ವೇಶ್ಯಾವಾಟಿಕೆ ಪ್ರಕರಣ: ಸಂತ್ರಸ್ತೆ ವಿರುದ್ಧ ಕ್ರಮ ಜರುಗಿಸಲಾಗದು- ಕರ್ನಾಟಕ ಹೈಕೋರ್ಟ್
ವೇಶ್ಯಾವಾಟಿಕೆ ಪ್ರಕರಣ: ಸಂತ್ರಸ್ತೆ ವಿರುದ್ಧ ಕ್ರಮ ಜರುಗಿಸಲಾಗದು- ಕರ್ನಾಟಕ ಹೈಕೋರ್ಟ್
ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ರಕ್ಷಣೆ ಮಾಡಿದ ಸಂತ್ರಸ್ತ ಮಹಿಳೆಯ ವಿರುದ್ಧ ಅನೈತಿಕ ಸಂಚಾರ ತಡೆ ಕಾಯ್ದೆ (Immoral Traffic Prevention Act) ಅಡಿ ಶಿಕ್ಷಾರ್ಹ ಅಪರಾಧಕ್ಕಾಗಿ ವಿಚಾರಣೆಗೆ ಗುರಿಪಡಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅನೈತಿಕ ಸಂಚಾರ ತಡೆ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂತ್ರಸ್ತ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಅನೈತಿಕ ಸಂಚಾರ ತಡೆ ಕಾಯ್ದೆಯ ಉದ್ದೇಶ ವೇಶ್ಯಾವಾಟಿಕೆಯನ್ನು ಅಥವಾ ವೇಶ್ಯೆಯರನ್ನು ನಿರ್ಮೂಲನೆ ಮಾಡುವುದಲ್ಲ. ಕಾನೂನಿನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಸಂತ್ರಸ್ತೆಯರಿಗೆ ದಂಡ ವಿಧಿಸುವ ನಿಯಮಗಳೂ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದರ ಬದಲಿಗೆ, ವಾಣಿಜ್ಯ ಉದ್ದೇಶಗಳಿಗೆ ಲೈಂಗಿಕ ಶೋಷಣೆ ನಡೆಸುವವರನ್ನು ವೇಶ್ಯಾವಾಟಿಕೆಯಲ್ಲಿ ಮಹಿಳೆಯರನ್ನು ತೊಡಗಿಸಿ ಅದರಿಂದ ಹಣ ಗಳಿಸುವವರನ್ನು ಹಾಗೂ ಅಂತಹ ಸಂಪಾದನೆಯ ಮೇಲೆ ಜೀವನ ನಡೆಸುವವರನ್ನು ಶಿಕ್ಷಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದು ನ್ಯಾಯಪೀಠ ವಿವರಿಸಿದೆ.
ಅರ್ಜಿದಾರರು ಮಹಿಳೆಯಾಗಿದ್ದು, ಪ್ರಕರಣದ ಸಂತ್ರಸ್ತೆಯಾಗಿದ್ದಾರೆ. ಈ ವಿಚಾರದಲ್ಲಿ ಯಾವುದೇ ವಿವಾದವಿಲ್ಲ. ಕಾನೂನಿನಲ್ಲಿ ಸಂತ್ರಸ್ತೆಯ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ. ಸಂತ್ರಸ್ತೆಯ ವಿರುದ್ಧ ಪೊಲೀಸರು ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಸೆಕ್ಸನ್ 5 - "ವೇಶ್ಯಾವಾಟಿಕೆಗಾಗಿ ಮಹಿಳೆಯರನ್ನು ಕೂಡಿ ಹಾಕುವುದು, ಕೀಳು ವೃತ್ತಿಗೆ ಪ್ರೇರೇಪಿಸುವುದು ಅಥವಾ ಕರೆದೊಯ್ಯುವುದನ್ನು ಶಿಕ್ಷಾರ್ಹ ಅಪರಾಧವಾಗಿಸುತ್ತದೆ. ಎಲ್ಲಿಯೂ ಸಂತ್ರಸ್ತ ಮಹಿಳೆಗೆ ಶಿಕ್ಷಿಸುವ ಕುರಿತು ಹೇಳುವುದಿಲ್ಲ. ಹೀಗಿದ್ದಾಗ ಪ್ರಕರಣವನ್ನು ಸಂತ್ರಸ್ತೆಯ ವಿರುದ್ಧ ಮುಂದುವರೆಸಲು ಬಿಟ್ಟರೆ ಕಾನೂನಿನ ದುರುಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿದಾರ ಮಹಿಳೆಯ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಿ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:
ಚಿಕ್ಕಮಗಳೂರು ಮೂಲದ 29 ವರ್ಷದ ಮಹಿಳೆಯೂ ಸೇರಿದಂತೆ ಕೆಲ ಮಹಿಳೆಯರನ್ನು ಪ್ರಕರಣದ ಆರೋಪಿಗಳು ಉಡುಪಿಯಿಂದ ಗೋವಾಕ್ಕೆ ವೇಶ್ಯಾವಾಟಿಕೆ ಮೂಲಕ ಹಣ ಗಳಿಸಲು ತಲಾ 10 ಸಾವಿರ ಮುಂಗಡ ನೀಡಿ ಕರೆದೊಯ್ಯುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ಠಾಣೆಯ ಮಹಿಳಾ ಪೊಲೀಸರು ಟೆಂಪೊ ಟ್ರಾವೆಲರ್ ತಡೆದು ಅರ್ಜಿದಾರ ಮಹಿಳೆಯೂ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದರು.
ಸಂತ್ರಸ್ತ ಮಹಿಳೆಯ ಸಹಿತ ಆರೋಪಿಗಳ ವಿರುದ್ಧ ಕಾಯ್ದೆಯ ಸೆಕ್ಷನ್ 5ರಡಿಯಲ್ಲಿ FIR ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿತರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.