ಕಾನೂನು ಸಲಹೆ ನೆಪದಲ್ಲಿ ವಾಣಿಜ್ಯ ಚಟುವಟಿಕೆ: ವೃತ್ತಿ ಘನತೆ ಕುಂದಿಸಿದ ಆರೋಪದಡಿ ಐವರು ವಕೀಲರ ಸನದು ಅಮಾನತು- ರಾಜ್ಯ ವಕೀಲರ ಪರಿಷತ್ತಿನ ಮಹತ್ವದ ಆದೇಶ
ಕಾನೂನು ಸಲಹೆ ನೆಪದಲ್ಲಿ ವಾಣಿಜ್ಯ ಚಟುವಟಿಕೆ: ವೃತ್ತಿ ಘನತೆ ಕುಂದಿಸಿದ ಆರೋಪದಡಿ ಐವರು ವಕೀಲರ ಸನದು ಅಮಾನತು- ರಾಜ್ಯ ವಕೀಲರ ಪರಿಷತ್ತಿನ ಮಹತ್ವದ ಆದೇಶ
ಕಾನೂನು ಸಲಹೆ ನೀಡುವ ನೆಪದಲ್ಲಿ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವೃತ್ತಿ ಘನತೆಯನ್ನು ಕುಂದಿಸಿದ ಆರೋಪದಡಿ ಐವರು ವಕೀಲರ ಸನದು ಅಮಾನತು ಮಾಡಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಹತ್ವದ ಆದೇಶ ಹೊರಡಿಸಿದೆ.
ರೀಲ್ಸ್ ಮೂಲಕ ತಾವು ಕಾನೂನು ಸಲಹೆ ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಆರೋಪಿ ವಕೀಲರು ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ವೃತ್ತಿ ಘನತೆಗೆ ಕುಂದು ತಂದಿದ್ದಾರೆ ಎಂಬ ಆರೋಪದಡಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಐವರು ವಕೀಲರ ಸನ್ನದನ್ನು ಅಮಾನತುಗೊಳಿಸಿದೆ.
ವಕೀಲರಾದ ಬೆಂಗಳೂರಿನ ವಿನಯ್ ಕುಮಾರ್, ಜಿ. ಮಂಜುನಾಥ್, ರೇಣುಕಾ ದೇವಿ ಅಲಿಯಾಸ್ ರೇಣುಕಾ ಹಿರೇಮಠ, ಮೈಸೂರಿನ ವಿ. ರವಿಕುಮಾರ್ ಮತ್ತು ಹುಣಸೂರಿನ ಎನ್. ಪುಟ್ಟೇಗೌಡ ಅವರ ಸನ್ನದನ್ನು ಅಮಾನತುಗೊಳಿಸಿ ಕೆಎಸ್‌ಬಿಸಿ ಆದೇಶ ಹೊರಡಿಸಿದೆ.
ಸಾಮಾಜಿಕ ಮಾಧ್ಯಮ ಮತ್ತು ಇತರೆಡೆ ರೀಲ್ಸ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸು ಗಳನ್ನು ಒಪ್ಪಿಕೊಂಡು ಐದು ಮಂದಿಯ ಸನ್ನದು ಅಮಾನತುಗೊಳಿಸಲಾಗಿದೆ.
ಭಾರತೀಯ ವಕೀಲರ ಪರಿಷತ್ (ಬಿಸಿಐ) ನಿಯಮ 36, ವಕೀಲರ ಕರ್ತವ್ಯಕ್ಕೆ ಸಂಬಂಧಿಸಿದ್ದಾಗಿದ್ದು, ವಕೀಲರು ತಮ್ಮ ಕೆಲಸವನ್ನು ಯಾವುದೇ ರೀತಿಯಲ್ಲೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ವಿಧಾನ ಅಥವಾ ಮಾಧ್ಯಮ ಬಳಸಿ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಇದರ ಉಲ್ಲಂಘನೆಯು ವಕೀಲರ ಕಾಯಿದೆ ಸೆಕ್ಷನ್ 1961ರ ಪ್ರಕಾರ ಶಿಸ್ತು ಕ್ರಮಕ್ಕೆ ಆಸ್ಪದ ನೀಡಲಿದೆ.
ಆನ್‌ಲೈನ್ ವೇದಿಕೆಗಳಲ್ಲಿ ಪ್ರಚಾರ ಚಟುವಟಿಕೆ ನಡೆಸುವುದು ವೃತ್ತಿಪರತೆಗೆ ವಿರುದ್ದವೆಂದು ಮದ್ರಾಸ್ ಹೈಕೋರ್ಟ್ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪಿನ ಅನುಸಾರ ಬಿಸಿಐ 2024ರ ಜು.8ರಂದು ಅಕ್ರಮ ಚಟುವಟಿಕೆಗಳ ಕುರಿತು ವಕೀಲರಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೇ, ಅನುಮತಿ ಪಡೆಯದೆ, ಆನ್‌ಲೈನ್ ವೇದಿಕೆಗಳಲ್ಲಿ ಪ್ರಚಾರಕ್ಕೆ ಇಳಿದಿರುವ ವಕೀಲರ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್‌ಗಳಿಗೆ ಬಿಸಿಐ ನಿರ್ದೇಶನ ನೀಡಿತ್ತು.