ಇ-ಸ್ವತ್ತು ಅರ್ಜಿದಾರರಿಗೆ ಸಿಹಿ ಸುದ್ದಿ: 4 ತಿಂಗಳ ಪರದಾಡಕ್ಕೆ ಬ್ರೇಕ್, ಖಾತಾ ಗ್ರಹಣ ನಿವಾರಣೆ- ಆಸ್ತಿ ವರ್ಗಾವಣೆ ಇನ್ನು ನಿರಾತಂಕ
ಇ-ಸ್ವತ್ತು ಅರ್ಜಿದಾರರಿಗೆ ಸಿಹಿ ಸುದ್ದಿ: 4 ತಿಂಗಳ ಪರದಾಡಕ್ಕೆ ಬ್ರೇಕ್, ಖಾತಾ ಗ್ರಹಣ ನಿವಾರಣೆ- ಆಸ್ತಿ ವರ್ಗಾವಣೆ ಇನ್ನು ನಿರಾತಂಕ
ಇ-ಖಾತಾ ಇಲ್ಲದೆ ನಾಲ್ಕು ತಿಂಗಳಿನಿಂದ ಸಮಸ್ಯೆ ಅನುಭವಿಸುತ್ತಿದ್ದ ಗ್ರಾಹಕರ ಪರದಾಟಕ್ಕೆ ಬ್ರೇಕ್ ಬಿದ್ದಿದೆ. ಪಂಚಾಯತ್ ರಾಜ್ ಇಲಾಖೆ ಇ-ಸ್ವತ್ತು ಅರ್ಜಿದಾರರಿಗೆ ಸಿಹಿ ಸುದ್ದಿ ನೀಡಿದ್ದು, ಖಾತಾ ಗ್ರಹಣ ನಿವಾರಣೆ ಆಗಿದೆ ಎಂದು ಸ್ಪಷ್ಟಪಡಿಸಿದೆ. ಇದರಿಂದ ಆಸ್ತಿ ವರ್ಗಾವಣೆ ಇನ್ನು ನಿರಾತಂಕವಾಗಿ ನಡೆಯಲಿದೆ.
'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು- 2025'ರ ಅನ್ವಯ, ಈ ಹಿಂದೆ ಜಾರಿಯಲ್ಲಿದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಪರಿಷ್ಕರಿಸಿ ಡಿಸೆಂಬರ್ 1ರಂದು 'ಇ-ಸ್ವತ್ತು 2.0' ತಂತ್ರಾಂಶಕ್ಕೆ ಚಾಲನೆ ನೀಡಲಾಗಿತ್ತು.
'ಇ-ಸ್ವತ್ತು 2.0' ಜಾರಿಗೊಳ್ಳುವ ಮೊದಲು ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳನ್ನು ಗ್ರಾಮ ಪಂಚಾಯತಿಗಳು ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಟ್ಟಿದ್ದು, ಅದರಿಂದ ತೊಂದರೆಗೆ ಒಳಗಾಗಿರುವ ಜನರು ಹಾಗೂ ಸಂಸ್ಥೆಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ (ಸಿಇಒ) ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಏಪ್ರಿಲ್ 7ಕ್ಕೂ ಮೊದಲು ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳು ಪಂಚತಂತ್ರ ತಂತ್ರಾಂಶದಲ್ಲಿ ನಮೂದು ಆಗದೇ ಇದ್ದರೆ, ಇ-ಖಾತಾ ಪಡೆಯಲು 'ಇ-ಸ್ವತ್ತು 2.0' ತಂತ್ರಾಂಶದ 'ಸಿಟಿಜನ್ ಇಂಟರ್ ಫೇಸ್' ಮೂಲಕ ಹೊಸ ನಮೂನೆ-11 ಬಿ ಅರ್ಜಿಗಳನ್ನು ಸಲ್ಲಿಸಬೇಕು. ಈವರೆಗೆ 27 ಸಾವಿರಕ್ಕೂ ಹೆಚ್ಚು ಹೊಸ ಅರ್ಜಿಗಳು ಸಲ್ಲಿಕೆ ಆಗಿವೆ. ಈ ಪೈಕಿ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ ಅರ್ಜಿಗಳು 26 ಸಾವಿರ' ಎಂದು ಎಂದು ಪಂಚಾಯತ್ ರಾಜ್ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
2025ರ ಏಪ್ರಿಲ್ 7ಕ್ಕಿಂತ ಮೊದಲು ಸೃಜನೆ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರ್ಜಿಗಳನ್ನು ಪಿಡಿಒಗಳು ಹಾಗೂ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಗಳ ಮೂಲಕ ಅನುಮೋದನೆಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಕಳುಹಿಸಬೇಕು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಅನುಮೋದನೆ ಪಡೆದ ಬಳಿಕ 15 ದಿನಗಳ ಒಳಗೆ ನಮೂನೆ-11 ಬಿ ವಿತರಿಸಲಾಗುವುದು. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಸಚಿವರು ಮಾಹಿತಿ ನೀಡಿದ್ದಾರೆ.