
ಸಿವಿಲ್ ಜಡ್ಜ್ ಆಗಲು ವಕೀಲಿಕೆಯ ಅನುಭವ ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಸಿವಿಲ್ ಜಡ್ಜ್ ಆಗಲು ವಕೀಲಿಕೆಯ ಅನುಭವ ಕಡ್ಡಾಯ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನ್ಯಾಯಾಂಗ ಸೇವೆಗೆ ಅರ್ಹತೆ ಪಡೆಯಲು ಕನಿಷ್ಟ ಮೂರು ವರ್ಷಗಳ ವಕೀಲ ವೃತ್ತಿಯ ಅನುಭವ ಕಡ್ಡಾಯವಾಗಿ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಬಿ. ಆರ್. ಗವಾಯಿ ನ್ಯಾಯಮೂರ್ತಿಗಳಾದ ಆಗಸ್ಟಿನ್ ಜಾರ್ಜ್ ಮಸೀಹ್ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಭ್ಯರ್ಥಿ ಆಗಲು 3 ವರ್ಷಗಳ ವಕೀಲಿಕೆ ಕಡ್ಡಾಯ. ಈ ಸಂಬಂಧ ಎಲ್ಲಾ ರಾಜ್ಯ ಸರಕಾರಗಳು ತಮ್ಮ ರಾಜ್ಯಗಳಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ನ್ಯಾಯಾಧೀಶರಾಗುವ ಅಭ್ಯರ್ಥಿಯು ಈ ಮೂರು ವರ್ಷಗಳ ಅವಧಿಯಲ್ಲಿ, ಒಂದು ವರ್ಷ ಕಾಲ ಕಾನೂನು ಗುಮಾಸ್ತರಾಗಿಯೂ ಸೇವೆ ಸಲ್ಲಿಸಿರಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ನ ಈ ಆದೇಶವು ಈಗಾಗಲೇ ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಅನ್ವಯಿಸುವುದಿಲ್ಲ. ಆದರೆ, ಭವಿಷ್ಯದ ಸಿವಿಲ್ ಜಡ್ಜ್ ನೇಮಕಾತಿಗಳಿಗೆ ಈ ತೀರ್ಪು ಅನ್ವಯವಾಗುತ್ತದೆ ಎಂಬುದನ್ನು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿದೆ.
ಕಾನೂನು ಪದವೀಧರರನ್ನು ನೇರವಾಗಿ ನ್ಯಾಯಾಧೀಶರನ್ನಾಗಿ ನೇಮಕ ಮಾಡುತ್ತಿರುವುದರಿಂದ ಬಹಳಷ್ಟು ಸಮಸ್ಯೆಗಳಾಗಿವೆ. ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಲಾಗಿರುವ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಅನನುಭವಿ ಕಾನೂನು ಪದವೀಧರರು ಸಮರ್ಪಕವಾಗಿ ಸಜ್ಜಾಗಿಲ್ಲ. ಜಡ್ಜ್ ಹುದ್ದೆಯನ್ನು ನೇರವಾಗಿ ನೇಮಕಗೊಂಡ ಕಾನೂನು ಪದವೀಧರರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ನ್ಯಾಯಪೀಠ ವಿವರಿಸಿದೆ.
ಪಠ್ಯದ ಅನುಭವದಿಂದ ಅಥವಾ ಪುಸ್ತಕದ ಜ್ಞಾನವಿದ್ದ ಮಾತ್ರಕ್ಕೆ ಕಾನೂನು ಪದವಿಧರರಿಗೆ ಕಾನೂನಿನ ಸೂಕ್ಷ್ಮಕ್ಕೆ ಸ್ಪಂದಿಸಲು ಆಗುವುದಿಲ್ಲ. ಅದಕ್ಕೆ ವಕೀಲ ವೃತ್ತಿಯ ಅನುಭವವು ಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಯುವ ವಕೀಲರು ತಮ್ಮ ಪ್ರಾಕ್ಟೀಸ್ ಸಮಯದಲ್ಲಿ ಹಿರಿಯ ವಕೀಲರಿಗೆ ಸಹಾಯ ಮಾಡುವ ಮೂಲಕ ನ್ಯಾಯಾಲಯವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಸ್ಪಂದಿಸಬಹುದು. ಹೀಗಾಗಿ ನೇಮಕಾತಿಗೂ ಮುನ್ನ ಕೆಲ ಸೇವೆಗಳಲ್ಲಿ ತೊಡಗಿರುವಂತೆ ವಕೀಲರಾಗಿ ಸೇವೆ ಸಲ್ಲಿಸುವುದು ಅಗತ್ಯವಾಗಿದೆ ಎಂಬುದನ್ನು ನ್ಯಾಯಪೀಠ ಒತ್ತಿ ಹೇಳಿದೆ.
ಮೂರು ವರ್ಷಗಳ ಕಾನೂನು ಪ್ರಾಕ್ಟಿಸ್ ಅನ್ನು ಕಾನೂನು ಪದವೀಧರರು ತಾತ್ಕಾಲಿಕ ದಾಖಲಾತಿಯ ಆಧಾರದ ಮೇಲೆ ತಮ್ಮ ವೃತ್ತಿ ಜೀವನ ಆರಂಭಿಸಿದ ದಿನದಿಂದ ಗಣನೆಗೆ ತೆಗೆದುಕೊಳ್ಳಬಹುದೇ ವಿನಃ ನ್ಯಾಯವಾದಿಗಳು ಅಖಿಲ ಭಾರತ ಪರೀಕ್ಷೆಯಲ್ಲಿ ಉತ್ತೀರ್ಣರಾದ ದಿನಾಂಕದಿಂದ ಅಲ್ಲ ಎಂಬುದನ್ನು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಅಭ್ಯರ್ಥಿ ಮೂರು ವರ್ಷಗಳ ಕಾಲ ಕಾನೂನು ಪ್ರಾಕ್ಟೀಸ್ ಮಾಡಿದ್ದಾರೆ ಎಂಬುದನ್ನು 10 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ವಕೀಲರಿಂದ ಪ್ರಮಾಣಿಕರಿಸಬೇಕು ಎಂಬ ಶರತ್ತನ್ನು ನ್ಯಾಯಾಲಯ ವಿಧಿಸಿದೆ. ಇದೇ ವೇಳೆ, ನ್ಯಾಯಾಧೀಶರಾಗಿ ಬಯಸುವ ಅಭ್ಯರ್ಥಿಯ ಕಾನೂನು ಗುಮಾಸ್ತಿಕೆಯ ಅನುಭವವನ್ನು ಪ್ರಾಕ್ಟೀಸ್ ಎಂಬುದಾಗಿಯೂ ಪರಿಗಣಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ