ಅಧಿಕಾರಿಗಳ ಲೋಪದಿಂದಾಗಿ ಬಂಧಿಸಿದವರ ಬಿಡುಗಡೆ: ಗೂಂಡಾ ಕಾಯ್ದೆ ಜಾರಿ ವೇಳೆ ಪೊಲೀಸರ ನಿರ್ಲಕ್ಷ್ಯಕ್ಕೆ ಕರ್ನಾಟಕ ಹೈಕೋರ್ಟ್ ಆಕ್ರೋಶ
ಅಧಿಕಾರಿಗಳ ಲೋಪದಿಂದಾಗಿ ಬಂಧಿಸಿದವರ ಬಿಡುಗಡೆ: ಗೂಂಡಾ ಕಾಯ್ದೆ ಜಾರಿ ವೇಳೆ ಪೊಲೀಸರ ನಿರ್ಲಕ್ಷ್ಯಕ್ಕೆ ಕರ್ನಾಟಕ ಹೈಕೋರ್ಟ್ ಆಕ್ರೋಶ
ಸ್ಪಷ್ಟ ಸೂಚನೆ ಪಾಲಿಸದೇ ಇರುವ ಪೊಲೀಸ್ ಅಧಿಕಾರಿಗಳ ಲೋಪದಿಂದಾಗಿ ಬಂಧನಕ್ಕೊಳಗಾದ ಆರೋಪಿಗಳನ್ನು ಬಿಡುಗಡೆ ಮಾಡುವ ಆದೇಶ ಹೊರಡಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ವಿಷಾದ ವ್ಯಕ್ತಪಡಿಸಿದ್ದು, ಗೂಂಡಾ ಕಾಯ್ದೆ ಜಾರಿ ವೇಳೆ ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಆರ್. ದೇವದಾಸ್ ಮತ್ತು ನ್ಯಾಯಮೂರ್ತಿ ಬಿ. ಮುರಳೀಧರ ಪೈ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಬಂಧಿತನಿಗೆ ಸಂಬಂಧಪಟ್ಟ ದಾಖಲೆಗಳ ಪ್ರತಿಯನ್ನು ಒದಗಿಸಲು ಬಂಧನ ಪ್ರಾಧಿಕಾರ ವಿಫಲವಾದರೆ ಅದು ಸಂವಿಧಾನದ 22(5)ನೇ ವಿಧಿ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಬಂಧಿಸುವ ಅಧಿಕಾರವನ್ನು ಚಲಾಯಿಸುವ ಮೊದಲು ಪೊಲೀಸ್ ಅಧಿಕಾರಿಗಳು ಎಲ್ಲ ಸಂವಿಧಾನಿಕ ಮತ್ತು ಶಾಸನಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ನ್ಯಾಯಪೀಠ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದೆ.
ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗೂಂಡಾ ಕಾಯಿದೆಯಡಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸುವ ಆದೇಶಗಳಲ್ಲಾಗುತ್ತಿದ್ದ ತಪ್ಪು ಮರುಕಳಿಸದಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ಆದರೂ ಪೊಲೀಸ್ ಅಧಿಕಾರಿಗಳು ಮತ್ತೆ ಮಾಡಿದ ತಪ್ಪುಗಳನ್ನು ಮಾಡುತ್ತಾ ನಿರ್ಲಕ್ಷ್ಯ ಮುಂದುವರಿಸುತ್ತಿದ್ದಾರೆ ಎಂದು ನ್ಯಾಯಪೀಠ ಅತೀವ ಬೇಸರ ವ್ಯಕ್ತಪಡಿಸಿದೆ.
"ಅಧಿಕಾರಿಗಳು ಮಾಡುವ ಈ ತಪ್ಪುಗಳ ಪರಿಣಾಮ ಎದುರಾಗುವ ತಾಂತ್ರಿಕ ಕಾರಣಗಳಿಂದ ಗೂಂಡಾ ಕಾಯಿದೆಯಡಿ ಬಂಧನವಾಗುವಂತಹ ಅರೋಪಿಗಳನ್ನು ಬಿಡುಗಡೆಗೆ ಆದೇಶ ನೀಡಬೇಕಾಗುತ್ತದೆ'' ಎಂದು ನ್ಯಾಯಪೀಠ ಹೇಳಿದೆ.