ಸಮ್ಮತಿಯ ವಿಚ್ಚೇದನ: ಒಂದು ವರ್ಷದ ಪ್ರತ್ಯೇಕ ವಾಸದ ಅವಧಿ ಕಡ್ಡಾಯವಲ್ಲ- ದೆಹಲಿ ಹೈಕೋರ್ಟ್
ಸಮ್ಮತಿಯ ವಿಚ್ಚೇದನ: ಒಂದು ವರ್ಷದ ಪ್ರತ್ಯೇಕ ವಾಸದ ಅವಧಿ ಕಡ್ಡಾಯವಲ್ಲ- ದೆಹಲಿ ಹೈಕೋರ್ಟ್
ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಸಮ್ಮತಿಯ ವಿಚ್ಚೇದನ ಪಡೆಯಲು ಬಯಸುವ ದಂಪತಿಗೆ ಒಂದು ವರ್ಷದ ಪ್ರತ್ಯೇಕ ವಾಸದ ಅವಧಿ ಕಡ್ಡಾಯವಲ್ಲ. ಅದನ್ನು ಮನ್ನಾ ಮಾಡಬಹುದಾಗಿದೆ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನವೀನ್ ಚಾವ್ಲಾ, ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಮತ್ತು ನ್ಯಾಯಮೂರ್ತಿ ರೇಣು ಭಟ್ನಾಗರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B(1) ರ ಅಡಿಯಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನಕ್ಕೆ ಮೊದಲ ಅರ್ಜಿಯನ್ನು ಮಂಡಿಸಲು ಪೂರ್ವಾಪೇಕ್ಷಿತವಾಗಿ ಅಗತ್ಯವಿರುವ ಒಂದು ವರ್ಷದ ಪ್ರತ್ಯೇಕತೆಯ ಅವಧಿ ಕಡ್ಡಾಯವಲ್ಲ ಮತ್ತು ಅರ್ಜಿ ಸಲ್ಲಿಸುವ ಮೂಲಕ ಈ ಅವಧಿಯನ್ನು ಮನ್ನಾ ಮಾಡಬಹುದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 13 ಬಿ (1)ರ ಅಡಿಯಲ್ಲಿ ಸೂಚಿಸಲಾದ ಷರತ್ತು ಮಾರ್ಗದರ್ಶಿಯಾಗಿದ್ದು, ಕಡ್ಡಾಯವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
"ಈ ಕಾಯ್ಕೆಯ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ' ಎಂಬ ಪದಗುಚ್ಚದೊಂದಿಗೆ ಪ್ರಾರಂಭವಾಗುವ ಸೆಕ್ಷನ್ 13 ಬಿ (1) ಅನ್ನು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 14(1) ರ ನಿಬಂಧನೆಯೊಂದಿಗೆ ಸಾಮರಸ್ಯದಿಂದ ಓದಿ ಅರ್ಥೈಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
'ಅಸಾಧಾರಣ ಕಷ್ಟ' ಅಥವಾ 'ಅಸಾಧಾರಣ ದುಷ್ಕೃತ್ಯ" ಒಳಗೊಂಡ ಪ್ರಕರಣಗಳಲ್ಲಿ ಶಾಸನಬದ್ಧ ಕಾಯುವಿಕೆಯ ಅವಧಿಗಳನ್ನು ಮನ್ನಾ ಮಾಡಲು ನ್ಯಾಯಾಲಯಗಳಿಗೆ ಈ ನಿಬಂಧನೆ ಅನುಮತಿಸುತ್ತದೆ. ವಿವಾದಿತ ಪ್ರಕರಣಗಳಲ್ಲಿಯೂ ಸಹ ಪರಸ್ಪರ ಒಪ್ಪಿಗೆಯ ವಿಚ್ಛೇದನಗಳಲ್ಲಿ ಅಂತಹ ಸಮ್ಮತಿ ಲಭ್ಯವಿದ್ದಾಗ ನಿರಾಕರಿಸಲು ಯಾವುದೇ ಕಾನೂನು ಸಮರ್ಥನೆ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ಮೊದಲ ಪ್ರಸ್ತಾವನೆಯನ್ನು ಮಂಡಿಸಲು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ಬಿ (1) ನಿಗದಿಪಡಿಸಿದ ಪೂರ್ವಾಪೇಕ್ಷಿತ ಒಂದು ವರ್ಷಗಳ ಪ್ರತ್ಯೇಕ ವಾಸದ ಅವಧಿಯನ್ನು ಕಾಯ್ದೆಯ ಸೆಕ್ಷನ್ 14(1) ರ ನಿಬಂಧನೆಯನ್ನು ಅನ್ವಯಿಸುವ ಮೂಲಕ ಮನ್ನಾ ಮಾಡಬಹುದು' ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ಬಿ (1)ರ ಅಡಿಯಲ್ಲಿ ಒಂದು ವರ್ಷದ ಬೇರ್ಪಡಿಕೆ ಅವಧಿಯ ಮನ್ನಾವು, ವಿಭಾಗ 13 ಬಿ (2)ರ ಅಡಿಯಲ್ಲಿ ಎರಡನೇ ಪ್ರಸ್ತಾವನೆಯನ್ನು ಸಲ್ಲಿಸಲು ಆರು ತಿಂಗಳ ಕೂಲಿಂಗ್ ಆಫ್ ಅವಧಿಯ ಮನ್ನಾ ಮತ್ತು ಸೆಕ್ಷನ್ 138(1) ರ ಅಡಿಯಲ್ಲಿ ಒಂದು ವರ್ಷದ ಮನ್ನಾ ಮತ್ತು ಸೆಕ್ಷನ್ 13 ಬಿ (2) ರ ಅಡಿಯಲ್ಲಿ ಆರು ತಿಂಗಳ ಅವಧಿಯ ಮನ್ನಾ ಮಾಡುವುದನ್ನು ಪರಸ್ಪರ ಸ್ವತಂತ್ರವಾಗಿ ಪರಿಗಣಿಸಬೇಕು ಎಂದು ನ್ಯಾಯಪೀಠ ಹೇಳಿದೆ.
"ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ಬಿ (1) ರ ಅಡಿಯಲ್ಲಿ 01 ವರ್ಷದ ಅವಧಿ ಮತ್ತು ಸೆಕ್ಷನ್ 13ಬಿ(2) ರ ಅಡಿಯಲ್ಲಿ 06 ತಿಂಗಳ ಅವಧಿಯನ್ನು ಮನ್ನಾ ಮಾಡಲು ಅರ್ಹವೆಂದು ನ್ಯಾಯಾಲಯವು ತೃಪ್ತಿಪಡಿಸಿದರೆ, ವಿಚ್ಚೇದನ ತೀರ್ಪು ಜಾರಿಗೆ ಬರುವ ದಿನಾಂಕವನ್ನು ಮುಂದೂಡಲು ನ್ಯಾಯಾಲಯಕ್ಕೆ ಕಾನೂನುಬದ್ಧವಾಗಿ ಅಧಿಕಾರವಿಲ್ಲ. ಮತ್ತು ಅಂತಹ ತೀರ್ಪನ್ನು ತಕ್ಷಣವೇ ಜಾರಿಗೆ ತರಬಹುದು' ಎಂದು ನ್ಯಾಯಪೀಠ ಹೇಳಿದೆ.
ಆದಾಗ್ಯೂ ಅಂತಹ ವಿನಾಯಿತಿಯನ್ನು ಕೇವಲ ಕೇಳುವುದಕ್ಕಾಗಿ ನೀಡಲಾಗುವುದಿಲ್ಲ. ಅರ್ಜಿದಾರರಿಗೆ ಅಸಾಧಾರಣ ತೊಂದರೆ ಮತ್ತು/ಅಥವಾ "ಪ್ರತಿವಾದಿಯ ಕಡೆಯಿಂದ ಅಸಾಧಾರಣ ಅಧಃಪತನದ ಸಂದರ್ಭಗಳನ್ನು ನ್ಯಾಯಾಲಯಕ್ಕೆ ವಿಷದಪಡಿಸಿದ ನಂತರ ನ್ಯಾಯಾಲಯಕ್ಕೆ ತೃಪ್ತಿಯಾದ ನಂತರವೇ ಅರ್ಜಿಯನ್ನು ಪುರಸ್ಕರಿಸಬಹುದು ಎಂದು ನ್ಯಾಯಾಲಯ ಎಚ್ಚರಿಸಿದೆ.