ಒಂದೂ ಕಡತ ಬಾಕಿ ಮಾಡದೆ ಸೇವಾ ನಿವೃತ್ತಿ: ಬೆಳಿಗ್ಗೆ 9ರಿಂದ ಸಂಜೆ 7ಗಂಟೆ ವರೆಗೆ ಕೆಲಸ: 3 ಕೃತಿಗಳ ಬಿಡುಗಡೆ ಜೊತೆಗೆ ಅಪರೂಪದ ಸರ್ಕಾರಿ ಅಧಿಕಾರಿ ವೃತ್ತಿ ಜೀವನಕ್ಕೆ ವಿದಾಯ
ಒಂದೂ ಕಡತ ಬಾಕಿ ಮಾಡದೆ ಸೇವಾ ನಿವೃತ್ತಿ: ಬೆಳಿಗ್ಗೆ 9ರಿಂದ ಸಂಜೆ 7ಗಂಟೆ ವರೆಗೆ ಕೆಲಸ: 3 ಕೃತಿಗಳ ಬಿಡುಗಡೆ ಜೊತೆಗೆ ಅಪರೂಪದ ಸರ್ಕಾರಿ ಅಧಿಕಾರಿ ವೃತ್ತಿ ಜೀವನಕ್ಕೆ ವಿದಾಯ
ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಾಸನ ಜಿಲ್ಲೆಯ ಖಡಕ್ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ಶಾಖಾಧಿಕಾರಿ ಹರೀಶ್ ಕಟ್ಟೆಬೆಳಗುಲಿ ಅವರು ಸೇವಾ ನಿವೃತ್ತಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಎಲ್ಲರನ್ನೂ ಚಕಿತಗೊಳಿಸುವ ರೀತಿಯಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ದಿನದಲ್ಲಿ ಏಕಕಾಲಕ್ಕೆ ತಮ್ಮ ಸಾಹಿತ್ಯ ಸೇವೆಯ ಮೂರು ಅಪೂರ್ವ ಕೃತಿಗಳನ್ನು ಬಿಡುಗಡೆ ಮಾಡಿದ್ದು ಒಂದು ಕಡೆಯಾದರೆ, ತಮ್ಮ ವೃತ್ತಿ ಜೀವನದಲ್ಲಿ ಒಂದು ಸಣ್ಣ ಕಳಂಕವೂ ಬಾರದಂತೆ ನೋಡಿಕೊಂಡದ್ದು ಇನ್ನೊಂದೆಡೆ.
36 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಬೆಳಿಗ್ಗೆ 9ಗಂಟೆಗೆ ಕಚೇರಿಗೆ ಹಾಜರು. ಸಂಜೆ 7 ಗಂಟೆಯ ವರೆಗೆ ಕಚೇರಿಯಲ್ಲಿ ಇದ್ದು, ಆ ದಿನದ ಕಡತಗಳನ್ನು ಆ ದಿನವೇ ವಿಲೇವಾರಿ ಮಾಡಿದ್ದು ಒಂದು ಸಾಧನೆಯೇ ಸರಿ.
ಅವರು ತಮ್ಮ ವೃತ್ತಿಜೀವನದ ಕೊನೆಯ ದಿನದಂದೂ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿಯೇ ಹಿರಿಯ ಅಧಿಕಾರಿಯಿಂದ ಸೈ ಎನಿಸಿಕೊಂಡು 'ರಿಲೀವ್' ಆಗಿದ್ದಾರೆ.
ಒಂದು ದಿನವೂ ಈ ಸಂಪ್ರದಾಯಕ್ಕೆ ಬ್ರೇಕ್ ಹಾಕದ ಹರೀಶ್ ಕಟ್ಟೆಬೆಳಗುಲಿ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ 46 ಉಪ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಎಲ್ಲ ಅಧಿಕಾರಿಗಳು, ಹಿರಿಯ ಕಿರಿಯ ಸಹೋದ್ಯೋಗಿಗಳ ಜೊತೆಗೆ ಹೊಂದಿಕೊಂಡು ಹೋಗುವ ಸ್ವಭಾವವನ್ನು ಎಲ್ಲರೂ ಮನಸಾರೆ ಮೆಚ್ಚುಕೊಂಡಿದ್ದಾರೆ.
ಯಾರ ಜೊತೆಗೂ ಹಮ್ಮುಬಿಮ್ಮು ಇಲ್ಲದ ಶಾಂತಚಿತ್ತದ ಸದಾ ಹರಿಯುವ ನಿರ್ಮಲ ನದಿ. ಕಚೇರಿಯಲ್ಲಿ, ಸೇವೆ ಮಾಡಿದ ಇಲಾಖೆಯಲ್ಲಿ ಅವರ ಬಗ್ಗೆ ಯಾವ ರೀತಿಯ ಅಭಿಮಾನ ಇದೆ ಎಂಬುದನ್ನು ನೋಡಲು ಅವರ ವಿದಾಯ ಕಾರ್ಯಕ್ರಮ ಮತ್ತು ಮೂರು ಕೃತಿಗಳ ಬಿಡುಗಡೆಗೆ ಸೇರಿದ ಜನಸ್ತೋಮವೇ ಸಾಕ್ಷಿ.
ಹಾಸನ, ಚಿಕ್ಕಮಗಳೂರು, ಮಂಗಳೂರು, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಅಧಿಕಾರಿಗಳು, ನಿವೃತ್ತರು, ಶಿಕ್ಷಕರು, ಸಹೋದ್ಯೋಗಿಗಳು, ಬಂಧುಗಳು, ಮಿತ್ರರು ಮತ್ತು ಅಭಿಮಾನಿಗಳ ದಂಡೇ ಅವರನ್ನು ಬೀಳ್ಕೊಡಲು ಹಾಸನಕ್ಕೆ ಆಗಮಿಸಿತ್ತು. ವಿವಿಧ ಸಂಘಟನೆಗಳ ನಾಯಕರೂ ಹರೀಶ್ ಕಟ್ಟೆಬೆಳಗುಲಿ ಅವರಿಗೆ ಶುಭ ಹಾರೈಸಿದರು.
ಇಂತಹ ಅಧಿಕಾರಿಗೆ ನಿಮ್ಮ ಒಂದು ಮೆಚ್ಚುಗೆಯ ಅಭಿನಂದನೆ ಇರಲಿ.
ಹರೀಶ್ ಕಟ್ಟೆಬೆಳಗುಲಿ: 9448346347 (ವಾಟ್ಸ್ಯಾಪ್)