-->
NI Act Sec 138 | ಅಪ್ಪನ ಸಾಲಕ್ಕೆ ಮಗ ಹೊಣೆ?: ಸಾಲ ಮರುಪಾವತಿಸಲು ಕರ್ನಾಟಕ ಹೈಕೋರ್ಟ್‌ ಆದೇಶ

NI Act Sec 138 | ಅಪ್ಪನ ಸಾಲಕ್ಕೆ ಮಗ ಹೊಣೆ?: ಸಾಲ ಮರುಪಾವತಿಸಲು ಕರ್ನಾಟಕ ಹೈಕೋರ್ಟ್‌ ಆದೇಶ

ಅಪ್ಪನ ಸಾಲಕ್ಕೆ ಮಗ ಹೊಣೆ?: ಸಾಲ ಮರುಪಾವತಿಸಲು ಕರ್ನಾಟಕ ಹೈಕೋರ್ಟ್‌ ಆದೇಶ





ಅಪ್ಪ ಮಾಡಿದ್ದ ಸಾಲಕ್ಕೆ ಮಗ ಭದ್ರತೆಯಾಗಿ ಚೆಕ್ ನೀಡಿದ್ದರೆ, ಆತನೂ ಈ ಸಾಲಕ್ಕೆ ಬಾಧ್ಯಸ್ಥನಾಗುತ್ತಾನೆ ಹಾಗೂ ನೆಗೋಷಿಯಬಲ್ ಇನ್ಸ್‌ಟ್ರುಮೆಂಟ್ ಆಕ್ಟ್ ಪ್ರಕಾರ ಮಗ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.


"ಪ್ರಸಾದ್ ರಾಯ್ಕರ್ ವಿರುದ್ಧ ಬಿ.ಟಿ. ದಿನೇಶ್" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ದಾವಣಗೆರೆಯ ಬಿ.ಟಿ. ದಿನೇಶ್ ಎಂಬವರು ತಮ್ಮ ಅಪ್ಪ ಮಾಡಿದ್ದ ಸಾಲವನ್ನು ತೀರಿಸುವುದಾಗಿ ಭರವಸೆ ನೀಡಿದ್ದು, ಈ ಸಾಲದ ಪಾವತಿಯ ಖಾತ್ರಿಯಾಗಿ ಚೆಕ್ಕಗಳನ್ನು ನೀಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಫಿರ್ಯಾದಿ ಪ್ರಸಾದ್ ರಾಯ್ಕರ್ ಚೆಕ್ ಬೌನ್ಸ್ ಕೇಸು ದಾಖಲಿಸಿದ್ದರು.


ದೂರಿನ ವಿಚಾರಣೆ ನಡೆಸಿದ್ದ ದಾವಣಗೆರೆ ಜೆಎಂಎಫ್‌ಸಿ ನ್ಯಾಯಾಲಯ ಅಪ್ಪನ ಕಾನೂನು ಬದ್ಧ ವಾರಿಸುದಾರರಾದ ಮಗ ಸಾಲ ಮರುಪಾವತಿ ಮಾಡಬೇಕು ಎಂದು ಆದೇಶಿಸಿತ್ತು. ಆದರೆ, ಸೆಷನ್ಸ್ ನ್ಯಾಯಾಲಯ ಈ ತೀರ್ಪನ್ನು ರದ್ದುಪಡಿಸಿ, ಆರೋಪಿಯನ್ನು ಖುಲಾಸೆಗೊಳಿಸಿತ್ತು.


ಇದನ್ನು ಪ್ರಶ್ನಿಸಿ ಹೈಕೋರ್ಟ್ ಮುಂದೆ ದೂರುದಾರ ಪ್ರಸಾದ್ ರಾಯ್ಕರ್ ಮೇಲ್ಮನವಿ ಸಲ್ಲಿಸಿದ್ದರು.


ಚೆಕ್ ನೀಡಿದ ಬಳಿಕ ಕೇವಲ 10 ಸಾವಿರ ರೂ. ನೀಡಿದ್ದು, ಆ ಬಳಿಕ ತಮ್ಮ ತಂದೆ ಮಾಡಿದ ಸಾಲಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಹೇಳಿರುವುದು ಸರಿಯಲ್ಲ. ಎನ್.ಐ. ಕಾಯ್ದೆಯಡಿ ಅಪ್ಪನ ಸಾಲಕ್ಕೆ ಬಾಧ್ಯಸ್ಥನಾಗಿ ಮಗ ಚೆಕ್ ನೀಡಿದ್ದರೆ ಆತನೂ ಈ ಸಾಲದ ಮರುಪಾವತಿಗೆ ಹೊಣೆಗಾರ ಎಂದು ನ್ಯಾಯಪೀಠ ತಿಳಿಸಿತು.


ಪ್ರಕರಣದ ವಿವರ:

ದಾವಣಗೆರೆಯ ನಿವಾಸಿ ದಿನೇಶ್ ಎಂಬವರ ತಂದೆ ಭರಮಪ್ಪ ಎಂಬವರು ಪ್ರಸಾದ್ ಎಂಬವರಿಂದ 2003ರ ಮಾರ್ಚ್ 7ರಂದು 2.6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಶೇಕಾಡ 2ರ ಬಡ್ಡಿ ಸೇರಿಸಿ ಹಣ ಮರುಪಾವತಿ ಮಾಡುವುದಾಗಿ ಪ್ರಾಮಿಸರಿ ನೋಟ್ ಬರೆದುಕೊಟ್ಟಿದ್ದರು. ಆದರೆ, 2005ರಲ್ಲಿ ಭರಮಪ್ಪ ಮೃತಪಟ್ಟರು.


ಮೃತಪಟ್ಟ ಸಂದರ್ಭದಲ್ಲಿ ಈ ಸಾಲದ ಮೊತ್ತ ಬಡ್ಡಿ ಸೇರಿ 4.5 ಲಕ್ಷ ರೂಪಾಯಿ ಆಗಿತ್ತು. ಆ ಬಳಿಕ, ಭರಮಪ್ಪ ಅವರ ಪುತ್ರ ದಿನೇಶ್ 10 ಸಾವಿರ ರೂ. ಮರುಪಾವತಿ ಮಾಡಿ ಉಳಿದ ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಎರಡು ಚೆಕ್‌ಗಳನ್ನು ನೀಡಿದ್ದರು.


ಈ ಎರಡೂ ಚೆಕ್‌ಗಳು ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಕಾರಣಕ್ಕೆ ಅಮಾನ್ಯಗೊಂಡು ಹಿಂತಿರುಸಲಾಗಿತ್ತು. ಈ ಬಗ್ಗೆ ದೂರುದಾರ ಪ್ರಸಾದ್ ಕೋರ್ಟ್ ಮೆಟ್ಟಿಲೇರಿದ್ದರು.


ಪ್ರಕರಣ: ಪ್ರಸಾದ್ ರಾಯ್ಕರ್ ವಿರುದ್ಧ ಬಿ.ಟಿ. ದಿನೇಶ್

ಕರ್ನಾಟಕ ಹೈಕೋರ್ಟ್, Crl.A. 725/2011, Dated 02-01-2023


Ads on article

Advertise in articles 1

advertising articles 2

Advertise under the article