ಮಹಿಳಾ ನೌಕರರಿಗೆ ತಿಂಗಳ ಋತುಚಕ್ರ ರಜೆ: ರಾಜ್ಯ ಸರ್ಕಾರ ಆದೇಶ
ಮಹಿಳಾ ನೌಕರರಿಗೆ ತಿಂಗಳ ಋತುಚಕ್ರ ರಜೆ: ರಾಜ್ಯ ಸರ್ಕಾರ ಆದೇಶ
ರಾಜ್ಯಾದ್ಯಂತ ಮಹಿಳಾ ನೌಕರರಿಗೆ ತಿಂಗಳ ಋತುಚಕ್ರ ರಜೆ ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
ರಾಜ್ಯದ ವಿವಿಧ ಕಾಯಿದೆಗಳಡಿ ನೋಂದಣಿಯಾದ ಎಲ್ಲ ಕೈಗಾರಿಕೆ, ಕಾರ್ಖಾನೆ, ಅಂಗಡಿ, ವಾಣಿಜ್ಯ ಸಂಸ್ಥೆಗಳಿಗೆ ಈ ಆದೇಶ ಅನ್ವಯವಾಗಲಿದೆ.
ಕೈಗಾರಿಕೆ, ಕಾರ್ಖಾನೆ, ಅಂಗಡಿ, ವಾಣಿಜ್ಯ ಸಂಸ್ಥೆ ಸೇರಿದಂತೆ ಇತರೆ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 18ರಿಂದ 52 ವರ್ಷ ವಯೋಮಿತಿಯ ಮಹಿಳಾ ನೌಕರರಿಗೆ ಮಾಸಿಕ ಒಂದು ದಿನ ವೇತನ ಸಹಿತ 'ಋತುಚಕ್ರ ರಜೆ' ಕಲ್ಪಿಸುವ ಸಂಬಂಧ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ಮಾಸಿಕ ಒಂದು ದಿನ ವೇತನ ಸಹಿತ 'ಋತುಚಕ್ರ ರಜೆ' ನೀಡುವ ಸಂಬಂಧದ ಈ ಆದೇಶ ಎಲ್ಲ ಕಾಯಂ, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಅನ್ವಯವಾಗಲಿದೆ.
1948ರ ಕಾರ್ಖಾನೆಗಳ ಕಾಯಿದೆ, 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ, 1951ರ ತೋಟ ಕಾರ್ಮಿಕರ ಕಾಯಿದೆ, 1966ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯಿದೆ ಹಾಗೂ 1961ರ ಮೋಟಾರು ಸಾರಿಗೆ ಕಾರ್ಮಿಕರ ಕಾಯಿದೆಯಡಿ ನೋಂದಣಿಯಾಗಿರುವ ಎಲ್ಲ ಕೈಗಾರಿಕೆಗಳು ಮತ್ತು ಸಂಸ್ಥೆಗಳು ಈ ವ್ಯಾಪ್ತಿಗೆ ಬರಲಿದೆ.
ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ 18ರಿಂದ 52 ವರ್ಷ ವಯೋಮಿತಿಯವರಿಗೆ ಈ ಸೌಲಭ್ಯ ಸಿಗಲಿದೆ. ವಾರ್ಷಿಕ 12 ದಿನಗಳ ವೇತನಸಹಿತ ರಜೆಯ ಸೌಲಭ್ಯವನ್ನು ಉದ್ಯೋಗದಾತರು ಕಲ್ಪಿಸುವಂತೆ ಸೂಚಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.