ಲಾಕಪ್ ಡೆತ್ ಪ್ರಕರಣ: ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು ಶಿಕ್ಷೆ, ತಲಾ 50 ಸಾವಿರ ರೂ.ದಂಡ!
ಲಾಕಪ್ ಡೆತ್ ಪ್ರಕರಣ: ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು ಶಿಕ್ಷೆ, ತಲಾ 50 ಸಾವಿರ ರೂ.ದಂಡ!
ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯಲ್ಲಿ ಆರೋಪಿಯೊಬ್ಬರ ಸಾವಿನ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸ್ ಕಾನ್ಸ್‌ಟೆಬಲ್‌ಗಳಿಗೆ ಏಳು ವರ್ಷ ಜೈಲು ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ 51ನೇ ಹೆಚ್ಚು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.
ಬೆಂಗಳೂರಿನ 51ನೇ ಹೆಚ್ಚು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಧ ಯಶವಂತ ಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ.
ಹಲಸೂರು ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಏಜಾಜ್ ಖಾನ್, ರಾಮಮೂರ್ತಿ ನಗರ ಠಾಣೆಯ ಕಾನ್ಸ್‌ಟೆಬಲ್ ಕೇಶಮೂರ್ತಿ ಹಾಗೂ ಇಂದಿರಾ ನಗರ ಸಂಚಾರ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್ ಮೋಹನ್ ರಾಮ್ ಮತ್ತು ಇಂದಿರಾ ನಗರದ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್ ಸಿದ್ದಪ್ಪ ಬೊಮ್ಮನಹಳ್ಳಿ ಅವರು ಈ ಶಿಕ್ಷೆಗೆ ಗುರಿಯಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಉದ್ದೇಶಪೂರ್ವಕವಲ್ಲದ ಕೊಲೆ ಅಪರಾಧಕ್ಕೆ ಅಪರಾಧಿ ಪೊಲೀಸರಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇದೇ ವೇಳೆ, ತಪ್ಪೊಪ್ಪಿಕೊಳ್ಳಲು ತೊಂದರೆ ನೀಡಿದ ಅಪರಾಧಕ್ಕೆ ಐದು ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಎಲ್ಲ ಅಪರಾಧಿಗಳ ಶಿಕ್ಷೆಯ ಅವಧಿಯು ಏಕಕಾಲಕ್ಕೆ ಅನ್ವಯಿಸಲಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ದಂಡದ ಮೊತ್ತದಲ್ಲಿ ಪ್ರತಿ ಆರೋಪಿಯು ತಲಾ 50 ಸಾವಿರ ರೂ.ಗಳನ್ನು ಮೃತ ಮಹೇಂದ್ರ ರಾಥೋಡ್ ಅವರ ಅವಲಂಬಿತರಿಗೆ ಪಾವತಿಸಬೇಕು. ಸಂತ್ರಸ್ತರ ಪರಿಹಾರ ಯೋಜನೆ 2011ರ ಅಡಿಯಲ್ಲಿ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪರಿಹಾರ ನಿರ್ಧರಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ವಿವರ:
ಅಪರಾಧ ಪ್ರಕರಣವೊಂದರ ವಿಚಾರಣೆಗಾಗಿ ಆರೋಪಿ ಮಹೇಂದ್ರ ರಾಥೋಡ್ ಎಂಬವರನ್ನು 2016ರ ಮಾರ್ಚ್ 19ರಂದು ಜೀವನ್ ಬಿಮಾ ನಗರ ಠಾಣೆಯ ಇನ್ಸ್‌ಪೆಕ್ಟರ್ ಎಂ.ಎಸ್. ಹಿತೇಂದ್ರ ಅವರು ಕರೆದು ತಂದಿದ್ದರು.
ಸಂಜೆಯ 4-15ರ ವೇಳೆಗೆ ಕ್ರಿಕೆಟ್ ಸ್ಟೇಡಿಯಂ ಬಂದೋಬಸ್ತ್ ಸಲುವಾಗಿ ಠಾಣೆಯಿಂದ ಹೊರಗೆ ಹೋಗಿದ್ದರು. ಇದೇ ವೇಳೆ, ಠಾಣೆಯಲ್ಲಿ ಅಪರಾಧ ವಿಭಾಗದ ಪೊಲೀಸರಾದ ಏಜಾಜ್ ಖಾನ್ ಮತ್ತು ಇತರರು ಸೇರಿ ಮಹೇಂದ್ರ ರಾಥೋಡ್ ಎಂಬವರ ಮೇಲೆ ಲಾಠಿ ಮತ್ತು ರೋಲರ್ ಬಳಸಿ ಹೊಡೆದು ಅಮಾನವೀಯವಾಗಿ ಹಲ್ಲೆ ನಡೆಸಿ ದೈಹಿಕವಾಗಿ ಹಿಂಸಿಸಿದರು.
ಮಹೇಂದ್ರ ರಾಥೋಡ್ ಎಂಬವರ ಮೇಲೆ ನಡೆದ ಹಲ್ಲೆಯಿಂದ ಕಸ್ಟಡಿಯಲ್ಲಿ ಇದ್ದ ಆರೋಪಿ ಮಹೇಂದ್ರ ಅವರ ದೇಹದ ಸೂಕ್ಷ್ಮ ಭಾಗಗಳಿಗೆ ಬಲವಾದ ಏಟು ಬಿದ್ದ ಕಾರಣ ಮೆದುಳು, ಕಿಡ್ನಿ, ಹೃದಯ ಮತ್ತು ಶ್ವಾಸಕೋಶಕ್ಕೆ ಆಮ್ಲಜನಕ ಪೂರೈಕೆಯಾಗದೆ ಮಹೇಂದ್ರ ರಾಥೋಡ್ ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಜಾಜ್ ಖಾನ್ ಮತ್ತು ಇತರರ ಮೇಲೆ ಅದೇ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ನಂತರ ತನಿಖೆ ಸಿಐಡಿ ಗೆ ವರ್ಗಾವಣೆಯಾಘಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಐಡಿ ಎಸ್.ಟಿ. ಚಂದ್ರಶೇಖರ್ ಅವರು ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ದಾಖಲಿಸಿದ್ದರು.