ಸಾಧುಗಳ ಹೆಸರಲ್ಲಿ ಆಸ್ತಿ ಹಕ್ಕು ನೀಡುವುದು ಅವರ ನಂಬಿಕೆ ಮತ್ತು ಆಚರಣೆಗೆ ವಿರುದ್ಧವಾದದ್ದು: ಹೈಕೋರ್ಟ್ ಅಭಿಮತ
ಸಾಧುಗಳ ಹೆಸರಲ್ಲಿ ಆಸ್ತಿ ಹಕ್ಕು ನೀಡುವುದು ಅವರ ನಂಬಿಕೆ ಮತ್ತು ಆಚರಣೆಗೆ ವಿರುದ್ಧವಾದದ್ದು: ಹೈಕೋರ್ಟ್ ಅಭಿಮತ
ನಾಗಾ ಸಾಧುಗಳು ನಿರ್ಲಿಪ್ತ ಜೀವನ ನಡೆಸುವವರು. ಅವರ ಹೆಸರಿನಲ್ಲಿ ಆಸ್ತಿ ಹಕ್ಕು ಪಡೆಯುವುದು ಅವರ ನಂಬಿಕೆ ಮತ್ತು ಆಚರಣೆಗೆ ಸರಿ ಹೊಂದುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದೆಹಲಿ ಹೈಕೋರ್ಟ್‌ನ ನ್ಯಾ. ಧರ್ಮೇಶ್ ಶರ್ಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ನಾಗಾ ಸಾಧು ದೇಗುಲದ ಹೆಸರಿನಲ್ಲಿ ಇರುವ ಆಸ್ತಿಗೆ ಕಾನೂನು ಮಾನ್ಯತೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
ಹಿಂದೂ ಧರ್ಮದ ಪ್ರಕಾರ, ನಾಗಾ ಸಾಧುಗಳು ಪರಶಿವನ ಭಕ್ತರು. ಅವರು ಲೌಕಿಕ ವ್ಯವಹಾರಗಳ ಬಗ್ಗೆ ಅವರು ಯಾವುದೇ ತಲೆಕೆಡಿಸಿಕೊಳ್ಳುವುದಿಲ್ಲ. ಇಹ-ಪರದ ಬಗ್ಗೆ ಅವರು ಸಂಪೂರ್ಣ ನಿರ್ಲಿಪ್ತ ಜೀವನ ನಡೆಸುವ ದೀಕ್ಷೆ ಪಡೆದವರು. ಅವರ ಹೆಸರಿನಲ್ಲಿ ಆಸ್ತಿಯ ಹಕ್ಕು ಕೋರುವುದು ಅವರ ನಂಬಿಕೆ ಮತ್ತು ಆಚರಣೆಗೆ ಸರಿ ಹೊಂದುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
ವಿಶ್ವದ ವಿವಿಧ ಭಾಗಗಳಲ್ಲಿ ಸಾಧುಗಳು, ಸಂತರು, ಬಾಬಾಗಳು, ಫಕೀರರು ಮತ್ತು ಗುರುಗಳಿದ್ದು, ಎಲ್ಲರೂ ಸಾರ್ವಜನಿಕ ಭೂಮಿಯಲ್ಲಿ ಮಂದಿರ ಅಥವಾ ಸಮಾಧಿ ಸ್ಥಳ ನಿರ್ಮಿಸಲು ಅವಕಾಶ ಕೋರಿದರೆ ಅದು ಹಾನಿಕಾರಕ ಪರಿಣಾಮ ಉಂಟು ಮಾಡುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರ ಹೆಸರಿನಲ್ಲಿ 1996ರಿಂದ ಘಾಟ್ ನಂ. 33, ತ್ರಿವೇಣಿ ಘಾಟ್, ನಿಗಮ ಬೋಧ ಘಾಟ್, ಜಮುನಾ ಬಜಾರ್‌ನಲ್ಲಿ ಜಮೀನು ಇದೆ. ಇದನ್ನು ಗುರುತಿಸಲು ಸ್ಥಳೀಯಾಡಳಿತಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಹಾಂತ್ ಶ್ರೀ ನಾಗ ಬಾಬಾ ಭೋಲಾ ಗಿರಿ ಅವರ ಉತ್ತರಾಧಿಕಾರಿ ಅವಿನಾಶ್ ಗಿರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರ ಬಹುದೊಡ್ಡ ಅತಿಕ್ರಮಣಕಾರರಾಗಿದ್ದು, ವಿವಾದಿತ ಆಸ್ತಿ ಯಮುನಾ ನದಿಯ ಪುನರುಜ್ಜೀವನದಂತಹ ದೊಡ್ಡ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದೆ. ಪೂಜ್ಯ ಬಾಬಾ ಅವರು ನಿರ್ಮಿಸಿರುವ ದೇವಾಲಯಕ್ಕೆ ಯಾವುದೇ ಐತಿಹಾಸಿಕ ಪ್ರಾಮುಖ್ಯತೆ ಇಲ್ಲ. ಅದೊಂದು ಸಾರ್ವಜನಿಕ ದೇಗುಲ ಎಂಬುದನ್ನು ಸಾಬೀತುಪಡಿಸಲು ಒಂದು ಸಣ್ಣ ದಾಖಲೆಯೂ ಇಲ್ಲ. ದಾಖಲೆಗಳ ಪ್ರಕಾರ, ಈ ಪ್ರದೇಶದಲ್ಲಿ ಕೇವಲ 32 ಐತಿಹಾಸಿಕ ಘಾಟ್‌ಗಳಿದ್ದು, ಅರ್ಜಿದಾರರು ಇರುವ ಭೂಮಿಯನ್ನು 33ನೇ ಘಾಟ್ ಎಂದು ನಮೂದಿಸುವ ಮೂಲಕ ಕಥೆಗೆ ಹೊಸ ಟ್ವಿಸ್ಟ್ ನೀಡಲು ಯತ್ನಿಸಿದ್ದಾರೆ ಎಂದು ನ್ಯಾಯಪೀಠ ಹೇಳಿತು.
ಪ್ರಕರಣ: ಮಹಾಂತ್ ಶ್ರೀ ನಾಗ ಬಾಬಾ ಭೋಲಾ ಗಿರಿ Vs ಜಿಲ್ಲಾಧಿಕಾರಿ ಡಿಸ್ಟ್ರಿಕ್ಟ್ ಸೆಂಟ್ರಲ್
ದೆಹಲಿ ಹೈಕೋರ್ಟ್