
ಆರೋಪಿಗೆ ಪೊಲೀಸ್ ಸಮನ್ಸ್ ಜಾರಿಗೊಳಿಸಲು ವಿದ್ಯುನ್ಮಾನ ತಂತ್ರಜ್ಞಾನ ಬಳಕೆ ಸಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಆರೋಪಿಗೆ ಪೊಲೀಸ್ ಸಮನ್ಸ್ ಜಾರಿಗೊಳಿಸಲು ವಿದ್ಯುನ್ಮಾನ ತಂತ್ರಜ್ಞಾನ ಬಳಕೆ ಸಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಯಾವುದೇ ಆರೋಪಿಗೆ ಪೊಲೀಸರು ತಮ್ಮ ಸಮಕ್ಷಮ ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ಜಾರಿಗೊಳಿಸಲು ವಿದ್ಯುನ್ಮಾನ ತಂತ್ರಜ್ಞಾನವನ್ನು ಬಳಕೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಶ್ರೀ ರಾಜೇಶ್ ಬಿಂದಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 35ರ ಪ್ರಕಾರ, ಆರೋಪಿಗೆ ತಮ್ಮ ಮುಂದೆ ಹಾಜರಾಗಲು ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಯು ವಾಟ್ಸ್‌ಆಪ್ ಅಥವಾ ಯಾವುದೇ ವಿದ್ಯುನ್ಮಾನ ತಂತ್ರಜ್ಞಾನದ ಮುಖಾಂತರ ನೋಟೀಸ್ ಜಾರಿಗೊಳಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಸದ್ರಿ ಪ್ರಕರಣದಲ್ಲಿ ತನಿಖಾಧಿಕಾರಿಯು ವಾಟ್ಸ್ಯಾಪ್ ಮೂಲಕ ನೋಟೀಸ್ ಜಾರಿಗೊಳಿಸಿದ್ದು, ವಿಚಾರಣೆಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಅರ್ಜಿದಾರರು ಹಾಜರಾಗದೆ ಗೈರಾಗಿದ್ದರು.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ಹಾಜರಾದ ವಕೀಲ ಸಿದ್ದಾರ್ಥ್ ಲೂಥ್ರಾ ಅವರು, ಸಿಆರ್‌ಪಿಸಿಯ ಸೆಕ್ಷನ್ 41-A ಅಥವಾ ಬಿಎನ್‌ಎಸ್‌ಎಸ್‌ನ ಸೆಕ್ಷನ್ 35ರ ಪ್ರಕಾರ ವೈಯಕ್ತಿಕವಾಗಿ, ಅಥವಾ ವಾಟ್ಸ್ಯಾಪ್, ಇಮೇಲ್, ಎಸ್‌ಎಂಎಸ್ ಅಥವಾ ಇನ್ಯಾವುದೋ ಎಲೆಕ್ಟ್ರಾನಿಕಲ್ ಮಾದರಿ ಮೂಲಕ ನೋಟೀಸ್ ಜಾರಿಗೊಳಿಸಬಹುದು ಎಂಬ ಹರ್ಯಾಣ ಪೊಲೀಸ್ ಮಹಾನಿರ್ದೇಶಕರ ನಿಲುವಾದೇಶದ ಬಗ್ಗೆ ಮಾನ್ಯ ನ್ಯಾಯಪೀಠದ ಗಮನಸೆಳೆದರು.
"ಸತೇಂದರ್ ಕುಮಾರ್ ಅಂಟಿಲ್ ವಿರುದ್ಧ ಸಿಬಿಐ ಮತ್ತೊಬ್ಬರು" (2022) ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ವಕೀಲರು, ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ನೋಟೀಸ್ ಜಾರಿಗೊಳಿಸುವುದನ್ನು ಬಿಎನ್‌ಎಸ್‌ಎಸ್ ಸೆಕ್ಷನ್ 35 ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.