-->
ಎಲ್‌ಎಲ್‌ಬಿ ಪದವಿ ಪಡೆಯಲು ಅವಕಾಶ ಕೋರಿ ಅರ್ಜಿ: ಸುಪ್ರೀಂ ಕದ ತಟ್ಟಿದ ನ್ಯಾಯಾಂಗ ಸಿಬ್ಬಂದಿ

ಎಲ್‌ಎಲ್‌ಬಿ ಪದವಿ ಪಡೆಯಲು ಅವಕಾಶ ಕೋರಿ ಅರ್ಜಿ: ಸುಪ್ರೀಂ ಕದ ತಟ್ಟಿದ ನ್ಯಾಯಾಂಗ ಸಿಬ್ಬಂದಿ

ಎಲ್‌ಎಲ್‌ಬಿ ಪದವಿ ಪಡೆಯಲು ಅವಕಾಶ ಕೋರಿ ಅರ್ಜಿ: ಸುಪ್ರೀಂ ಕದ ತಟ್ಟಿದ ನ್ಯಾಯಾಂಗ ಸಿಬ್ಬಂದಿ





ನಿಯಮಿತ ವಿದ್ಯಾರ್ಥಿಯಾಗಿ (Regular Student) ಎಲ್‌ಎಲ್‌.ಬಿ ಓದಲು ಅವಕಾಶ ಕೋರಿ ಛತ್ತೀಸ್‌ಗಢ ನ್ಯಾಯಾಲಯ ಸಿಬ್ಬಂದಿಯೊಬ್ಬರು ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಿದ್ದಾರೆ. ಛತ್ತೀಸ್‌ಗಢ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.


ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ನ್ಯಾಯಪೀಠವು ವಿಶೇಷ ಅನುಮತಿ ಅರ್ಜಿಯಲ್ಲಿ (SLP) ನೋಟಿಸ್ ನೀಡಿದೆ.


ಚತ್ತೀಸ್‌ಗಢ ಹೈಕೋರ್ಟ್‌ನ ಪ್ರಶ್ನಿತ ಆದೇಶದಲ್ಲಿ, ಪರೀಕ್ಷಾರ್ಥ ಅವಧಿಯ (probation) ಉದ್ಯೋಗಿಗೆ ನಿಯಮಿತ ವಿದ್ಯಾರ್ಥಿಯಾಗಿ ಎಲ್‌ಎಲ್‌.ಬಿ ಮೂರನೇ ವರ್ಷದ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಇದಕ್ಕೆ ಅನುಮತಿ ನೀಡಿದರೆ ಆಡಳಿತ ಶಿಸ್ತು, ಕಚೇರಿ ಕಾರ್ಯನಿರ್ವಹಣೆ ಮತ್ತು ಕಾನೂನುಬದ್ಧ ನಿಯಮಗಳ ಮೇಲೆ ಪರಿಣಾಮ ಬೀಳುತ್ತದೆ ಎಂದು ತೀರ್ಪು ಹೇಳಿತ್ತು.


ಪ್ರಕರಣದ ಹಿನ್ನಲೆ


ಸೆಪ್ಟೆಂಬರ್ 2022ರಲ್ಲಿ, ಒಬ್ಬ ಉದ್ಯೋಗಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಹಾಯಕ ಗ್ರೇಡ್-III ಹುದ್ದೆಗೆ ಮೂರು ವರ್ಷಗಳ ಪರೀಕ್ಷಾ ಅವಧಿಗೆ ನೇಮಕ ಮಾಡಲಾಗಿತ್ತು.


ನೇಮಕಾತಿ ನಿಯಮದ 7ನೇ ಷರತ್ತಿನ ಪ್ರಕಾರ, ಮೊದಲ ವರ್ಷದೊಳಗೆ ಉನ್ನತ ವಿದ್ಯಾಭ್ಯಾಸ ಮುಂದುವರಿಸಲು ಕಚೇರಿ ಮುಖ್ಯಸ್ಥರ ಪೂರ್ವಾನುಮತಿ ಅಗತ್ಯ.

ಉದ್ಯೋಗಿಯು ಮೊದಲ ಹಾಗೂ ಎರಡನೇ ವರ್ಷದ ಎಲ್‌ಎಲ್‌.ಬಿ ಓದಲು ಅನುಮತಿ ಪಡೆದಿದ್ದ.


2023ರ ನೂತನ ನಿಯಮಗಳು

06.10.2023ರಿಂದ ಜಾರಿಗೆ ಬಂದಿದ್ದು “ಛತ್ತೀಸ್‌ಗಢ ಜಿಲ್ಲಾ ನ್ಯಾಯಾಂಗ ಸ್ಥಾಪನೆ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2023” ರ ನಿಯಮ 11 ರ ಪ್ರಕಾರ ಉದ್ಯೋಗಿಗಳು ಯಾವುದೇ ವಿದ್ಯಾಭ್ಯಾಸವನ್ನು ನಿಯಮಿತ (ರೆಗ್ಯೂಲರ್) ವಿದ್ಯಾರ್ಥಿಯಾಗಿ ಮುಂದುವರಿಸಲು ಅವಕಾಶವಿಲ್ಲ.


ಆದರೆ, ಅನುಮತಿ ಪಡೆದು ಖಾಸಗಿ ಅಥವಾ ಅಂಚೆ ತೆರಪಿನ (ಕರೆಸ್ಪಾಂಡೆನ್ಸ್/correspondence) ಮೂಲಕ ಓದಲು ಅವಕಾಶವಿದೆ. ಆದುದರಿಂದ, ಮೂರನೇ ವರ್ಷದ ಎಲ್‌ಎಲ್‌.ಬಿ ಅನ್ನು ನಿಯಮಿತವಾಗಿ ಓದಲು ಅನುಮತಿ ಕೇಳಿದಾಗ ನೇಮಕಾತಿ ಪ್ರಾಧಿಕಾರ/ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅರ್ಜಿಯನ್ನು ತಿರಸ್ಕರಿಸಿದರು.


ಹೈಕೋರ್ಟ್‌ನ ವಿಚಾರಣೆ

ಜಿಲ್ಲಾ ನ್ಯಾಯಾಧೀಶರ ಆದೇಶದಿಂದ ಬಾಧಿತರಾದ ಉದ್ಯೋಗಿ ಛತ್ತೀಸ್‌ಗಢ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು.


ಈ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ನಿಯಮ 47ರ “ರದ್ದು ಮತ್ತು ಉಳಿಕೆ (repeal and saving)” ಪ್ರಾವಧಾನವನ್ನು ಉಲ್ಲೇಖಿಸಿ, 2023ರ ನಿಯಮಗಳು ಅನ್ವಯಿಸುವುದಿಲ್ಲ ಎಂದು ಹೇಳಿ, ಉದ್ಯೋಗಿಗೆ ಮೂರನೇ ವರ್ಷಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಆದೇಶಿಸಿತು.


ಆದರೆ, ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ರವೀಂದ್ರ ಕುಮಾರ್ ಅಗರ್ವಾಲ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಿತು.


ಪ್ರಕರಣವೀಗ ಸುಪ್ರೀಂ ಕೋರ್ಟ್‌ ಅಂಗಳದಲ್ಲಿ:


ಈ ಹಿನ್ನೆಲೆಯಲ್ಲಿ ಪ್ರಕರಣವು ಇದೀಗ ಸುಪ್ರೀಂ ಕೋರ್ಟ್ ಮುಂದೆ ಬಂದಿದೆ. ನ್ಯಾಯಾಲಯವು ಸಂಬಂಧಿತ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣವನ್ನು ಮುಂದಿನ ವಿಚಾರಣೆಗೆ ಮುಂದೂಡಲಾಗಿದೆ.


ಪ್ರಕರಣದ ಮಹತ್ವ

ಈ ಪ್ರಕರಣವು ಸರ್ಕಾರಿ ಸೇವೆಯಲ್ಲಿ ಇರುವವರ ಶಿಕ್ಷಣ ಹಕ್ಕು ಮತ್ತು ಸೇವಾ ನಿಯಮಗಳ ನಡುವೆ ಇರುವ ಸಮತೋಲನದ ಬಗ್ಗೆ ಪ್ರಮುಖ ಪ್ರಶ್ನೆಯನ್ನು ಎತ್ತುತ್ತದೆ. ಮುಂದಿನ ತೀರ್ಪು ಇಂತಹ ಪ್ರಕರಣಗಳಿಗೆ ಮಾರ್ಗದರ್ಶಕವಾಗುವ ಸಾಧ್ಯತೆ ಇದೆ.


ಪ್ರಕರಣದ ಶೀರ್ಷಿಕೆ

ಅಜಿತ್ ಚೌಬೇಲಾಲ್ ಗೊಹ್ರ ವಿರುದ್ಧ ಚತ್ತೀಸ್‌ಗಢ ಹೈಕೋರ್ಟ್ ಮತ್ತಿತರರು

ಸುಪ್ರೀಂ ಕೋರ್ಟ್‌, (SLP (C) No. 9672/2026)


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ದಕ್ಷಿಣ ಕನ್ನಡ ನ್ಯಾಯಾಂಗ ಇಲಾಖೆ







Ads on article

Advertise in articles 1

advertising articles 2

Advertise under the article