ಮಹಿಳೆಯರಿಗೆ ಸಿಹಿ ಸುದ್ದಿ! ವೇತನ ಸಹಿತ ಮುಟ್ಟಿನ ರಜೆ ಅನುಷ್ಟಾನಕ್ಕೆ ಕರ್ನಾಟಕ ಸರ್ಕಾರ ಸಜ್ಜು
ಮಹಿಳೆಯರಿಗೆ ಸಿಹಿ ಸುದ್ದಿ! ವೇತನ ಸಹಿತ ಮುಟ್ಟಿನ ರಜೆ ಅನುಷ್ಟಾನಕ್ಕೆ ಕರ್ನಾಟಕ ಸರ್ಕಾರ ಸಜ್ಜು
ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಡಾ. ಸಪ್ನಾ ಮುಖರ್ಜಿ ಅವರ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಲಾಗಿದೆ.
ಈ ವಿಷಯವನ್ನು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ದೃಢಪಡಿಸಿದ್ದಾರೆ. ವರ್ಷದಲ್ಲಿ ಆರು ದಿನಗಳ ಕಾಲ ಮುಟ್ಟಿನ ರಜೆಯನ್ನು ವೇತನ ಸಹಿತ ನೀಡುವ ನಿಯಮವನ್ನು ಜಾರಿಗೊಳಿಸಲು ಚಿಂತನೆ ಮಾಡಲಾಗಿದೆ.
ಆರಂಭಿಕ ಹಂತವಾಗಿ ಖಾಸಗಿ ವಲಯಕ್ಕೆ ಮುಟ್ಟಿನ ರಜೆ ನೀತಿಯನ್ನು ಪರಿಚಯಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ನೀತಿ ರೂಪಿಸಿದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಇದನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.
ಸುಪ್ರೀಂ ಕೋರ್ಟ್ ಆದೇಶದಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯದಂತೆ ಮುಟ್ಟಿನ ರಜೆಯ ವಿಚಾರವಾಗಿ ಒಂದು ನೀತಿಯನ್ನು ರೂಪಿಸಲು ಡಾ. ಸಪ್ನಾ ಮುಖರ್ಜಿ ನೇತೃತ್ವದ ತಂಡವನ್ನು ರಚಿಸಿ ವರದಿ ನೀಡುವಂತೆ ಕೋರಲಾಗಿದೆ. ಈ ವರದಿಯನ್ನು ಆಧರಿಸಿ ಎಲ್ಲ ಇಲಾಖೆಗಳ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ.
ಮುಟ್ಟಿನ ರಜೆ ಮಹಿಳೆಯರಿಗೆ ಅನುಕೂಲವಾಗಬೇಕು. ಉದ್ಯೋಗದಾತರಿಗೆ ಪ್ರತಿಕೂಲವಾಗದಂತೆ ಇರಬೇಕು. ಉದ್ಯೋಗಿಗಳು ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ಉದ್ಯೋಗದಲ್ಲಿ ಭಾಗಿಯಾಗುವಂತೆ ಮಾಡಲು ಇದು ಸಹಕಾರಿಯಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ನಿಯಮ ರೂಪಿಸುತ್ತೇವೆ ಎಂದು ಸಚಿವಾಲಯ ಭರವಸೆ ನೀಡಿದೆ.