BNSS : ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ - ದೇಶದ ಮೊದಲ ತೀರ್ಪು ಪ್ರಕಟ
BNSS : ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ - ದೇಶದ ಮೊದಲ ತೀರ್ಪು ಪ್ರಕಟ
ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (BNSS)ಗೆ ಸಂಬಂಧಿಸಿದಂತೆ ದೇಶದಲ್ಲೇ ಮೊದಲ ತೀರ್ಪು ಪ್ರಕಟವಾಗಿದ್ದು, ಕರ್ನಾಟಕ ಹೈಕೋರ್ಟ್ ಈ ತೀರ್ಪನ್ನು ಪ್ರಕಟಿಸಿದೆ.
ಖಾಸಗಿ ದೂರು (ಪಿಸಿಆರ್) ದಾಖಲಿಸುವ ಮುನ್ನ ಅನುಸರಿಸಬೇಕಾದ ನ್ಯಾಯಿಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಶಾಸಕರು-ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ವಿಜಯನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಈ ತೀರ್ಪು ನೀಡಲಾಗಿದೆ.
ಬಿಎನ್ಎಸ್ಎಸ್ 2023ರ ಸೆಕ್ಷನ್ 223 ಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ಸೆಕ್ಷನ್ 223 ಪ್ರಕಾರ ಖಾಸಗಿ ದೂರನ್ನು ದಾಖಲಿಸಿಕೊಳ್ಳುವ ಮೊದಲಿಗೆ ಆರೋಪಿಗೆ ದೂರಿನ ಪ್ರತಿ, ಪ್ರಥಮ ಮಾಹಿತಿ ವರದಿ- ಎಫ್‌ಐಆರ್, ಫಿರ್ಯಾದುದಾರ ಮತ್ತು ಸಾಕ್ಷಿಯ ಸ್ವಯಂ ಹೇಳಿಕೆ ಹಾಗೂ ಪೂರಕ ದಾಖಲೆಗಳನ್ನು ಒದಗಿಸಿ ನಿಮ್ಮ ವಿರುದ್ಧ ಸಲ್ಲಿಸಲಾದ ದೂರನ್ನು ಯಾಕೆ ದಾಖಲಿಸಿಕೊಳ್ಳಬಾರದು ಎಂಬುದು ವಿವರಿಸಿ ಎಂದು ಆರೋಪಿಗೆ ಕೇಳುವುದು ಕಡ್ಡಾಯ.
ಆರೋಪಿಯ ಉತ್ತರ ಸಮಂಜಸ ಎನಿಸಿದರಷ್ಟೇ ಅದನ್ನು ಸಂಜ್ಞೇಯ ಅಪರಾಧ ಎಂದು ಪರಿಗಣಿಸಬೇಕೋ ಬೇಡವೋ ಎಂಬ ತೀರ್ಮಾನವನ್ನು ಕೈಗೊರ್ಳಳಬೇಕು ಮತ್ತು ಮುಂದಿನ ನ್ಯಾಯಿಕ ಪ್ರಕ್ರಿಯೆಗೆ ಆದೇಶ ಹೊರಡಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು, ಸಂಸತ್ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ 42ನೇ ಎಸಿಎಂಎಂ ಕೋರ್ಟ್ 16-07-2024ರಂದು ನೀಡಿದ್ದ ಆದೇಶವನ್ನು ವಜಾಗೊಳಿಸಿದೆ.