ಅಪರೂಪದ ಪ್ರಕರಣ: ಬೆಕ್ಕು ಕಳವಿಗೂ ಮಹಿಳೆಯ ಘನತೆಗೂ ಏನು ಸಂಬಂಧ?- ಪೊಲೀಸರ ಕ್ರಮಕ್ಕೆ ಸ್ವತಃ ನ್ಯಾಯಮೂರ್ತಿಯೇ ಬೇಸರ!
ಅಪರೂಪದ ಪ್ರಕರಣ: ಬೆಕ್ಕು ಕಳವಿಗೂ ಮಹಿಳೆಯ ಘನತೆಗೂ ಏನು ಸಂಬಂಧ?- ಪೊಲೀಸರ ಕ್ರಮಕ್ಕೆ ಸ್ವತಃ ನ್ಯಾಯಮೂರ್ತಿಯೇ ಬೇಸರ!
ಅಪರೂಪದಲ್ಲಿ ಅಪರೂಪ ಎನಿಸಿದ 'ಬೆಕ್ಕು ಕಳವು ಪ್ರಕರಣ' ಕರ್ನಾಟಕ ಹೈಕೋರ್ಟ್‌ನಲ್ಲಿ ಭಾರೀ ಸದ್ದು ಮಾಡಿತು. ಮನೆಯಲ್ಲಿ ಬೆಕ್ಕು ಕಾಣಿಸಿಕೊಂಡಿರುವುದಕ್ಕೂ ಮಹಿಳೆಯ ಘನತೆಗೆ ಧಕ್ಕೆ ತಂದ ಪ್ರಕರಣಕ್ಕೂ ಎಲ್ಲಿಂದ ಎಲ್ಲಿಯ ಸಂಬಂಧ ಎಂದು ಸ್ವತಃ ನ್ಯಾಯಮೂರ್ತಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ
ಮಾನ್ಯ ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಇಂತಹ ನಿಷ್ಪ್ರಯೋಜಕ ಪ್ರಕರಣದಲ್ಲಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿ ಪೊಲೀಸರ ಕ್ರಮಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿತು.
ಇಂತಹ ಅಸಂಬದ್ಧ ಪ್ರಕರಣ ದಾಖಲಿಸಿ ನ್ಯಾಯಪೀಠದ ಕಾಲಹರಣ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಎಲ್ಲ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದರು.
ಏನಿದು ಪ್ರಕರಣ?
ಆನೇಕಲ್ ಶಿಕಾರಿಪಾಳಯದ ಸಿರಾಜ್ ಲೇಔಟ್‌ನ ಎರಡನೇ ಕ್ರಾಸ್ ನಿವಾಸಿ ನಿಖಿತಾ ಅಂಜನಾ ಅಯ್ಯರ್ ಅವರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಿದ್ದರು.
ನಾನು ಸಾಕಿದ್ದ ಡೈಸಿ ಎಂಬ ಹೆಸರಿನ ಬೆಕ್ಕನ್ನು ತಾಹಾ ಹುಸೇನ್ ತಮ್ಮ ಮನೆಯಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಅವರು ನನ್ನ ಬೆಕ್ಕನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವುದು ನಮ್ಮ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ ಎಂದು ಆರೋಪಿಸಿ ಬೆಕ್ಕು ಕಳವು ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ತಾಹಾ ಹುಸೇನ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 504, 506 ಮತ್ತು 509ರಡಿ ಜೀವ ಬೆದರಿಕೆ, ಶಾಂತಿ ಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದರು.. ತನಿಖೆಯ ನಂತರ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು.
ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಆರೋಪಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ, ನ್ಯಾಯಮೂರ್ತಿಯವರು, ಏನಿದು, ಬೆಕ್ಕಿಗಾಗಿ ಕದನ? ಅರ್ಜಿದಾರರು ಏಕೆ ಬೆಕ್ಕನ್ನು ಕಳವು ಮಾಡಿದ್ದಾರೆ..? ಬೆಕ್ಕನ್ನು ಏಕೆ ಹಿಡಿದುಕೊಂಡರು. ಅವರ ಮನೆಯಲ್ಲಿ ಬೆಕ್ಕು ಏಕೆ ಇತ್ತು? ಎಂದು ಪ್ರಶ್ನಿಸಿದರು.
ಅರ್ಜಿದಾರರು ಚಾರ್ಜ್‌ಶೀಟ್ ಸಲ್ಲಿಸಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಇಂತಹ ಪ್ರಕರಣದ ವಿಚಾರಣೆ ಮುಂದುವರಿಯಲು ಅನುಮತಿ ನೀಡಿದರೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಭಂಗ ಉಂಟು ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅರ್ಜಿದಾರರ ಪರ ವಾದಿಸಿದ ವಕೀಲರು, ಬೆಕ್ಕು ಕಂಪೌಂಡ್‌ನಿಂದ ಕಂಪೌಂಡ್‌ಗೆ ಹಾರಿ ಹೋಗುತ್ತಿರುತ್ತದೆ. ಬೆಕ್ಕು ನಮ್ಮ ಕಿಟಕಿಯಿಂದ ಒಳಬರುತ್ತದೆ ಹಾಗೂ ಕಿಟಿಕಿಯಿಂದ ಹೊರ ಹೋಗುತ್ತದೆ. ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ದೂರುದಾರರ ಮನೆಯ ರಸ್ತೆಯಲ್ಲಿ ಇರುವ ಎಲ್ಲರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದರು.