
NI Act | hiಚೆಕ್ ಬೌನ್ಸ್ ಪ್ರಕರಣ: ತೀರ್ಪು ನೀಡುವಾಗ ಮುಂದಣ ಬಡ್ಡಿ ಪಾವತಿಗೂ ಆದೇಶ ಮಾಡಲು ಕರ್ನಾಟಕ ಹೈಕೋರ್ಟ್ ನಿರ್ದೇಶನ
ಚೆಕ್ ಬೌನ್ಸ್ ಪ್ರಕರಣ: ತೀರ್ಪು ನೀಡುವಾಗ ಮುಂದಣ ಬಡ್ಡಿ ಪಾವತಿಗೂ ಆದೇಶ ಮಾಡಲು ಕರ್ನಾಟಕ ಹೈಕೋರ್ಟ್ ನಿರ್ದೇಶನ
ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಚಾರಣೆ ವಿಳಂಬ ಮಾಡುವ ಆರೋಪಿಗಳಿಂದ ದೂರುದಾರರಿಗೆ ರಕ್ಷಣೆ ನೀಡಬೇಕು. ಈ ನಿಟ್ಟಿನಲ್ಲಿ ತೀರ್ಪು ನೀಡುವಾಗ ಮುಂದಣ ಬಡ್ಡಿ ಪಾವತಿಗೂ ಆದೇಶ ಮಾಡಲು ವಿಚಾರಣಾ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
"ಬನವತಿ ಆಂಡ್ ಕಂಪೆನಿ ವಿರುದ್ಧ ಮಹಈರ್ ಎಲೆಕ್ಟ್ರೋ ಮೆಷ್ ಪ್ರೈ.ಲಿ. ಮತ್ತಿತರರು" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
2007ರಂದು ಹರದನಹಳ್ಳಿ ಮತ್ತು ಭೇರಿಯಾ ಸಬ್ ಸ್ಟೇಷನ್‌ಗೆ ವಿದ್ಯುತ್ ಶಕ್ತಿಗೆ ಸಂಬಂಧಿಸಿದ ಬ್ಯಾಟರಿ ಚಿಪ್‌ಗಳನ್ನು ಪೂರೈಸುವಂತೆ ಆರೋಪಿ ಸಂಸ್ಥೆಯು ಫಿರ್ಯಾದಿ ಸಂಸ್ಥೆಗೆ ಕೇಳಿಕೊಂಡಿತ್ತು. ಅದರಂತೆ, 03-08-2009ರಂದು ಸುಮಾರು 5.68 ಲಕ್ಷ ರೂ. ಮೌಲ್ಯದ ಸೊತ್ತನ್ನು ಪೂರೈಕೆ ಮಾಡಲಾಗಿತ್ತು.
ಇದಕ್ಕೆ ಪ್ರತಿಯಾಗಿ ಆರೋಪಿ ಸಂಸ್ಥೆ ನೀಡಿದ್ದ ಎರಡು ಚೆಕ್‌ಗಳು ಅಮಾನ್ಯಗೊಂಡಿತ್ತು. ಈ ಸಂಬಂಧ, ಲೀಗಲ್ ನೋಟೀಸ್ ಜಾರಿಗೊಳಿಸಿದ್ದ ಫಿರ್ಯಾದಿ ಸಂಸ್ಥೆ ಆರೋಪಿ ಸಂಸ್ಥೆ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿತ್ತು. ಈ ದೂರಿನ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ ಆರೋಪಿ ಸಂಸ್ಥೆಗೆ 7.10 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು.
ಈ ಆದೇಶದಿಂದ ಬಾಧಿತರಾದ ಆರೋಪಿ ಸಂಸ್ಥೆ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಸೆಷನ್ಸ್ ನ್ಯಾಯಾಲಯ ಶಿಕ್ಷೆಯನ್ನು ಎತ್ತಿಹಿಡಿದರೂ ಪರಿಹಾರದ ಮೊತ್ತವನ್ನು 7.10 ಲಕ್ಷ ರೂಗಳಿಂದ 4.67 ಲಕ್ಷ ರೂ.ಗಳಿಗೆ ಇಳಿಸಿತು.
ಈ ಆದೇಶವನ್ನು ಪ್ರಶ್ನಿಸಿ ಬಾಧಿತ ಫಿರ್ಯಾದಿ ಸಂಸ್ಥೆ ಹೈಕೋರ್ಟ್‌ನಲ್ಲಿ ಪುನರ್ವಿಮರ್ಶಾ ಅರ್ಜಿಯನ್ನು ಸಲ್ಲಿಸಿತ್ತು. ಇದೊಂದು ವಾಣಿಜ್ಯ ವ್ಯವಹಾರವಾಗಿದ್ದು ಪರಿಹಾರದ ಮೊತ್ತವನ್ನು ಇಳಿಸಿದ ಕ್ರಮ ಸರಿಯಲ್ಲ ಎಂದು ವಾದಿಸಿತು.
ಆರ್.ವಿಜಯನ್ ವಿರುದ್ಧ ಬೇಬಿ (AIR 2012 SC 528), ಸತ್ಯನ್ ಅಯ್ಯಪ್ಪ ಸತ್ಯನ್ ವಿರುದ್ಧ ಯೂಸು ಮತ್ತು ಇತರರು (2007 CrlLJ 2590) ಕೇರಳ ಹೈಕೋರ್ಟ್ Crl.Rev.P. 844/2011 ಹಾಗೂ ದಿನಾಂಕ 04-06-2025ರಂದು ಮಾನ್ಯ ಕರ್ನಾಟಕ ಹೈಕೋರ್ಟ್ ಎ.ವಿ. ಪೂಜಪ್ಪ ವಿರುದ್ಧ ಡಾ. ಎಸ್.ಕೆ. ವಾಗ್ದೇವಿ (Crl.R.P. 13/2020) ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಫಿರ್ಯಾದಿ ವಕೀಲರು, ಸೆಷನ್ಸ್ ನ್ಯಾಯಾಲಯ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿರುವುದಕ್ಕೆ ಸೂಕ್ತ ಕಾರಣವನ್ನು ನೀಡಿಲ್ಲ ಎಂದು ವಾದಿಸಿದರು.
ನೆಗೋಷಿಯೆಬಲ್ ಇನ್ಸ್‌ಮೆಂಟ್ಸ್ ಕಾಯ್ದೆಯು ಪರಿಹಾರದ ಮೊತ್ತವನ್ನು ಹೇಗೆ ಘೋಷಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ನಿಯಮ ರೂಪಿಸಿಲ್ಲ. ಇದು ವಿಚಾರಣಾ ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಚಾರ. ಆದರೂ, ಕಾಲ ವಿಳಂಬ ಮಾಡುವ ಆರೋಪಿಯಿಂದ ಫಿರ್ಯಾದಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ. ಈ ಬಗ್ಗೆ ಎ.ವಿ. ಪೂಜಪ್ಪ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ ನಿಗದಿಪಡಿಸಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಈ ನಿಟ್ಟಿನಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ಯಾಯಪೀಠ, ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ಬದಿಗಿರಿಸಿ ವಿಚಾರಣಾ ನ್ಯಾಯಾಲಯ ತೀರ್ಪನ್ನು ಖಾಯಂಗೊಳಿಸಿತು.
ಪ್ರಕರಣ: ಬನವತಿ ಆಂಡ್ ಕಂಪೆನಿ ವಿರುದ್ಧ ಮಹಈರ್ ಎಲೆಕ್ಟ್ರೋ ಮೆಷ್ ಪ್ರೈ.ಲಿ. ಮತ್ತಿತರರು
ಕರ್ನಾಟಕ ಹೈಕೋರ್ಟ್, Crl.Rev.Pet 996/2016 Dated 09-07-2025