಸಬೇಕು. ಹೊರಗುತ್ತಿಗೆ ಏಜೆನ್ಸಿ ಅಂತಿಮಗೊಳಿಸಿದ ಸಿಬ್ಬಂದಿಯ ಪಟ್ಟಿಯು ಮೀಸಲಾತಿ ನಿಯಮದಂತೆ ಇರುವುದನ್ನು ಪ್ರಾಧಿಕಾರವು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ, ನೇಮಕಗೊಂಡ ಅಭ್ಯರ್ಥಿ ಕರ್ತವ್ಯಕ್ಕೆ ಹಾಜರಾಗದೇ ಇದ್ದಾಗ ಅಥವಾ ಅರ್ಧದಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರೆ ಆ ಸ್ಥಾನವನ್ನು ಭರ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅದೇ ಪ್ರವರ್ಗದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಹೊರಗುತ್ತಿಗೆ ಅತ್ಯಧಿಕವಾಗಿರುವ ಹುದ್ದೆಗಳು
ವಾಹನ ಚಾಲಕರು
ಡಾಟಾ ಎಂಟ್ರಿ ಆಪರೇಟರ್‌ಗಳು
ಸ್ವಚ್ಚತಾ ಸಿಬ್ಬಂದಿ
ಗ್ರೂಪ್ ಡಿ. ಸಿಬ್ಬಂದಿ
ಟೈಪಿಂಗ್ ಸಿಬ್ಬಂದಿ