ಶಿಕ್ಷಣದ ಹಕ್ಕು ಕಾಯ್ದೆ: ಖಾಸಗಿ ವಸತಿ ಶಾಲೆಗಳಿಗೂ ಅನ್ವಯ- ಕರ್ನಾಟಕ ಹೈಕೋರ್ಟ್
ಶಿಕ್ಷಣದ ಹಕ್ಕು ಕಾಯ್ದೆ: ಖಾಸಗಿ ವಸತಿ ಶಾಲೆಗಳಿಗೂ ಅನ್ವಯ- ಕರ್ನಾಟಕ ಹೈಕೋರ್ಟ್
ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 (RTE) ಅಂಶಗಳು ವಸತಿ ಶಾಲೆಗಳಿಗೂ ಅನ್ವಯವಾಗುತ್ತವೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಮೈಸೂರಿನ ಜ್ಞಾನ ಸರೋವರ ಎಜುಕೇಶನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಹಾಗೂ ಅನುಮತಿ ಪಡೆಯದ ಶಾಲೆಗೆ ಆರ್‌ಟಿಇ ಅಡಿ 1.60 ಕೋಟಿ ರೂ. ದಂಡ ವಿಧಿಸಿರುವ ಕ್ರಮ ಸರಿಯಾಗಿದೆ ಎಂದು ಹೇಳಿದೆ.
ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ತಾವು ಶಾಲೆ ನಡೆಸುತ್ತಿದ್ದರೂ ಆರ್‌ಟಿಇ ಅಡಿ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ 1.60 ಕೋಟಿ ದಂಡ ವಿಧಿಸಿರುವುದು ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿ ಮೈಸೂರಿನ ಜ್ಞಾನ ಸರೋವರ ಎಜುಕೇಶನ್ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿತ್ತು.
ವಸತಿ ಶಾಲೆಗಳಿಗೂ ಆರ್‌ಟಿಇ ಅನ್ವಯವಾಗುತ್ತದೆ. ಹೀಗಾಗಿ ದಂಡ ವಿಧಿಸಿರುವ ಕ್ರಮದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿತು.
ಪ್ರಕರಣದ ವಿವರ
ಶಾಲೆ ಆರ್‌ಟಿಇ ಅಡಿ ಮಾನ್ಯತೆ ಪಡೆದಿಲ್ಲ. ಹಾಗಾಗಿ, ಅದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಬಾಲಕೃಷ್ಣಪ್ಪ ಮತ್ತು ವಿಲಿಯಂ ಏಸುದಾಸ್ ಎಂಬವರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಈ ಮನವಿ ದೂರನ್ನು ಆಧರಿಸಿ ಶಿಕ್ಷಣ ಇಲಾಖೆ ಶಾಲಾ ಮುಖ್ಯಸ್ಥರಿಗೆ ನೋಟೀಸ್ ನೀಡಿತ್ತು. ಆದರೆ, ಶಾಲಾ ಆಡಳಿತ ಪರವಾಗಿ ನೋಟೀಸ್‌ಗೆ ಪ್ರತ್ಯುತ್ತರವನ್ನೂ ನೀಡಲಿಲ್ಲ, ವಿಚಾರಣೆಗೆ ಹಾಜಾರಾಗಲೂ ಇಲ್ಲ. ಇದರಿಂದ ಶಿಕ್ಷಣ ಇಲಾಖೆ ಮತ್ತೊಂದು ನೋಟೀಸ್ ಜಾರಿಗೊಳಿಸಿತು.
ಆದರೆ, ಇದು ವಸತಿ ಶಾಲೆ. ವಸತಿ ಶಾಲೆ ಆರ್‌ಟಿಇ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಶಾಲಾ ಆಡಳಿತ ಉ್ತರಿಸಿತ್ತು. ಇದಕ್ಕೆ ಪ್ರತಿಯಾಗಿ ಇಲಾಖೆ ಶಾಲೆಯು ಆರ್‌ಟಿಇ ಕಾಯ್ದೆ ಜಾರಿ ಮಾಡಿಲ್ಲ ಎಂದು ಆರೋಪಿಸಿ ದಂಡ ವಿಧಿಸಿತು. ಈ ಆದೇಶವನ್ನು ಪ್ರಶ್ನಿಸಿ ಶಾಲೆಯ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣ: ಜ್ಞಾನ ಸರೋವರ ಎಜುಕೇಶನಲ್ ಟ್ರಸ್ಟ್ Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, WP 24579/2021 Dated 27-05-2024