ಪಡೆದ ಸಾಲ ತೀರಿಸದೆ ಜಾಮೀನುದಾರನಿಂದ ಏಕಪಕ್ಷೀಯ ಮುಕ್ತಿ ಅಸಾಧ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಪಡೆದ ಸಾಲ ತೀರಿಸದೆ ಜಾಮೀನುದಾರನಿಂದ ಏಕಪಕ್ಷೀಯ ಮುಕ್ತಿ ಅಸಾಧ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಬ್ಯಾಂಕ್ ಸಾಲಕ್ಕೆ ನೀಡಿದ ಜಾಮೀನನ್ನು ಬದಲಿ ವ್ಯವಸ್ಥೆ ಮಾಡದೆ ಏಕಪಕ್ಷೀಯವಾಗಿ ವಾಪಸ್ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಭಾರತೀಯ ಒಪ್ಪಂದ ಕಾಯ್ದೆ (Indian Contract Act) ಸೆಕ್ಷನ್ 128ನ್ನು ಉಲ್ಲೇಖಿಸಿದ ನ್ಯಾಯಪೀಠ, ಪ್ರಧಾನ ಸಾಲಗಾರ ಜೊತೆಗೆ ಶೂರಿಟಿಯೂ ಬಾಧ್ಯತೆಯನ್ನು ಹೊಂದಿರುತ್ತಾನೆ ಎಂಬುದನ್ನು ನೆನಪಿಸಿತು.
ಬೆಂಗಳೂರಿನ ಯಲಹಂಕದ ಮಹಾಯೋಗಿ ವೇಮನ ಸಹಕಾರಿ ಸೊಸೈಟಿಯ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ ಆದೇಶವನ್ನು ಪ್ರಶ್ನಿಸಿ ಮುನಿರೆಡ್ಡಿ ಎಂಬವರು ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಾಲದ ಸಂಪೂರ್ಣ ಮೊತ್ತವನ್ನು ಮರುಪಾವತಿಸಿದರೆ ಅಥವಾ ಸಾಲದಾತರು ಒಪ್ಪಿಕೊಳ್ಳುವ ಜಾಮೀನು ಯಾ ಭದ್ರತೆಯನ್ನು ನೀಡಿದರೆ ಮಾತ್ರ ಜಾಮೀನುದಾರನು ಸಾಲ ಮರುಪಾವತಿಯ ಬಾಧ್ಯತೆಯಿಂದ ಬಿಡುಗಡೆ ಪಡೆಯಬಹುದು ಎಂದು ತೀರ್ಪು ವಿವರಿಸಿದೆ.
ಸೊಸೈಟಿಯ ಅಧ್ಯಕ್ಷರೂ ಆಗಿದ್ದ ಮುನಿರೆಡ್ಡಿ 30-12-2023ರಿಂದ ನಿರ್ದೇಶಕ ಸ್ಥಾನದಿಂದ ಅನರ್ಹಗೊಂಡಿದ್ದರು. ಸದಸ್ಯರೊಬ್ಬರಿಗೆ ಬ್ಯಾಂಕ್ ನೀಡಿದ ಅಡಮಾನ ಸಾಲಕ್ಕೆ ಮುನಿರೆಡ್ಡಿ ಜಾಮೀನುದಾರರಾಗಿದ್ದರು. ಹಾಗೆ ಸಾಲ ಪಡೆದಿದ್ದ ರವಿಶಂಕರ್ ರೆಡ್ಡಿ ಎಂಬವರು ಮರುಪಾವತಿ ಮಾಡದೆ ಸುಸ್ತಿದಾರನಾಗಿದ್ದ.
ತಾನು ತಾತ್ಕಾಲಿಕ ನೆಲೆಯಲ್ಲಿ ಶೂರಿಟಿ ಯಾ ಜಾಮೀನುದಾರನಾಗಿ ನಿಲ್ಲಲು ಒಪ್ಪಿಗೆ ನೀಡಿದ್ದೆ. ಬಳಿಕ, ನಾನು ಶೂರಿಟಿ ಬಾಧ್ಯತೆಯಿಂದ ಹೊರಬರುತ್ತಿರುವುದಾಗಿ ಸೊಸೈಟಿಗೆ ಮಾಹಿತಿ ನೀಡಿರುತ್ತೇನೆ. ಆ ಬಳಿಕ, ಸಾಲ ಪಡೆದವರು ಮರುಪಾವತಿ ಮಾಡದೆ ಸಾಲ ಸುಸ್ತಿಯಾಗಿರುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಬ್ಯಾಂಕಿನ ಕಾರ್ಯಕಾರಿ ಸಮಿತಿಯಲ್ಲಿ ಈ ಸಾಲಕ್ಕೆ ಬೇರೊಬ್ಬ ಶೂರಿಟಿಯನ್ನು ಹುಡುಕುವಂತೆ ಸಾಲಪಡೆದವರಿಗೆ ಸೂಚಿಸಲಾಗಿತ್ತು ಎಂಬುದನ್ನು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದಿದ್ದರು.
ಸಾಲದ ಎಲ್ಲ ಹೊರೆ ತನ್ನ ಮೇಲೆ ಬೀಳುತ್ತದೆ ಎಂಬ ಭೀತಿಯಿಂದ ಮುನಿರೆಡ್ಡಿ ಶೂರಿಟಿಯಿಂದ ಬಾಧ್ಯತೆ ಕಳಚಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಈ ಪ್ರಕ್ರಿಯೆಗೆ ಕಾನೂನಿನಲ್ಲಿ ಸಮ್ಮತಿ ಇಲ್ಲ. ರಾಜಕೀಯ ನಾಯಕರೂ ಆಗಿರುವ ಮುನಿರೆಡ್ಡಿ, ತಮ್ಮನ್ನು ಶೂರಿಟಿಯಿಂದ ಬಿಡುಗಡೆ ಮಾಡುವ ಸಂಬಂಧ ಹಾಗೂ ಯಾವುದೇ ಕಾನೂನು ಪ್ರಕ್ರಿಯೆ ಕೈಗೊಳ್ಳದಂತೆ ನಿರ್ಣಯವನ್ನು ಕೈಗೊಳ್ಳುವಂತೆ ಸೊಸೈಟಿ ಮಂಡಳಿ ಮೇಲೆ ಪ್ರಭಾವ ಬೀರಿದ್ದರು.
ಇದಕ್ಕೆ ಸಂಬಂಧಿಸಿದ ಕಾರ್ಯಕಾರಿ ಮಂಡಳಿಯು ನಿರ್ಣಯ ಕೈಗೊಂಡಿತ್ತು ಎಂಬುದನ್ನು ಗಮನಿಸಿದ ನ್ಯಾಯಪೀಠ, ಅಧ್ಯಕ್ಷರಿಗೆ ಅನುಕೂಲ ಮಾಡಿಕೊಡುವ ಈ ನಿರ್ಣಯ ಕಾನೂನು ಸಮ್ಮತವಲ್ಲ ಎಂದು ತೀರ್ಪು ನೀಡಿದೆ.