ಮಾಹಿತಿ ಹಕ್ಕು ಕಾಯಿದೆ ದುರುಪಯೋಗಕ್ಕೆ ಅವಕಾಶವಿಲ್ಲ: ಕರ್ನಾಟಕ ಹೈಕೋರ್ಟ್
ಮಾಹಿತಿ ಹಕ್ಕು ಕಾಯಿದೆ ದುರುಪಯೋಗಕ್ಕೆ ಅವಕಾಶವಿಲ್ಲ: ಕರ್ನಾಟಕ ಹೈಕೋರ್ಟ್
ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿ 400ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ್ದ ವ್ಯಕ್ತಿಯೊಬ್ಬರನ್ನು ಕಪ್ಪು ಪಟ್ಟಿಗೆ ಸೇರಿಸಿ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಮಾಹಿತಿ ಹಕ್ಕು ಕಾಯಿದೆ ದುರುಪಯೋಗಕ್ಕೆ ಅವಕಾಶ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ರಾಜ್ಯ ಮಾಹಿತಿ ಆಯುಕ್ತರು 2025 ಜನವರಿ 28ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿ ಸಲ್ಲಿಸಿ ಚಾಮರಾಜ ನಗರದ ಮಾಹಿತಿ ಹಕ್ಕು ಕಾರ್ಯಕರ್ತ ಕೆ. ದೇವಪ್ರಸಾದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು, "ಇಂತಹುದೇ ಪ್ರಕರಣದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದ್ದ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ನ್ಯಾಯದ ಸಮತೆಯ ಆಧಾರದಲ್ಲಿ ಅರ್ಜಿದಾರರ ವಿರುದ್ಧದ ಆದೇಶಕ್ಕೂ ತಡೆ ನೀಡಬೇಕು,'' ಎಂದು ಪ್ರಾರ್ಥಿಸಿಕೊಂಡಿದ್ದರು.
''ಅರ್ಜಿದಾರರು ಮಾಹಿತಿ ಹಕ್ಕು ಕಾಯಿದೆಯಡಿ 476 ಅರ್ಜಿಗಳನ್ನು ಸಲ್ಲಿಸಿರುವುದು ಅಪ್ರಸ್ತುತವೆಂದು ತೋರುತ್ತದೆ. ನೀವು (ಅರ್ಜಿದಾರರು) ಸಾರ್ವಜನಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದರೂ, 400 ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ಮಾಹಿತಿ ಹಕ್ಕು ಕಾಯಿದೆಯ ದುರುಪಯೋಗ ಮಾಡಬಾರದು. 400 ಅರ್ಜಿಗಳನ್ನು ಸಲ್ಲಿಸುವ ಮೂಲಕ ನೀವೇನು ಮಾಡುತ್ತಿದ್ದೀರಿ ಎಂಬುದನ್ನು ಮೊದಲು ನಾವು ನಿರ್ಧರಿಸಬೇಕಿದೆ'' ಎಂದು ನ್ಯಾಯಪೀಠ ತಿಳಿಸಿತು.
ಅಲ್ಲದೆ, ರಾಜ್ಯ ಮಾಹಿತಿ ಆಯುಕ್ತರು ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು.
ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯುಕ್ತರು ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಅರ್ಜಿದಾರರು ಕಾಯಿದೆಯಡಿ ಸಲ್ಲಿಸಿರುವ ಅರ್ಜಿಗಳ ಸ್ವರೂಪ ಹಾಗೂ ಅವರು ಯಾವ ರೀತಿಯ ಮಾಹಿತಿ ಕೋರಿದ್ದಾರೆಂಬ " ವಿವರ ಸಲ್ಲಿಸುವಂತೆ ಸರಕಾರಿ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.