ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ: ದೇಶದ ಎಲ್ಲ ವಕೀಲರ ಸಂಘಗಳ ಮೂಲಕ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ
ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ: ದೇಶದ ಎಲ್ಲ ವಕೀಲರ ಸಂಘಗಳ ಮೂಲಕ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ
ನ್ಯಾಯಾಂಗದ ಸೇವೆಯನ್ನುಎತ್ತರಕ್ಕೆ ಏರಿಸುವ ನಿಟ್ಟಿನಲ್ಲಿ ಮತ್ತು ವಕೀಲರ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ ನೀಡುವಂತೆ ಎಲ್ಲ ಹಿರಿಯ ವಕೀಲರು ಮತ್ತು ವಕೀಲ ಸಂಸ್ಥೆಗಳಿಗೆ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ದೇಶದ ಎಲ್ಲ ರಾಜ್ಯ ವಕೀಲರ ಪರಿಷತ್ತಿನ ಮೂಲಕ ಎಲ್ಲ ವಕೀಲರ ಸಂಘಗಳಿಗೆ ಭಾರತೀಯ ವಕೀಲರ ಸಂಘ ಪತ್ರ ಬರೆದಿದೆ. ರಿಟ್ ಅರ್ಜಿ 10159/2024ರ ಪ್ರಕರಣದಲ್ಲಿ ದೆಹಲಿಯ ಹೈಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಭಾರತೀಯ ವಕೀಲರ ಪರಿಷತ್ತು ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವಕೀಲ ವೃತ್ತಿ ನಡೆಸುವ ಕಾನೂನು ಸಂಸ್ಥೆಗಳು ಮತ್ತು ಹಿರಿಯ ವಕೀಲರು ಕಾನೂನು ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಆದಾಯವನ್ನು ಹೊಂದಿದ್ದಾರೆ. ಆರಂಭದ ದಿನಗಳಲ್ಲಿ ವಕೀಲರು ಸಂಕಷ್ಟಮಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಹಂತದಲ್ಲಿ ಅವರಿಗೆ ಆರ್ಥಿಕ ನೆರವು ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಭಾರತೀಯ ವಕೀಲರ ಪರಿಷತ್ತು, ನವ ವಕೀಲರಿಗೆ ಮತ್ತು ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ ನೀಡುವಂತೆ ಮಾರ್ಗಸೂಚಿ ಹೊರಡಿಸಿದೆ.
ನಗರ ಪ್ರದೇಶದಲ್ಲಿ ಹಿರಿಯ ವಕೀಲರು ಹಾಗೂ ಕಾನೂನು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಿಯ ಹಾಗೂ ಜ್ಯೂನಿಯರ್ ವಕೀಲರಿಗೆ ಕನಿಷ್ಟ ರೂ. 20,000/- ಗೌರವ ಸಂಭಾವನೆ ನೀಡಬೇಕು.
ಗ್ರಾಮೀಣ ಪ್ರದೇಶದಲ್ಲಿ ಹಿರಿಯ ವಕೀಲರು ಹಾಗೂ ಕಾನೂನು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಿಯ ಹಾಗೂ ಜ್ಯೂನಿಯರ್ ವಕೀಲರಿಗೆ ಕನಿಷ್ಟ ರೂ. 15,000/- ಗೌರವ ಸಂಭಾವನೆ ನೀಡಬೇಕು.
ಈ ಕನಿಷ್ಟ ಗೌರವ ಸಂಭಾವನೆಯು ಕಾಲ ಕಾಲಕ್ಕೆ ವಕೀಲ ಸಮುದಾಯದ ಸೂಕ್ತ ಪರಾಮರ್ಶೆ ನಡೆಸಿ ಅವಲೋಕನದ ಬಳಿಕ ಪರಿಷ್ಕರಿಸಬೇಕು ಎಂದು ಭಾರತೀಯ ವಕೀಲರ ಪರಿಷತ್ತು ತನ್ನ ಪತ್ರದಲ್ಲಿ ತಿಳಿಸಿದೆ.