ಬಹುಕೋಟಿ ಟ್ರಕ್ ಟರ್ಮಿನಲ್ ಹಗರಣ: ಮಾಜಿ ಶಾಸಕ ಡಿ.ಎಸ್. ವೀರಯ್ಯ ಬಂಧನ: 765 ಕಡತಗಳ ಜಪ್ತಿ, 380 ಬ್ಯಾಂಕ್ ಖಾತೆ ಡಾಟಾ ವಿಶ್ಲೇಷಣೆ
ಬಹುಕೋಟಿ ಟ್ರಕ್ ಟರ್ಮಿನಲ್ ಹಗರಣ: ಮಾಜಿ ಶಾಸಕ ಡಿ.ಎಸ್. ವೀರಯ್ಯ ಬಂಧನ: 765 ಕಡತಗಳ ಜಪ್ತಿ, 380 ಬ್ಯಾಂಕ್ ಖಾತೆ ಡಾಟಾ ವಿಶ್ಲೇಷಣೆ
ಕರ್ನಾಟಕ ಸರ್ಕಾರ ಸ್ವಾಮ್ಯದ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನ ಬಹುಕೋಟಿ ಹರಣದ ರೂವಾರಿ ಅದರ ಮಾಜಿ ಅಧ್ಯಕ್ಷ ಹಾಗೂ ಎರಡು ಬಾರಿಯ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಅವರಿಗೆ ಜುಲೈ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರ ಕೆ.ಎನ್. ಶಿವಕುಮಾರ್ ಈ ಆದೇಶ ಹೊರಡಿಸಿದ್ದಾರೆ.
ವೀರಯ್ಯ ಅವರ ಸಿಐಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. 2021-23ರ ಅವಧಿಯಲ್ಲಿ ಟ್ರಕ್ ಟರ್ಮಿನಲ್‌ನಲ್ಲಿ ಹಣಕಾಸು ದುರ್ಬಳಕೆ ಮಾಡಲಾಗಿತ್ತು.
ನೂತನ ಎಂ.ಡಿ. ಸಿ.ಎನ್. ಶಿವಪ್ರಕಾಶ್ ಅವರು ಕಡತಗಳನ್ನು ಪರಿಶೀಲಿಸಿದಾಗ ಈ ಹಗರಣ ಬೆಳಕಿಗೆ ಬಂದಿದ್ದು, ಅವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಉಪ ನಿರ್ದೇಶಕ ಎಸ್. ಶಂಕರಪ್ಪ ಅವರನ್ನು ಬಂಧಿಸಲಾಗಿತ್ತು. ಆಗ ಅವರು ಟ್ರಕ್ ಟರ್ಮಿನಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಶಂಕರಪ್ಪ ಬಂಧನದ ಬೆನ್ನಲ್ಲೇ ಅದರ ಮಾಜಿ ಅಧ್ಯಕ್ಷ ವೀರಯ್ಯ ಅವರನ್ನು ಸಿಐಡಿ ಬಂಧಿಸಿತ್ತು. ತುಂಡು ಗುತ್ತಿಗೆ ಇಲ್ಲದೆ ಹೋದರೂ ಎರಡು ಕೋಟಿ ಮೌಲ್ಯದ ಕೆಲಸಗಳನ್ನು ಟೆಂಡರ್ ಕರೆಯದೆ ಗುತ್ತಿಗೆ ನೀಡಬಹುದು ಎಂಬ ರೀತಿಯಲ್ಲಿ ದಾಖಲೆಗಳನ್ನು ತಿರುಚಲಾಗಿದ್ದು, ಕಾಮಗಾರಿ ಪೂರ್ತಿಗೊಳಿಸದೆ ಗುತ್ತಿಗೆದಾರರಿಗೆ ಪೂರ್ತಿ ಹಣ ಬಿಡುಗಡೆ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 765 ಕಡತಗಳ ಜಪ್ತಿ ಮಾಡಲಾಗಿದ್ದು, 380 ಬ್ಯಾಂಕ್ ಖಾತೆಗಳ ಡಾಟಾ ವಿಶ್ಲೇಷಣೆ ಮಾಡಲಾಗಿತ್ತು.