ಶಿವಮೊಗ್ಗ DySPಯಿಂದ ಕಿರುಕುಳ ಆರೋಪ: ಹೈಕೋರ್ಟ್ ಕಲಾಪದಲ್ಲಿ ರಕ್ಷಣೆಗೆ ಅಂಗಲಾಚಿದ ಕೆಪಿಟಿಸಿಎಲ್ ಅಧಿಕಾರಿ- ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದ್ದೇನು..?
ಶಿವಮೊಗ್ಗ DySPಯಿಂದ ಕಿರುಕುಳ ಆರೋಪ: ಹೈಕೋರ್ಟ್ ಕಲಾಪದಲ್ಲಿ ರಕ್ಷಣೆಗೆ ಅಂಗಲಾಚಿದ ಕೆಪಿಟಿಸಿಎಲ್ ಅಧಿಕಾರಿ- ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದ್ದೇನು..?
ಶಿವಮೊಗ್ಗದ ಉಪ ಪೊಲೀಸ್ ವರಿಷ್ಟಾಧಿಕಾರಿಯವರು ಸೇರಿದಂತೆ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಪಿಟಿಸಿಎಲ್ ಅಧಿಕಾರಿಯೊಬ್ಬರು ಹೈಕೋರ್ಟ್‌ನ ಬಹಿರಂಗ ಕಲಾಪದಲ್ಲಿ ಆರೋಪಿಸಿ ರಕ್ಷಣೆಗೆ ಅಂಗಲಾಚಿದ ಘಟನೆ ನಡೆದಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಈ ಘಟನೆ ನಡೆಯಿತು. ಅಧಿಕಾರಿಯ ಎಲ್ಲ ಮಾತುಗಳನ್ನು ಸಾವಧಾನದಿಂದ ಆಲಿಸಿದ ನ್ಯಾಯಾಲಯ, ಈ ವಿಚಾರವನ್ನು ಅಧಿಕಾರಿಗೆ ತಿಳಿಸುವಂತೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಿಗೆ ತಿಳಿಸಿದ್ದು, ಇಂತಹ ಕೃತ್ಯದಿಂದ ಹಿಂದೆ ಸರಿಯುವಂತೆ ಡಿವೈಎಸ್‌ಪಿಗೆ ನಿರ್ದೇಶಿಸುವಂತೆ ಸೂಚಿಸಿದೆ.
ನಾನು ನ್ಯಾಯಾಲಯ ಬಿಟ್ಟು ಹೋಗಲ್ಲ. ನನ್ನನ್ನು ಕಾಪಾಡಿ. ಶಿವಮೊಗ್ಗದ ಸಾಗರ ಡಿವೈಎಸ್‌ಪಿ ಸೇರಿದಂತೆ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅಂಗಲಾಚಿದ್ದ ವೇಳೆ ಸ್ವತಃ ನ್ಯಾಯಮೂರ್ತಿಗಳೇ ಚಕಿತಗೊಂಡರು.
ಬೆಳಿಗ್ಗಿನ ಕಲಾಪ ಮುಗಿದು ಊಟಕ್ಕೆ ನ್ಯಾಯಮೂರ್ತಿಗಳು ಎದ್ದೇಳಲು ಸಿದ್ಧರಾದಾಗ, ಶಿವಮೊಗ್ಗದ ಸಾಗರ ಆನಂದಪುರದ ಸಹಾಯಕ ಎಂಜಿನಿಯರ್ ಶಾಂತಕುಮಾರ್ ಸ್ವಾಮಿ ಅವರು ಕೈಮುಗಿದು ತಮ್ಮ ಪ್ರಾರ್ಥನೆಯನ್ನು ಮಾಡಿಕೊಂಡರು.
ನನ್ನ ಮೇಲೆ ಸುಳ್ಳು ಕೇಸು ಹಾಕಿ ಹಣ ದೋಚಲು ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಪೊಲೀಸರು ಹವಣಿಸುತ್ತಿದ್ದಾರೆ. ನನ್ನ ವಿವಾಹ ನಿಶ್ಚಯವಾಗಿ ಅದೂ ರದ್ದಾಗಿದೆ. ಹಣದ ಬೇಡಿಕೆ ಬಗ್ಗೆ ನಾನು ಲೋಕಾಯುಕ್ತರಿಗೆ ಆಡಿಯೋ ರೆಕಾರ್ಡ್ ಸಹಿತ ದೂರು ನೀಡಿದ್ದೇನೆ. ಇದರಿಂದ ನನಗೆ ಕಿರುಕುಳ ನೀಡಲಾಗುತ್ತಿದೆ. ಸಾಗರದಲ್ಲಿ ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಬೆಂಗಳೂರಿಗೆ ಟ್ರಾನ್ಸ್‌ಫರ್ ಕೇಳಿದ್ದೇನೆ ಎಂದು ಅವರು ಅಲವತ್ತುಕೊಂಡರು.
ಕೆಪಿಟಿಸಿಎಲ್ ಅಧಿಕಾರಿ ಶಾಂತಕುಮಾರ್ ತಮ್ಮ ವಿರುದ್ಧದ ಕೇಸುಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆದಾಗ ಅವರು ಸ್ವತಃ ಪಕ್ಷಕಾರರಾಗಿ ಕಲಾಪದಲ್ಲಿ ಹಾಜರಾಗಿದ್ದರು.
ಹೈಕೋರ್ಟ್‌ನಲ್ಲಿ ಪೊಲೀಸರ ಬಗ್ಗೆ ದೂರುತ್ತೀಯಾ..? ನಿನ್ನ ಮೇಲೆ ಗಾಂಜಾ ಪ್ರಕರಣದ ಜೊತೆಗೆ ಬೇರೆ ಸೆಕ್ಷನ್ ಸೇರಿಸಿ ಪ್ರಕರಣ ದಾಖಲಿಸುತ್ತೇನೆ. ರಿವಾಲ್ವರ್ ಗುರಿ ಇಟ್ಟು ಎನ್‌ಕೌಂಟರ್ ಮಾಡುತ್ತೇನೆ. ರೌಡಿ ಶೀಟ್ ತೆರೆಯುತ್ತೇನೆ ಎಂದೆಲ್ಲ ಬೆದರಿಸಲಾಗಿದೆ ಎಂದು ಅಧಿಕಾರಿ ಕಲಾಪದಲ್ಲಿ ವಿವರಿಸಿದರು.