ಮರ ಸುತ್ತುವ ಪ್ರೇಮಿಗಳ ಹಿಂದೆ ಪೊಲೀಸರ ಕಣ್ಣು: ನೈಜ ಪ್ರಕರಣಗಳ ತನಿಖೆಗೆ ನಿರಾಸಕ್ತಿ ಬಗ್ಗೆ ಹೈಕೋರ್ಟ್ ಅಸಮಾಧಾನ
ಮರ ಸುತ್ತುವ ಪ್ರೇಮಿಗಳ ಹಿಂದೆ ಪೊಲೀಸರ ಕಣ್ಣು: ನೈಜ ಪ್ರಕರಣಗಳ ತನಿಖೆಗೆ ನಿರಾಸಕ್ತಿ ಬಗ್ಗೆ ಹೈಕೋರ್ಟ್ ಅಸಮಾಧಾನ
ಸಹ ಜೀವನ ನಡೆಸುವ ಪ್ರೇಮಿಗಳು, ಪಾರ್ಕ್‌ನಲ್ಲಿ ಮರ ಸುತ್ತುವ ಪ್ರೇಮಿಗಳ ಬಗ್ಗೆ ಗಮನ ಹರಿಸುವುದರಲ್ಲೇ ಪೊಲೀಸರು ಕಾಲ ಹರಣ ಮಾಡುತ್ತಿದ್ದಾರೆ. ನೈಜ ಪ್ರಕರಣಗಳ ತನಿಖೆಗೆ ಅವರು ನಿರಾಸಕ್ತಿ ಹೊಂದಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಸಮಾಧಾನ ವ್ಯಕ್ತಪಡಿಸಿದೆ.
ಕರ್ನಾಟಕದ ಪೊಲೀಸರು ಎಷ್ಟು ಬಲಶಾಲಿಗಳು ಎಂದರೆ ಅವರು ಲಿವ್ ಇನ್ ಸಂಬಂಧದ ಜೋಡಿಗಳು ಮತ್ತು ಮರ ಸುತ್ತುವ ಪ್ರೇಮಿಗಳು ಹಾಗೂ ದಂಪತಿಯ ಹಿಂದೆ ಹೋಗುತ್ತಾರೆ. ನೈಜ ಅಪರಾಧಗಳನ್ನು ಯಾರೂ ತನಿಖೆ ಮಾಡುತ್ತಿಲ್ಲ ಎಂದು ಮೌಖಿಕವಾಗಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ವ್ಯಂಗ್ಯವಾಡಿದರು.
ಕಾಂತಾರ ಸಿನಿಮಾದ ದೈವಪಾತ್ರಕ್ಕೆ ಅಪಮಾನ ಮಾಡಿದ ಸಂಬಂಧದ ಪ್ರಕರಣ ರದ್ದತಿ ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ನಡೆಸುತ್ತಿದ್ದರು.
ವಿಚಾರಣೆಯ ಒಂದು ಹಂತದಲ್ಲಿ “ರಣವೀರ್ ಸಿಂಗ್ ಅವರು ಚಾಮುಂಡಿ ಬೆಟ್ಟಕ್ಕೆ ನೀಡಲು ಭದ್ರತೆಯ ಸಮಸ್ಯೆ ಇದೆ” ಎಂದು ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೇಳಿದರು.
ಈ ಹಂತದಲ್ಲಿ ದೂರುದಾರರ ಪರ ವಕೀಲ ಸಿಜಿ ಮಲೆಯಾಳ್ ಅವರು “ಕರ್ನಾಟಕ ಪೊಲೀಸರು ಶಕ್ತಿಯುತವಾಗಿದ್ದು, ರಕ್ಷಣೆ ನೀಡುತ್ತಾರೆ” ಎಂದು ಸಮರ್ಥನೆಗೆ ಮುಂದಾದರು.
ಈ ಹಂತದಲ್ಲಿ ಸಿಜಿ ಮಲೆಯಾಳ್ ಅವರನ್ನು ತಡೆದ ಪೀಠವು “ಒಂದು ನಿಮಿಷ, ಕರ್ನಾಟಕ ಪೊಲೀಸರು ಎಷ್ಟು ಬಲಶಾಲಿಗಳು ಎಂದರೆ ಅವರು ಲಿವ್ ಇನ್ ಸಂಬಂಧ, ದಂಪತಿಯ ಹಿಂದೆ ಹೋಗುತ್ತಾರೆ. ನೈಜ ಅಪರಾಧಗಳನ್ನು ಯಾರೂ ತನಿಖೆ ಮಾಡುತ್ತಿಲ್ಲ. ಎಲ್ಲರೂ ಬಿಎನ್‌ಎಸ್ ಸೆಕ್ಷನ್ 69ರ (ಮದುವೆ ನೆಪದಲ್ಲಿ ಲೈಂಗಿಕ ದುರ್ಬಳಕೆ ಸಂಬಂಧಿತ ಅಪರಾಧಗಳು) ಅಡಿ ಅಪರಾಧಗಳನ್ನು ಮಾತ್ರ ತನಿಖೆ ಮಾಡುತ್ತಾರೆ” ಎಂದು ಕಿಡಿಕಾರಿತು.