
ಅಪಘಾತ ಪರಿಹಾರ ನಿರ್ಧರಿಸುವಾಗ ವೃತ್ತಿ ಪರಿಗಣನೆ ಅಗತ್ಯ: ಹೈಕೋರ್ಟ್ ಮಹತ್ವದ ತೀರ್ಪು
ಅಪಘಾತ ಪರಿಹಾರ ನಿರ್ಧರಿಸುವಾಗ ವೃತ್ತಿ ಪರಿಗಣನೆ ಅಗತ್ಯ: ಹೈಕೋರ್ಟ್ ಮಹತ್ವದ ತೀರ್ಪು
ಅಪಘಾತ ಪರಿಹಾರ ನಿರ್ಧರಿಸುವಾಗ ವೃತ್ತಿ ಪರಿಗಣನೆ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ತರಕಾರಿ ವ್ಯಾಪಾರಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಿ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಆನೇಕಲ್ ತಾಲೂಕಿನ ದೊಮ್ಮಸಂದ್ರದ ನಿವಾಸಿ ಮುನಿಯಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಒಂದು ಕಾಲು ಕಳೆದುಕೊಂಡಿರುವ ತರಕಾರಿ ವ್ಯಾಪಾರಿ ಭವಿಷ್ಯದಲ್ಲಿ ಉದ್ಯೋಗ ಮುಂದುವರಿಸುವುದು ಹಾಗೂ ಹಣ ಸಂಪಾದನೆ ಮಾಡುವುದು ಬಹಳ ಕಷ್ಟಕರವಾಗಿರುತ್ತದೆ. ಅಂಗವೈಕಲ್ಯ ನಿರ್ಣಯಿಸುವಾಗ ಆತನ ಉದ್ಯೋಗ ಮತ್ತು ಪ್ರತಿದಿನ ಆತ ನಿರ್ವಹಿಸಬೇಕಾದ ಕೆಲಸಗಳ ಸ್ವರೂಪವನ್ನೂ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದಲ್ಲಿ ಮೇಲ್ಮನವಿದಾರರು ಅನುಭವಿಸಿದ ನೋವು, ಯಾತನೆ, ಶಾಶ್ವತ ದೈಹಿಕ ಅಂಗವೈಕಲ್ಯದಿಂದ ಉಂಟಾಗಿರುವ ಭವಿಷ್ಯದ ಸಂಪಾದನೆಯ ನಷ್ಟ, ವೈದ್ಯಕೀಯ ವೆಚ್ಚ, ಚೇತರಿಕೆಗೆ ತೆಗೆದುಕೊಂಡ ಸುದೀರ್ಘ ಅವಧಿಯ ಆದಾಯದ ನಷ್ಟ, ಭವಿಷ್ಯದ ವೈದ್ಯಕೀಯ ವೆಚ್ಚ ಇನ್ನಿತರ ಅಂಶಗಳನ್ನು ಪರಿಗಣಿಸಿದರೆ ಮೇಲ್ಮನವಿದಾರರು 11.40 ಲಕ್ಷ ರೂಪಾಯಿ ಪರಿಹಾರ ಪಡೆಯಲು ಯೋಗ್ಯರಾಗಿದ್ದಾಎ ಎಂದು ನ್ಯಾಯಪೀಠ ಅಂದಾಜಿಸಿತು.
ಹೆಚ್ಚುವರಿ ಮೊತ್ತದ ಪರಿಹಾರವನ್ನು 8 ವಾರಗಳಲ್ಲಿ ಪಾವತಿಸುವಂತೆ ವಿಮಾ ಕಂಪೆನಿಗೆ ನ್ಯಾಯಪೀಠ ನಿರ್ದೇಶನ ನೀಡಿತು.
ಪ್ರಕರಣ: ಮುನಿಯಪ್ಪ ವಿರುದ್ಧ ಮ್ಯಾನೇಜಿಂಗ್ ಡೈರೆಕ್ಟರ್, ಮೋಟರ್ ಕ್ಲೇಮ್ಸ್ ಹಬ್
ಕರ್ನಾಟಕ ಹೈಕೋರ್ಟ್, MFA 4426/2024 Dated 09-09-2025
NC: 2025:KHC:35769