![ರಜೆ ಪಡೆಯದೆ ಕರ್ತವ್ಯಕ್ಕೆ ಅನಧಿಕೃತ ಗೈರು ನೌಕರನ 'ಹಕ್ಕು' ಅಲ್ಲ: ವಜಾ ಮಾಡಲು ಇದು ಸಕಾರಣ ಎಂದ ಕರ್ನಾಟಕ ಹೈಕೋರ್ಟ್ ರಜೆ ಪಡೆಯದೆ ಕರ್ತವ್ಯಕ್ಕೆ ಅನಧಿಕೃತ ಗೈರು ನೌಕರನ 'ಹಕ್ಕು' ಅಲ್ಲ: ವಜಾ ಮಾಡಲು ಇದು ಸಕಾರಣ ಎಂದ ಕರ್ನಾಟಕ ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEiIihza3QPxmrxs27qEw55chIaxEHtzyxzdAQILr1cukNQcZs-zkpdcgaaqoZ12decava3G_YyywVhNXKr5McEQq8_DcooTeBo_KbbiEJbBpWBrkJ5RPfkx5nPwrPgy0AUnJ-IciheO2Wp0-VLYqQrk3CHG8z45vnjX0TqBB4E-F6jNYWt3dwgg7FZVkHlb/w640-h428/Justice%20and%20Equity.jpg)
ರಜೆ ಪಡೆಯದೆ ಕರ್ತವ್ಯಕ್ಕೆ ಅನಧಿಕೃತ ಗೈರು ನೌಕರನ 'ಹಕ್ಕು' ಅಲ್ಲ: ವಜಾ ಮಾಡಲು ಇದು ಸಕಾರಣ ಎಂದ ಕರ್ನಾಟಕ ಹೈಕೋರ್ಟ್
ರಜೆ ಪಡೆಯದೆ ಕರ್ತವ್ಯಕ್ಕೆ ಅನಧಿಕೃತ ಗೈರು ನೌಕರನ 'ಹಕ್ಕು' ಅಲ್ಲ: ವಜಾ ಮಾಡಲು ಇದು ಸಕಾರಣ ಎಂದ ಕರ್ನಾಟಕ ಹೈಕೋರ್ಟ್
ಮೇಲಾಧಿಕಾರಿಗಳ ಅನುಮತಿ ಪಡೆಯದೆ ರಜೆ ಹಾಕಿ ಕರ್ತವ್ಯಕ್ಕೆ ಗೈರು ಹಾಜರಾಗುವುದು ದುರ್ನಡತೆ ಎಂದು ಪರಿಗಣಿಸಬಹುದು. ಈ ಕಾರಣ ಆ ನೌಕರನನ್ನು ವಜಾ ಮಾಡಲು ಅರ್ಹವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ರಜೆ ಪಡೆಯದೆ ಉದ್ಯೋಗಕ್ಕೆ ಗೈರು ಹಾಜರಾದ ಕಾರಣಕ್ಕೆ ಉದ್ಯೋಗಿಯ ವಜಾ ಮಾಡಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಅನಧಿಕೃತವಾಗಿ ಉದ್ಯೋಗಕ್ಕೆ ಗೈರು ಹಾಜರಾದ ಚಾಲಕ ದೇವಪ್ಪ ಎಂಬವರನ್ನು ಬಿ ಎಂ ಟಿ ಸಿ ಕೆಲಸದಿಂದ ತೆಗೆದುಹಾಕಿತ್ತು. ದೇವಪ್ಪ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಕಾರ್ಮಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಚಾಲಕನ ವಜಾ ಆದೇಶವನ್ನು ರದ್ದುಪಡಿಸಲಾಗಿತ್ತು.
ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಉದ್ಯೋಗಕ್ಕೆ ಹಾಜರಾಗಬೇಕಾದ ಸಮಯದಲ್ಲಿ ಸಕಾರಣವಿಲ್ಲದೆ ಗೈರು ಹಾಜರಾಗಬಾರದು ಎಂಬ ಹೊಣೆಗಾರಿಕೆ ಉದ್ಯೋಗಿಯ ಮೇಲೆ ಇರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಔದ್ಯೋಗಿಕ ಕಾರಣದಲ್ಲಿ ರಜೆ ಮಂಜೂರಾಗದೆ ಗೈರು ಹಾಜರಾಗುವುದು ದುರ್ನಡತೆಯೇ ಆಗುತ್ತದೆ. ಇಂತಹ ನಡವಳಿಕೆ ನೌಕರನ ವಿರುದ್ಧ ಶಿಸ್ತು ಕ್ರಮ ಜರಗಿಸಲು ಅರ್ಹವಾಗುತ್ತದೆ. ರಜೆ ಮಂಜೂರಾಗದೆ ಗೈರು ಹಾಜರಾಗುವುದನ್ನು ನೌಕರನು ತನ್ನ ಹಕ್ಕು ಎಂಬುದಾಗಿ ಪರಿಗಣಿಸಬಾರದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಅನುಮತಿ ಪಡೆಯದೆ, ಅನಧಿಕೃತವಾಗಿ ರಜೆ ಹಾಕಿದ ತಪ್ಪಿತಸ್ಥ ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಜರಗಿಸುವುದು ಸಮರ್ಥನೀಯವಾಗಿದೆ. ಈ ಪ್ರಕರಣದಲ್ಲಿ ರಜೆ ಕೋರಿ ಅರ್ಜಿ ಸಲ್ಲಿಸದೆ ಮತ್ತು ಉನ್ನತ ಅಧಿಕಾರಿಗಳ ಪೂರ್ವ ಅನುಮತಿ ಪಡೆಯದೆ ಉದ್ಯೋಗಕ್ಕೆ ಅನಧಿಕೃತವಾಗಿ ರಜೆ ಹಾಕಿರುವುದು ಮೇಲ್ ನೋಟಕ್ಕೆ ಸಾಬೀತಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿದೆ.
ಹೀಗಿದ್ದರೂ ದೇವಪ್ಪನನ್ನು ಸೇವೆಗೆ ಮರು ನಿಯೋಜಿಸಿಕೊಳ್ಳಲು ಕಾರ್ಮಿಕ ನ್ಯಾಯಾಲಯ ಬಿಎಂಟಿಸಿಗೆ ನಿರ್ದೇಶನ ನೀಡಿರುವ ಆದೇಶ ದೋಷಪೂರಿತವಾಗಿದೆ ಉದ್ಯೋಗಿಗಳ ಅನಧಿಕೃತ ಗೈರನ್ನು ಕಾರ್ಮಿಕ ನ್ಯಾಯಾಲಯವು ಲಘುವಾಗಿ ಪರಿಗಣಿಸಬಾರದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ವಿವರಿಸಿದೆ.
ಪ್ರಕರಣದ ವಿವರ
ಬಿಎಂಟಿಸಿಯ ಚಾಲಕ ದೇವಪ್ಪ ಎಂಬವರು 2017ರ ನವಂಬರ್ 24 ರಿಂದ ರಜೆ ಮಂಜೂರಾಗದಿದ್ದರೂ ಮೇಲಾಧಿಕಾರಿಗಳ ಪೂರ್ವ ಅನುಮತಿ ಪಡೆಯದೆ ತನ್ನ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿದ್ದರು. ಈ ಕುರಿತು ಡಿಪೋ ವ್ಯವಸ್ಥಾಪಕರು 2017ರ ಡಿಸೆಂಬರ್ 4ರಂದು ವರದಿ ಸಲ್ಲಿಸಿದ್ದರು.
ಡಿಸೆಂಬರ್ 9ರಂದು ಮತ್ತು 2017ರ ಏಪ್ರಿಲ್ 13ರಂದು ದೇವಪ್ಪ ಅವರಿಗೆ ಬಿಎಂಟಿಸಿ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸಿನಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿತ್ತು. ಆದರೂ ದೇವಪ್ಪ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಅಲ್ಲದೆ, ಚಾರ್ಜ್ ಮೆಮೊ ಸ್ವೀಕರಿಸದೆ ನೋಟಿಸ್‌ಗೂ ಉತ್ತರ ನೀಡದೆ ದೇವಪ್ಪ ಕರ್ತವ್ಯ ಲೋಪ ಎಸಗಿದ್ದರು.
ಆ ಬಳಿಕ, ಸದ್ರಿ ಪ್ರಕರಣವನ್ನು ಇಲಾಖಾ ತನಿಖೆಗೆ ಒಳಪಡಿಸಿತು. ಬಿಎಂಟಿಸಿ ಶಿಸ್ತು ಪ್ರಾಧಿಕಾರ ವಿಚಾರಣಾಧಿಕಾರಿಯನ್ನು ನಿಯೋಜಿಸಿತ್ತು ದೇವಪ್ಪ ಅವರು ವಿಚಾರಣಾಧಿಕಾರಿಯ ಮುಂದೆಯೂ ಹಾಜರಾಗಲಿಲ್ಲ. ವಿಚಾರಣೆ ನಡೆಸಿದ ಅಧಿಕಾರಿಯವರು, ದೇವಪ್ಪ ಅವರ ಮೇಲಿನ ಆರೋಪ ಸಾಬೀತಾಗಿದೆ ಎಂದು ವರದಿ ಸಲ್ಲಿಸಿದ್ದರು.
ಈ ವರದಿಯನ್ನು ಆಧರಿಸಿ ಶಿಸ್ತು ಕ್ರಮ ಪ್ರಾಧಿಕಾರವು ದೇವಪ್ಪ ಅವರನ್ನು ಸೇವೆಯಿಂದ ವಚಗೊಳಿಸಿ 2020ರ ಆಗಸ್ಟ್ 31 ರಂದು ಆದೇಶ ನೀಡಿತ್ತು. ಬಿಎಂಟಿಸಿ ಕ್ರಮವನ್ನು ಪ್ರಶ್ನಿಸಿ ದೇವಪ್ಪ ಅವರು ಕಾರ್ಮಿಕ ನ್ಯಾಯಾಲಯದ ಮೊರೆ ಹೋದರು.
ತನಗೆ ಬೆನ್ನು ನೋವು ಕಾಡುತ್ತಿದ್ದ ಕಾರಣಕ್ಕೆ ಉದ್ಯೋಗಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು ಇದನ್ನು ಒಪ್ಪಿದ್ದ ಕಾರ್ಮಿಕ ನ್ಯಾಯಾಲಯ ಸೇವೆಯಿಂದ ವಜಗೊಂಡರೆ ದೇವಪ್ಪ ನಿರುದ್ಯೋಗಿಯಾಗುತ್ತಾರೆ, ಜೀವನ ನಡೆಸಲು ಮತ್ತು ಕುಟುಂಬವನ್ನು ನಿರ್ವಹಣೆ ಮಾಡಲು ಕಷ್ಟವಾಗುತ್ತದೆ ಎಂದು ಅನುಕಂಪ ತೋರಿಸಿ ದೇವಪ್ಪ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಬಿಎಂಟಿಸಿಗೆ ನಿರ್ದೇಶನ ನೀಡಿತ್ತು.
ಪ್ರಕರಣ: ವಿಭಾಗೀಯ ನಿಯಂತ್ರಣಾದಿಕಾರಿ Vs ದೇವಪ್ಪ
ಕರ್ನಾಟಕ ಹೈಕೋರ್ಟ್, WP 14318/2024 Dated 08-11-2024