ಸನದು ಶರಣಾಗತಿ ಮಾಡಿ ಪರಿಹಾರ ಪಡೆದ ಬಳಿಕ ಮರುನೋಂದಣಿ ಅರ್ಜಿ: ವಕೀಲರ ಅರ್ಜಿ ಪಡೆಯುವಂತೆ ವಕೀಲರ ಪರಿಷತ್ತಿಗೆ ಹೈಕೋರ್ಟ್ ಸೂಚನೆ
ಸನದು ಶರಣಾಗತಿ ಮಾಡಿ ಪರಿಹಾರ ಪಡೆದ ಬಳಿಕ ಮರುನೋಂದಣಿ ಅರ್ಜಿ: ವಕೀಲರ ಅರ್ಜಿ ಪಡೆಯುವಂತೆ ವಕೀಲರ ಪರಿಷತ್ತಿಗೆ ಹೈಕೋರ್ಟ್ ಸೂಚನೆ
ಸನದು ಅಮಾನತು ಮಾಡಿ, ವಕೀಲರ ಕಲ್ಯಾಣ ನಿಧಿಯಿಂದ ಪರಿಹಾರ ಪಡೆದುಕೊಂಡ ಬಳಿಕ ಬಳಿಕ ವಕೀಲರೊಬ್ಬರು ತಮ್ಮ ಸನದನ್ನು ಪುನರ್‌ಸ್ಥಾಪನೆಗೆ ಮರುನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದು, ವಕೀಲರ ಈ ಅರ್ಜಿಯನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಬಗ್ಗೆ ಆದೇಶ ಹೊರಡಿಸಿದೆ. ರಾಯಚೂರಿನ ವಕೀಲ ಎಂ. ಎ. ಹಮೀದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ಮನವಿ ಅಂಗೀಕರಿಸುವಂತೆ ವಕೀಲರ ಪರಿಷತ್‌ಗೆ ನಿರ್ದೇಶಿಸಿದೆ.
ಅರ್ಜಿದಾರ ವಕೀಲರು ಕಳೆದ 25 ವರ್ಷಗಳಿಂದ ರಾಯಚೂರಿನಲ್ಲಿ ವಕೀಲರಾಗಿ ವೃತ್ತಿ ಮಾಡುತ್ತಿದ್ದರು. ಕೋವಿಡ್-19 ಸಂದರ್ಭದಲ್ಲಿ ಕಾರಣಾಂತರಗಳಿಂದ ಸ್ವಯಂ ನಿವೃತ್ತಿ ಪಡೆದುಕೊಳ್ಳಲು ಬಯಸಿ ತಮ್ಮ ಸನ್ನದು ಶರಣಾಗತಿ ಮಾಡಿಕೊಂಡಿದ್ದರು. ಪರಿಣಾಮ ವಕೀಲರ ಕಲ್ಯಾಣ ನಿಧಿ ಕಾಯಿದೆ- 2001ರ ಅನುಸಾರ ಅವರಿಗೆ 1.42 ಲಕ್ಷ ರೂ. ಮೊತ್ತ ಪಾವತಿ ಮಾಡಲಾಗಿತ್ತು.
ಪರಿಹಾರದ ಮೊತ್ತ ತಮ್ಮ ನಿರೀಕ್ಷೆಗಿಂತ ಕಡಿಮೆಯಾಗಿರುವ ಕಾರಣ ಪುನಃ ಸನ್ನದು ವಾಪಸು ಪಡೆದು ವೃತ್ತಿ ಮುಂದುವರಿಸುವುದಾಗಿ ಅರ್ಜಿದಾರರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು- ಕೆಎಸ್‌ಬಿಸಿಗೆ ಮನವಿ ಸಲ್ಲಿಸಿದ್ದರು.
ವಕೀಲರು ಸಲ್ಲಿಸಿದ್ದ ಈ ಮನವಿಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತಿರಸ್ಕರಿಸಿತ್ತು. ಪರಿಷತ್ತಿನ ಈ ಆದೇಶವನ್ನು ಪ್ರಶ್ನಿಸಿ ವಕೀಲರು ಹೈಕೋರ್ಟ್‌ನ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ಈ ಕೆಳಗಿನ ಆದೇಶ ಹೊರಡಿಸಿದೆ.
ವಕೀಲರು ತಮ್ಮ ಸನ್ನದು ನೋಂದಣಿ ಸರೆಂಡರ್ ಮಾಡಿ ವಕೀಲರ ಕಲ್ಯಾಣ ನಿಧಿ ಕಾಯಿದೆಯ ಪ್ರಕಾರ ಆರ್ಥಿಕ ಪ್ರಯೋಜನ ಪಡೆದ ನಂತರ ಸನ್ನದು ಶರಣಾಗತಿ ಪುನಃ ಹಿಂಪಡೆಯಲು ಬಯಸಿ ಮರುನೋಂದಣಿ ಬಯಸಿದರೆ ಅದಕ್ಕೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅನುಮತಿ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.