7 ವರ್ಷದ ವಕೀಲಿಕೆ ಅನುಭವ: ನ್ಯಾಯಾಂಗ ಅಧಿಕಾರಿಗೂ ಡಿಸ್ಟ್ರಿಕ್ಟ್ ಜಡ್ಜ್ ನೇರ ನೇಮಕಾತಿ ಅರ್ಹ- ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ತೀರ್ಪು
7 ವರ್ಷದ ವಕೀಲಿಕೆ ಅನುಭವ: ನ್ಯಾಯಾಂಗ ಅಧಿಕಾರಿಗೂ ಡಿಸ್ಟ್ರಿಕ್ಟ್ ಜಡ್ಜ್ ನೇರ ನೇಮಕಾತಿ ಅರ್ಹ- ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ತೀರ್ಪು
ಏಳು ವರ್ಷಗಳ ವಕೀಲಿಕೆ ಅನುಭವವುಳ್ಳ ನ್ಯಾಯಾಂಗ ಅಧಿಕಾರಿಗಳು ಕೂಡ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಲು ಅರ್ಹ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರೆಜನೀಶ್ ಕೆ ವಿ ವಿರುದ್ಧ ಕೆ ದೀಪಾ ಮತ್ತಿತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್, ಅರವಿಂದ್ ಕುಮಾರ್, ಸತೀಶ್ ಚಂದ್ರ ಶರ್ಮಾ ಹಾಗೂ ಕೆ ವಿನೋದ್ ಚಂದ್ರನ್ ಅವರಿದ್ದ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಂಗ ಸೇವೆಗೂ ಮುನ್ನ ಏಳು ವರ್ಷ ವಕೀಲಿಕೆ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳೂ 'ವಕೀಲರ ವರ್ಗ'ದಡಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಏಳು ವರ್ಷ ಯಾವುದೇ 'ವಕೀಲರ ಸಂಘ'ದ ಸದಸ್ಯರಾಗಿರುವ ನ್ಯಾಯಾಂಗ ಅಧಿಕಾರಿಗಳು ಕೂಡ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹರು ಎಂದು ಘೋಷಿಸುವಂತೆ ಅರ್ಜಿದಾರರು ಕೋರಿ ಮನವಿ ಸಲ್ಲಿಸಲಾಗಿತ್ತು.
ನ್ಯಾಯಾಂಗ ಸೇವೆಗಳ ಸದಸ್ಯರಿಗೆ ಅನ್ಯಾಯವಾಗಿದೆ ಎಂದು ನಾವು ಅಭಿಪ್ರಾಯಪಡುತ್ತಿದ್ದೇವೆ. ಇದರಿಂದಾಗಿ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅವರು ಆಯ್ಕೆಯಾಗದಂತಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಂಗ ಅಧಿಕಾರಿಗಳು ವಕೀಲರ ವರ್ಗದಡಿ ಅರ್ಜಿ ಸಲ್ಲಿಸುವುದನ್ನು ಈ ಹಿಂದೆ ನಿರ್ಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. "ಧೀರಜ್ ಮೋರ್ ಪ್ರಕರಣ"ಕ್ಕೆ ಸಂಬಂಧಿಸಿದಂತೆ 2020ರಲ್ಲಿ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪು ಸದ್ರಿ ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ನ್ಯಾಯಪೀಠದ ತೀರ್ಪಿನ ಮೂಲಕ ರದ್ದುಗೊಂಡಿತು.
ದೇಶದ ವಿವಿಧ ಹೈಕೋರ್ಟ್‌ಗಳು ಅಥವಾ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶ ಹೊರಡಿಸಿದ ಪ್ರಕರಣಗಳನ್ನು ಹೊರತುಪಡಿಸಿ ಭವಿಷ್ಯದ ನೇಮಕಾತಿಗಳಿಗೆ ಈ ತೀರ್ಪು ಅನ್ವಯಿಸಲಿದೆ. ಬದಲಿಗೆ, ಈ ಹಿಂದಿನ ಆಯ್ಕೆ ಪ್ರಕ್ರಿಯೆಗಳಿಗೆ ತೀರ್ಪು ಅನ್ವಯವಾಗದು ಎಂಬುದನ್ನು ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ.
“ವಿಚಾರಣಾ ನ್ಯಾಯಾಲಯಗಳಲ್ಲಿ ನ್ಯಾಯಾಂಗ ಸೇವೆಗೂ ನೇಮಕಗೊಳ್ಳುವ ಮೊದಲು ಏಳು ವರ್ಷಗಳ ಕಾಲ ವಕೀಲಿಕೆಯ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳು ನೇರ ನೇಮಕಾತಿ “ಪ್ರಕ್ರಿಯೆಯಲ್ಲಿ ಜಿಲ್ಲಾ ನ್ಯಾಯಾಧೀಶರು ಇಲ್ಲವೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ" ಎಂದು ತೀರ್ಪು ವಿವರಿಸಿದೆ.
ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಇರಬೇಕಾದ ಅರ್ಹತೆಯನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಗಮನಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೆ, ನ್ಯಾಯಾಧೀಶರು ಮತ್ತು ವಕೀಲರಾಗಿ ಏಳು ವರ್ಷಗಳ ಸಂಯೋಜಿತ ಅನುಭವ ಹೊಂದಿರುವ ನ್ಯಾಯಾಂಗ ಅಧಿಕಾರಿಗಳೂ ಸಹ ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಲು ಅರ್ಹರಾಗಿರುತ್ತಾರೆ ಎಂದೂ ಸಹ ನ್ಯಾಯಾಲಯ ಹೇಳಿದೆ.
ಅಂತಹ ನೇಮಕಾತಿಗಳಲ್ಲಿ ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅನ್ವಯವಾಗುವಂತೆ ವಕೀಲರ ಮತ್ತು ನ್ಯಾಯಾಂಗ ಅಧಿಕಾರಿಗಳ ಕನಿಷ್ಠ ವಯೋಮಿತಿಯು 35 ವರ್ಷಗಳಾಗಿರಬೇಕು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ರೆಜನೀಶ್ ಕೆ ವಿ ವಿರುದ್ಧ ಕೆ ದೀಪಾ ಮತ್ತಿತರರು
ಸುಪ್ರೀಂ ಕೋರ್ಟ್