-->
ದಕ್ಷಿಣದಲ್ಲಿ ಸುಪ್ರೀಂ ಪೀಠ, ಕರಾವಳಿಯಲ್ಲಿ ಹೈ-ಪೀಠ: 'ಸಮಾನ ನ್ಯಾಯದಾನ'ದ ಅವಕಾಶಕ್ಕೆ ದಾರಿ

ದಕ್ಷಿಣದಲ್ಲಿ ಸುಪ್ರೀಂ ಪೀಠ, ಕರಾವಳಿಯಲ್ಲಿ ಹೈ-ಪೀಠ: 'ಸಮಾನ ನ್ಯಾಯದಾನ'ದ ಅವಕಾಶಕ್ಕೆ ದಾರಿ

ದಕ್ಷಿಣದಲ್ಲಿ ಸುಪ್ರೀಂ ಪೀಠ, ಕರಾವಳಿಯಲ್ಲಿ ಹೈ-ಪೀಠ: 'ಸಮಾನ ನ್ಯಾಯದಾನ'ದ ಅವಕಾಶಕ್ಕೆ ದಾರಿ



ಅಂಕಣ ಬರಹ: ಶ್ರೀ ಸುಕೇಶ್ ಕುಮಾರ್ ಶೆಟ್ಟಿ, ವಕೀಲರು (9483804040)


ನ್ಯಾಯ ಎನ್ನುವುದು ಬಡವನ ಬಾಳಿಗೆ ನಿಲುಕದ ನಕ್ಷತ್ರವಾಗಬಾರದು. ಅದು ಕೈಗೆಟುಕುವಂತಿರಬೇಕು. "ನ್ಯಾಯ ಎಲ್ಲೆಡೆ" "ಎಲ್ಲರಿಗೂ ಸಮಾನ ಅವಕಾಶದ ನ್ಯಾಯ" ಎಂಬ ವಾಕ್ಯದಂತೆ ಕರಾವಳಿ ಹಾಗೂ ಸುತ್ತಮುತ್ತಲ ಪ್ರದೇಶದ ಜನರು ಬೆಟ್ಟ ಹತ್ತಿ ದೂರದ ಬೆಂಗಳೂರಿಗೆ ಹೋಗುವುದು ಒಂದು ತ್ರಾಸದಾಯಕವೇ ಸರಿ.

ಈ ಹಿನ್ನೆಲೆಯಲ್ಲಿ, ಕರಾವಳಿಯಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಸ್ಥಾಪನೆಯಾಗಬೇಕು ಎಂಬ ಹೋರಾಟಕ್ಕೆ ಈಗ ತೀವ್ರತೆ ಸಿಕ್ಕಿದೆ. ಮಂಗಳೂರಿನಲ್ಲಿ, ಅಥವಾ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ, ಈ ಪ್ರದೇಶದ ಜನರಿಗೆ ನ್ಯಾಯ ಎಂಬುದು ಸುಲಭ ಸಾಧ್ಯವಾಗುತ್ತದೆ. ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಸಹಿತ ಸುತ್ತಮುತ್ತಲ ಪ್ರದೇಶದ, ಜಿಲ್ಲೆಯ ಜನರಿಗೆ ಹೈಕೋರ್ಟ್ ಪೀಠದ ಪ್ರಯೋಜನ ದೊರೆಯಲಿದೆ.

ಇದರ ಜೊತೆಗೆ, ಕರಾವಳಿ ಮತ್ತು ಈ ಭಾಗದ ಅನೇಕ ಮೇಲ್ಮನವಿ ಅರ್ಜಿಗಳು, ರಿವಿಜನ್‌ ಪಿಟಿಷನ್‌ಗಳು, ಮಿಸಲೇನಿಯಸ್ ಫಸ್ಟ್ ಅಪೀಲ್‌ಗಳು ಸೇರಿದಂತೆ ಸಾವಿರಾರು ಸಂಖ್ಯೆಯ ಪ್ರಕರಣಗಳನ್ನು ಇದೇ ಭಾಗದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸಬಹುದಾಗಿದೆ. ಇದು ಬೆಂಗಳೂರಿನ ಪ್ರಧಾನ ಪೀಠದ ಮೇಲಿನ ಹೊರೆಯನ್ನೂ ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.

ದೊಡ್ಡ ಮಟ್ಟದ ಶಿಕ್ಷಣವಿಲ್ಲದಿದ್ದರೂ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿ ಬೆಂಗಳೂರಿನ ವಕೀಲರಿಗೆ ಅಪಾರ ಪ್ರಮಾಣದ ಫೀಸ್‌ನ್ನು ಸುರಿದು ವರ್ಷಾನುಗಟ್ಟಲೆ ಕಾನೂನು ಹೋರಾಟದ ಬಳಿಕ ಕೊನೆಗೆ ಬರಿಗೈಯಲ್ಲಿ ಬಂದ ಪ್ರಮೇಯವನ್ನು ನನ್ನ ಕುಟುಂಬದಲ್ಲೇ ನೋಡಿದ್ದೇನೆ. ಗೆಳೆಯರ ಜೀವನದಲ್ಲೂ ಇಂತಹ ಘಟನೆಗಳು ನಡೆದಿವೆ.

ಈ ಪ್ರದೇಶದಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪನೆಯಾದರೆ, ಅದು ಇಲ್ಲಿನ ಜನರಿಗೆ ವಿವಿಧ ಆಯಾಮಗಳಿಂದ ಉಪಯುಕ್ತವಾಗಲಿದೆ, ಅನುಕೂಲವಾಗಲಿದೆ. ಕಾನೂನು ವಿಚಾರದಲ್ಲಿ ಭೌಗೋಳಿಕವಾಗಿ, ಆರ್ಥಿಕವಾಗಿ ಮತ್ತು ಸಮಯದ ಉಳಿತಾಯದ ವಿಚಾರದಲ್ಲೂ ಅಭಿವೃದ್ಧಿಯ ವಿಚಾರದಲ್ಲೂ ವಿಭಾಗೀಯ ಪೀಠ ಸ್ಥಾಪನೆ ಎಂಬುದು ಒಂದು ಮೈಲುಗಲ್ಲು ಹಾಗೂ ಸಕಾರಾತ್ಮಕವಾದ ವಿದ್ಯಮಾನವಾಗುವುದು ಖಂಡಿತ.

ಅದೇ ರೀತಿ, ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ನ ಪೀಠ ಸ್ಥಾಪನೆಯಾಗಬೇಕು ಎಂಬುದು ಮತ್ತೊಂದು ಮಹತ್ವದ ವಿಚಾರ. ಇದೇ ವಿಚಾರವನ್ನು ಇತ್ತೀಚೆಗೆ ನಡೆದ ನ್ಯಾಯಾಂಗ ಅಧಿಕಾರಿಗಳ ದ್ವೈವಾರ್ಷಿಕ ಸಮ್ಮೇಳನದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರ ಸಮ್ಮುಖದಲ್ಲಿ ಮಾಡಿದ ಭಾಷಣದಲ್ಲಿ ಅವರು ಈ ಪ್ರಸ್ತಾಪ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಪೀಠವೊಂದು ದಕ್ಷಿಣ ಭಾರತದಲ್ಲಿ ಆರಂಭ ಆಗಬೇಕು. ನ್ಯಾಯ ಕೋರುವ ಅವಕಾಶವು ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂಬುದು ದೀರ್ಘಕಾಲದ ಬೇಡಿಕೆ. ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರುಚ್ಚರಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಪೀಠವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಿದರೆ ನ್ಯಾಯ ಕೋರುವ ಅವಕಾಶ ಲಕ್ಷಾಂತರ ಮಂದಿಗೆ ಸಿಗಲಿದೆ. ಪ್ರಸ್ತುತ ದಕ್ಷಿಣ ಭಾರತದ ಜನರಿಗೆ ದೂರ ಮತ್ತು ವೆಚ್ಚದ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಕಷ್ಟದ ಕೆಲಸವಾಗಿದೆ. ಸಿದ್ದರಾಮಯ್ಯ ಅವರು ಮಂಡಿಸಿರುವ ಬೇಡಿಕೆ ಈ ನಿಟ್ಟಿನಲ್ಲಿ ಸರಿಯಾಗಿದೆ ಮತ್ತು ಸಂವಿಧಾನಬದ್ಧವಾಗಿದೆ.

ಸುಪ್ರೀಂ ಕೋರ್ಟ್‌ನ ಶಾಶ್ವತ ಪೀಠವು ದೆಹಲಿಯಲ್ಲಿರಬೇಕು. ಭಾರತದ ಸಂವಿಧಾನದ 130ನೆಯ ವಿಧಿ ಇದನ್ನೇ ಪ್ರತಿಪಾದಿಸುತ್ತದೆ. ಆದರೆ, ಭಾರತದ ಮುಖ್ಯ ನ್ಯಾಯಮೂರ್ತಿಗಳು ಸನ್ಮಾನ್ಯ ರಾಷ್ಟ್ರಪತಿಯವರ ಒಪ್ಪಿಗೆಯೊಂದಿಗೆ ಇತರ ಸ್ಥಳಗಳಲ್ಲಿಯೂ ಪೀಠ ಆರಂಭಿಸಬಹುದು ಎಂದೂ ಆ ವಿಧಿ ಹೇಳುತ್ತದೆ.

ಸುಪ್ರೀಂ ಕೋರ್ಟ್‌ನ ಮೇಲೆ ಹೆಚ್ಚುತ್ತಿರುವ ಹೊರೆಯು ಈ ಸುಧಾರಣೆಯ ಅಗತ್ಯವನ್ನು ಒತ್ತಿಹೇಳುತ್ತಿದೆ. ಈ ವರ್ಷದ ಮಾರ್ಚ್ ವೇಳೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದ್ದ ಪ್ರಕರಣಗಳ ಸಂಖ್ಯೆ 92 ಸಾವಿರಕ್ಕೂ ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ಇದು ಕೋರ್ಟ್‌ನ ಮೇಲಿರುವ ಹೊರೆಯನ್ನು ಸೂಚಿಸುತ್ತಿದೆ.

ಈ ಸಮಸ್ಯೆಗೆ 18ನೇ ಕಾನೂನು ಆಯೋಗವು ಒಂದು ವ್ಯಾವಹಾರಿಕ ಪರಿಹಾರವನ್ನು ಸೂಚಿಸಿತ್ತು. ದೇಶದ ಮಹಾನಗರಗಳಾದ ದೆಹಲಿ, ಚೆನ್ನೆ ಅಥವಾ ಹೈದರಾಬಾದ್, ಕೋಲ್ಕತ್ತ ಮತ್ತು ಮುಂಬೈನಲ್ಲಿ ಒಟ್ಟು ನಾಲ್ಕು ಪೀಠಗಳನ್ನು ಆರಂಭಿಸಬೇಕು; ಇವು ಮೇಲ್ಮನವಿ ಅರ್ಜಿಗಳ ವಿಚಾರಣೆ ದೆಹಲಿಯಲ್ಲಿನ ಕೋರ್ಟ್‌ನ ಪ್ರಧಾನ ಪೀಠವು ಸಂವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಆಲಿಸಬೇಕು ಎಂಬ ಸಲಹೆಯನ್ನು ಆಯೋಗ ನೀಡಿತ್ತು.

ಆದರೆ, ಆಯೋಗದ ಸಲಹೆಯನ್ನು ಪರಿಶೀಲಿಸಿದರೆ, ಕೋರ್ಟ್‌ನ ಕೆಲಸಗಳ ಹೊರೆ ಹಂಚಿಕೆ ಬದಲಾವಣೆ ಆಗುವುದಿಲ್ಲ. ಸಲಹೆಗೆ ವಿರೋಧ ಇದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ಆತಂಕವೂ ಇದಕ್ಕೆ ಕಾರಣವಾಗಿರಬಹುದು. ಭಿನ್ನ ಪೀಠಗಳಿಂದ ಭಿನ್ನ ಬಗೆಯ ತೀರ್ಪುಗಳು ಬರಬಹುದು, ಸುಪ್ರೀಂ ಕೋರ್ಟ್ ಎಂಬುದು ರಾಷ್ಟ್ರಮಟ್ಟದಲ್ಲಿ ನ್ಯಾಯಾಂಗದ ಪಾಲಿನ ಪ್ರಧಾನ ಸ್ತಂಭ ಎಂಬ ಭಾವನೆಗೆ ಚ್ಯುತಿ ಬರಬಹುದು ಎಂಬ ಆತಂಕಗಳು ಆಯೋಗದ ಸಲಹೆಯನ್ನು ಕಾರ್ಯರೂಪಕ್ಕೆ ತರಲು ಬಿಟ್ಟಿಲ್ಲ.

ಆದರೆ, ಈ ಭೀತಿಗೂ ಒಂದು ಸಕಾರಣವಿದೆ. ಆದರೆ, ಭಯ ಅನಗತ್ಯ. ವಿವಿಧ ಪೀಠಗಳಲ್ಲಿ ಭಿನ್ನ ತೀರ್ಪುಗಳು ಪ್ರಕಟವಾದರೆ, ವಿಸ್ತ್ರತ ಪೀಠವು ಅವುಗಳ ಬಗ್ಗೆ ಪರಿಶೀಲನೆ ನಡೆಸುವ ವ್ಯವಸ್ಥೆ ಹಾಗೂ ಪೂರ್ವನಿದರ್ಶನವನ್ನು ಪ್ರಮಾಣವಾಗಿ ಸ್ವೀಕರಿಸುವ ವ್ಯವಸ್ಥೆಯು ಈಗಿರುವ ನ್ಯಾಯಾಂಗ ವ್ಯವಸ್ಥೆಯಲ್ಲೇ ಅಂತರ್ಗತವಾಗಿದೆ.

ಆದರೆ, ನ್ಯಾಯ ಸರ್ವತ್ರವಾಗಿರಬೇಕು, ನ್ಯಾಯದಾನದ ಪ್ರಯೋಜನ ಜನರಿಗೆ ಸುಲಭವಾಗಿ ದೊರಕಬೇಕು ಎಂಬ ಆಶಯಕ್ಕೆ ಬಲ ಸಿಗುವುದಿಲ್ಲ. ಸದ್ರಿ ಈಗಿರುವ ವ್ಯವಸ್ಥೆಯಿಂದ ದೇಶದ ಬಹುದೊಡ್ಡ ಜನವರ್ಗವನ್ನು ನ್ಯಾಯಾಂಗ ವ್ಯವಸ್ಥೆಯ ಅಂಚಿನಲ್ಲಿಯೇ ಇರಿಸುವುದರಲ್ಲಿ ಹೆಚ್ಚಿನ ಸಮಸ್ಯೆ ಇದೆ.

ದೇಶದ ಉತ್ತರ ಭಾಗದಲ್ಲಿನ ಹೈಕೋರ್ಟ್‌ಗಳು ನೀಡುವ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗುವ ಮೇಲ್ಮನವಿಗಳು ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚಿವೆ. ಇದೇ ವೇಳೆ ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಆದೇ ಪ್ರಮಾಣದಲ್ಲಿ ವ್ಯಾಜ್ಯಗಳು ಇವೆಯಾದರೂ, ಅಲ್ಲಿಂದ ಸಲ್ಲಿಕೆಯಾಗುವ ಮೇಲ್ಮನವಿಗಳ ಪ್ರಮಾಣವು ಬಹಳ ಕಡಿಮೆ ಇದೆ. ದಕ್ಷಿಣ ಭಾರತದವರಿಗೆ ದೆಹಲಿಯು ದೂರವಾಗಿರುವುದು ಒಂದು ಅಡ್ಡಿಯಂತೆ ಆಗಿದೆ.

ಪ್ರಯಾಣದ ವೆಚ್ಚ, ವಿಶೇಷ ಪರಿಣತಿ ಇರುವ ವಕೀಲರನ್ನು ದೆಹಲಿಯಲ್ಲಿ ನೇಮಕ ಮಾಡಿಕೊಳ್ಳುವುದು ಅರ್ಜಿದಾರರ ಪಾಲಿಗೆ ಸುಲಭವಲ್ಲ. ಕಾನೂನು ಆಯೋಗವು ಹೇಳಿರುವಂತೆ, ಹಲವರಿಗೆ ನ್ಯಾಯವು ಮರೀಚಿಕೆಯಂತೆ ಆಗುತ್ತದೆ.

ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಪೀಠ ಆಗುತ್ತದೆ, ಈ ಮೂಲಕ ನ್ಯಾಯದಾನ ವ್ಯವಸ್ಥೆ ಜನಸಾಮಾನ್ಯರಿಗೆ ಇನ್ನಷ್ಟು ಆಪ್ತವಾಗುತ್ತದೆ, ಹತ್ತಿರವಾಗುತ್ತದೆ.

ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳಿಂದ ಮೇಲ್ಮನವಿಗಳು ಸಲ್ಲಿಕೆಯಾಗುತ್ತಿಲ್ಲ ಎಂಬುದು ನಿಜ. ಆದರೆ, ಅದರ ಅರ್ಥ ಇಲ್ಲಿನ ಹೈಕೋರ್ಟ್‌ಗಳ ಆದೇಶಗಳನ್ನೆಲ್ಲ ಅರ್ಜಿದಾರರು ಒಪ್ಪಿಕೊಳ್ಳುತ್ತಿದ್ದಾರೆ ಎಂದರ್ಥವಲ್ಲ. ಅವರಿಗೆ ಈ ಆದೇಶಗಳನ್ನು ಪ್ರಶ್ನಿಸುವುದು ಅವರಿಗೆ ತ್ರಾಸದಾಯಕವಾಗುತ್ತದೆ. ಈ ವಿಷಯವನ್ನು ಸ್ವತಃ ಅಖಿಲ ಭಾರತ ವಕೀಲರ ಒಕ್ಕೂಟ ಸ್ಪಷ್ಟಪಡಿಸಿದೆ.

ಉದಾಹರಣೆಗೆ ಹೇಳುವುದಾದರೆ, ಮದ್ರಾಸ್ ಹೈಕೋರ್ಟ್ ಇತ್ಯರ್ಥಪಡಿಸುವ ಒಂದು ಲಕ್ಷ ಪ್ರಕರಣಗಳ ಪೈಕಿ ಒಂಬತ್ತು ಸಾವಿರ ಪ್ರಕರಣಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಕೆಯಾಗುತ್ತಿದೆ. ಅರ್ಜಿದಾರನು ಭೌಗೋಳಿಕವಾಗಿ ಎಲ್ಲಿ ನೆಲಸಿದ್ದಾನೆ ಎಂಬುದು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದರ ಮೇಲೆ ಪರಿಣಾಮ ಬೀರುವಾಗ, ನ್ಯಾಯಕ್ಕೆ ಸಮಾನ ಅವಕಾಶ ಎಂಬ ತತ್ತ್ವಕ್ಕೆ ಭಂಗ ಉಂಟಾಗುತ್ತದೆ.

ಹೀಗಾಗಿ ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಪೀಠ ಸ್ಥಾಪನೆಯಾಗಬೇಕು ಎಂಬ ಬೇಡಿಕೆಯು ಕೇವಲ ಒಂದು ರಾಜ್ಯದ ಅಥವಾ ಒಂದು ಪ್ರದೇಶದ ಜನರ ಮನವಿಯಷ್ಟೇ ಅಲ್ಲ, ಅದು ಸಾಂವಿಧಾನಿಕವಾದ ನೆನಪೋಲೆ, ಸುಪ್ರೀಂ ಕೋರ್ಟ್‌ ಕೆಲಸವನ್ನು ವಿಕೇಂದ್ರೀಕರಿಸುವುದರಿಂದ ಅದರ ಘನತೆ ತಗ್ಗಿಸಿದಂತೆ ಆಗುವುದಿಲ್ಲ.

ಹಾಗೆ ಮಾಡುವುದರಿಂದ ಕೋರ್ಟ್ ಎಲ್ಲರಿಗೂ ಇನ್ನಷ್ಟು ಹತ್ತಿರವಾದಂತೆ ಆಗುತ್ತದೆ. ವಿಶಾಲವಾದ ಗಣರಾಜ್ಯದಲ್ಲಿ ವ್ಯಕ್ತಿಯೊಬ್ಬ ನ್ಯಾಯ ಪಡೆಯುವುದು ಆತ ದೆಹಲಿಯಿಂದ ಎಷ್ಟು ದೂರದಲ್ಲಿದ್ದಾನೆ ಎಂಬುದನ್ನು ಆಧರಿಸಿರಬಾರದು.

ಈ ದೃಷ್ಟಿಯಿಂದ ನೋಡಿದರೆ, ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಪೀಠ ಹಾಗೂ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬ ಬಹುಕಾಲದ ಬೇಡಿಕೆ ನ್ಯಾಯಯುತವಾಗಿದೆ ಮತ್ತು ಸಮಾನ ನ್ಯಾಯದ ಅವಕಾಶ ಎಂಬ ತತ್ವಕ್ಕೆ ಸೂಕ್ತವಾಗಿದೆ.


ಅಂಕಣ ಬರಹ: ಶ್ರೀ ಸುಕೇಶ್ ಕುಮಾರ್ ಶೆಟ್ಟಿ, ವಕೀಲರು (9483804040)


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu