ಪವರ್ ಟಿವಿಗೆ ಸುಪ್ರೀಂ ಬಿಗ್ ರಿಲೀಫ್: ಅರ್ಜಿದಾರರ ಉದ್ದೇಶ ರಾಜಕೀಯ ದ್ವೇಷ ಎಂದ ನ್ಯಾಯಪೀಠ
ಪವರ್ ಟಿವಿಗೆ ಸುಪ್ರೀಂ ಬಿಗ್ ರಿಲೀಫ್: ಅರ್ಜಿದಾರರ ಉದ್ದೇಶ ರಾಜಕೀಯ ದ್ವೇಷ ಎಂದ ನ್ಯಾಯಪೀಠ
ಪವರ್ ಟಿವಿ ವಿರುದ್ಧ ಅರ್ಜಿದಾರರು ಹಾಕಿರುವ ಅರ್ಜಿ ರಾಜಕೀಯ ದ್ವೇಷದಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ವಾಕ್ ಸ್ವಾತಂತ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ನಾವು ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದೆ.
ಪವರ್ ಟಿವಿ ಚಾನೆಲ್ ಪ್ರಸಾರ ನಿರ್ಬಂಧ ವಿಧಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನಾವು ನಿಮ್ಮ ವಾದ ಆಲಿಸಿದ್ದೇವೆ. ಇದು ರಾಜಕೀಯ ದ್ವೇಷ ಎಂಬುದು ನಮಗೆ ಮನವರಿಕೆಯಾಗುತ್ತಿದೆ. ಅರ್ಜಿದಾರರು ರಾಜ್ಯದ ಕೆಲವು ಲೈಂಗಿಕ ಕಿರುಕುಳದ ಆರೋಪಗಳನ್ನು ಪ್ರಸಾರ ಮಾಡಲು ಬಯಸಿದ್ದರು. ಅದರ ಬಾಯಿ ಮುಚ್ಚಿಸಲು ಇಂತಹ ಕ್ರಮಕ್ಕೆ ಅರ್ಜಿದಾರರು ಮುಂದಾಗಿದ್ದಾರೆ. ಇದು ಸಂಪೂರ್ಣ ರಾಜಕೀಯ ದ್ವೇಷವಲ್ಲದೆ ಮತ್ತೇನೂ ಅಲ್ಲ. ಅವರಿಗೆ ಕೆಲಸ ಮಾಡಲು ಅನುಮತಿ ನೀಡದಿದ್ದರೆ ನಮ್ಮ ಕರ್ತವ್ಯ ನಿಬಾಯಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದೇ ಅರ್ಥ ಎಂದು ನ್ಯಾಯಪೀಠ ಹೇಳಿತು.
ಲೈಸನ್ಸ್ ನವೀಕರಿಸಿಲ್ಲ ಎಂಬ ಕಾರಣಕ್ಕೆ ಪವರ್ ಟಿವಿ ಚಾನೆಲ್ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡದಂತೆ ನಿರ್ಬಂಧಿಸಿದ್ದ ಹೈಕೋರ್ಟ್ ಆದೇಶಕ್ಕೆ ನ್ಯಾಯಪೀಠ ಸೋಮವಾರದ ವರೆಗೆ ತಡೆ ನೀಡಿದೆ.
ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಅವರಿಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಆರೋಪ ಪ್ರಕರಣಗಳ ಕುರಿತು ಪವರ್ ಟಿವಿ ನಿರಂತರ ಕಾರ್ಯಕ್ರಮ ಪ್ರಸಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರಮೇಶ್ ಗೌಡ ಹಾಗೂ ಇತರರು ಚಾನೆಲ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಲೈಸನ್ಸ್ ನವೀಕರಿಸಿಲ್ಲ. ಹಾಗಾಗಿ ಟಿವಿ ಕಾರ್ಯಕ್ರಮ ಪ್ರಸಾರ ಮಾಡುತ್ತಿರುವುದು ನಿಯಮಬಾಹಿರ ಎಂಬ ವಾದ ಪರಿಗಣಿಸಿದ ಹೈಕೋರ್ಟ್ ಜೂನ್ 26ರಂದು ಚಾನೆಲ್‌ಗೆ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿತ್ತು. ಈ ವಾದವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಈ ಆದೇಶದಲ್ಲಿ ಮಧ್ಯಪ್ರದೇಶ ಮಾಡಲು ನಿರಾಕರಿಸಿತ್ತು.
ಪ್ರಕರಣ: ಮೆ. ಪವರ್ ಸ್ಮಾರ್ಟ್ ಮೀಡಿಯಾ ಪ್ರೈ.ಲಿ. Vs ಭಾರತ ಸರ್ಕಾರ
ಸುಪ್ರೀಂ ಕೋರ್ಟ್ (ತ್ರಿಸದಸ್ಯ ವಿಭಾಗೀಯ ನ್ಯಾಯಪೀಠ) 29441/2024