LAW POINT- 45 ರಸ್ತೆ ಅಪಘಾತ: ಗೃಹಿಣಿಯರು, ನೋವುಂಡವರಿಗೆ ಘನತೆ ನೀಡಿದ ಎರಡು ತೀರ್ಪುಗಳು
ರಸ್ತೆ ಅಪಘಾತ: ಗೃಹಿಣಿಯರು, ನೋವುಂಡವರಿಗೆ ಘನತೆ ನೀಡಿದ ಎರಡು ತೀರ್ಪುಗಳು
'ರಸ್ತೆ ಅಪಘಾತ' ಎನ್ನುವುದು ಆಕಸ್ಮಿಕವಷ್ಟೇ ಅಲ್ಲ ಆಘಾತಕಾರಿ ಘಟನೆಯೂ ಹೌದು. ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಓಡಿಸುವುದು, ವಾಹನದ ಕಾರಣಕ್ಕೋ ಅಥವಾ ಗತಿಗೆಟ್ಟ ರಸ್ತೆಯ ಕಾರಣಕ್ಕೋ, ಚಾಲಕ ಕೊಂಚ ಎಚ್ಚರ ತಪ್ಪಿದರೂ ವಾಹನ ಅಪಘಾತವಾಗುತ್ತದೆ. ಇದರಿಂದ ಆಗುವ ಸಾವು-ನೋವುಗಳು ಅಪಾರ.
ಮಾನವನ ಜೀವನದಲ್ಲಿ ಇಂತಹ ಒಂದು ಅಪಘಾತಗಳು ಜೀವಮಾನಕ್ಕೆ ಆಗುವಷ್ಟು ನೋವನ್ನು ಸಂಕಷ್ಟವನ್ನು ನೀಡುತ್ತದೆ ಎನ್ನುವುದರದಲ್ಲಿ ಎರಡು ಮಾತಿಲ್ಲ. ರಸ್ತೆ ಸಂಚಾರ ಸುರಕ್ಷಿತವಾಗಿಬೇಕು, ಅಪಘಾತಗಳು ಸಂಭವಿಸಬಾರದು. ಆದರೂ, ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ.
ಅಪಘಾತದಲ್ಲಿ ಸಂತ್ರಸ್ತರು ವಿಮಾ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರುತ್ತಾರೆ. ಇಂತಹ ಸಂತ್ರಸ್ತರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎರಡು ಮಹತ್ವದ ಆದೇಶಗಳನ್ನು 2026ರ ಜೂನ್‌ನಲ್ಲಿ ಪ್ರಕಟಿಸಿದ್ದು, ಈ ಆದೇಶಗಳ ಬಗ್ಗೆ ಒಂದಿಷ್ಟು ಮಾತು ಹೇಳಲೇಬೇಕಾಗಿದೆ.
ಶಿಶುಪಾಲ್ @ಶಿಶ್‌ರಾಮ್ ವಿರುದ್ಧ ಸುರ್ಜೀತ್ ಮತ್ತಿತರರು ಪ್ರಕರಣ. (ಸುಪ್ರೀಂ ಕೋರ್ಟ್, ದಿನಾಂಕ 11-06-2026)
ಗೃಹಿಣಿಯರು "ರಾಷ್ಟ್ರ ನಿರ್ಮಾತೃಗಳು" ಸದ್ದಿಲ್ಲದೆ ಅವರು ನೀಡಿರುವ ಕೊಡುಗೆಯನ್ನು ಎಲ್ಲರಿಗೂ ಗೋಚರಿಸುವಂತೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಮೋಟಾರು ಅಪಘಾತ ಪರಿಹಾರ ವಿಷಯಗಳಲ್ಲಿ ಹೆಚ್ಚುವರಿ ಮುಖ್ಯಸ್ಥರಾಗಿ "ಗೃಹ ಆರೈಕೆಯ ನಷ್ಟ" ಎಂಬ ಶೀರ್ಷಿಕೆಯನ್ನು ಸೇರಿಸಿದೆ.
ಗೃಹಿಣಿಯರ ಶ್ರಮಕ್ಕೆ ಆರ್ಥಿಕ ಮೌಲ್ಯ ಗೃಹಕೃತ್ಯದ ಘನತೆಗೆ ಸುಪ್ರೀಂ ಕೋರ್ಟ್ ಅಡಿಗೆರೆ ಹಾಕಿದ್ದು, ಮಹಿಳೆಯರ ಗೃಹಕೃತ್ಯಗಳ ಶ್ರಮಕ್ಕೆ ಮಾಸಿಕ ರೂ. 30,000 'ಅಂದಾಜು ಮೌಲ್ಯ'ವನ್ನು ನಿಗದಿಪಡಿಸಿದೆ.
ಗೃಹಿಣಿಯರ ಗೃಹಕೃತ್ಯವನ್ನು ಹಣಕಾಸಿನ ಮೌಲ್ಯದಿಂದ ಗುರುತಿಸಲು ನ್ಯಾಯಾಂಗ ಒದಗಿಸಿಕೊಟ್ಟಿರುವ ಮಾರ್ಗಸೂಚಿ ಇದಾಗಿದೆ. ಇದರ ಜೊತೆಗೆ ಗೃಹಿಣಿಯರ ಸಾಮಾಜಿಕ ಮತ್ತು ಆರ್ಥಿಕ ಮಹತ್ವವನ್ನು ಸಾರಿ ಹೇಳಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಸ್ವರ್ ಸಿಂಗ್ ಅವರಿದ್ದ ನ್ಯಾಯಪೀಠ ನೀಡಿದ ತೀರ್ಪು, ಮನೆ ಮತ್ತು ಕುಟುಂಬಕ್ಕಾಗಿ ಶ್ರಮಿಸುವ ಮಹಿಳೆಯರನ್ನು ಗೃಹಿಣಿಯರ ಪಾತ್ರಕ್ಕೆ ಸೀಮಿತಗೊಳಿಸದೆ, 'ರಾಷ್ಟ್ರ ನಿರ್ಮಾತೃಗಳು' ಎಂದು ಬಣ್ಣಿಸಿದೆ.
ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಅಥವಾ ಗಾಯಗೊಂಡ ಗೃಹಿಣಿಯರಿಗೆ ಪರಿಹಾರದ ಮೊತ್ತವನ್ನು ಲೆಕ್ಕ ಹಾಕುವಾಗ, ಅವರ ವೇತನರಹಿತ ಮನೆಕೆಲಸ ಮತ್ತು ಆರೈಕೆ ಸೇವೆಗಳ ಮೌಲ್ಯವನ್ನು ತಿಂಗಳಿಗೆ ಕನಿಷ್ಠ ರೂ. 30,000 ಎಂದು ಪರಿಗಣಿಸಲು ಈ ತೀರ್ಪು 'ಮಾನದಂಡ' ರೂಪಿಸಿದೆ. ಅಷ್ಟೇ ಅಲ್ಲ, ಈ ಮೊತ್ತವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇಕಡಾ 10ರಷ್ಟು ಹೆಚ್ಚಿಸಬೇಕು ಎಂದೂ ಹೇಳಿದೆ.
ಪಂಜಾಬ್‌ನಲ್ಲಿ 2001ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಕುಟುಂಬಕ್ಕೆ ಅತ್ಯಲ್ಪ ಮೊತ್ತದ ಪರಿಹಾರದ ತೀರ್ಪನ್ನು ಪ್ರಶ್ನಿಸಿ ಮೃತ ಮಹಿಳೆಯ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ಈ ಮಹತ್ವದ ನಿರ್ದೇಶನ ನೀಡಿದೆ. ಗೃಹಿಣಿಯರ ಗೃಹಕೃತ್ಯದ ಮೌಲ್ಯ ನಿಗದಿ ಕುರಿತಂತೆ ಪ್ರಸ್ತುತ ಕೋರ್ಟ್ ಒದಗಿಸಿಕೊಟ್ಟಿರುವ ತಾತ್ವಿಕತೆ ಮುಂದಿನ ದಿನಗಳಲ್ಲಿ ಇಂತಹ ಎಲ್ಲ ಪ್ರಕರಣಗಳಲ್ಲಿ ದಿಕ್ಕೂಚಿ ಆಗಲಿದೆ ಹಾಗೂ ಗೃಹಕೃತ್ಯವನ್ನು ಉಡಾಫೆಯಿಂದ ನಿರ್ಲಕ್ಷಿಸುವ ಸಾಮಾಜಿಕ ಪ್ರವೃತ್ತಿಗೆ ವಿರುದ್ಧವಾದ ಮನೋಸ್ಥಿತಿ ರೂಪಿಸಲು ಈ ತೀರ್ಪು ಸಹಕಾರಿಯಾಗಲಿದೆ.
ಮನೆಯ 'ಗೃಹಿಣಿ'ಯನ್ನು ಆ ಕುಟುಂಬದ ದುಡಿಯುವ ಸದಸ್ಯರನ್ನು ಅವಲಂಬಿ ಎಂದು ನೋಡಲಾಗುತ್ತದೆ. ಆದರೆ, ನಿಜವಾಗಿ ಆ ಮನೆಯ ಬಹುತೇಕ ನಿರ್ವಹಣೆ ಆಕೆಯ ಅಗೋಚರ ಶಕ್ತಿಯನ್ನು ಶ್ರಮವನ್ನು ಅವಲಂಬಿಸಿದೆ ಎಂಬುದನ್ನು ನ್ಯಾಯಪೀಠ ಗಮನಿಸಿದೆ.
ಗೃಹಿಣಿಯರ ಆಕಸ್ಮಿಕ ಸಾವಿನ ಸಂದರ್ಭದಲ್ಲಿ 'ಗೃಹಪಾಲನೆ'ಯ ನಷ್ಟವನ್ನು ಲೆಕ್ಕ ಮಾಡುವಾಗ, ತಿಂಗಳಿಗೆ ₹30 ಸಾವಿರ ಮೊತ್ತವನ್ನು ಕನಿಷ್ಠ ಆದಾಯದ ಮಾನದಂಡವಾಗಿ ಪರಿಗಣಿಸಬೇಕು ಹಾಗೂ ಅದನ್ನು ಪ್ರತ್ಯೇಕ ಪರಿಹಾರದ ರೂಪದಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ. ಗೃಹಿಣಿಯು ಉದ್ಯೋಗದಲ್ಲಿದ್ದು ಆದಾಯ ಗಳಿಸುತ್ತಿರುವ ಸಂದರ್ಭಗಳಲ್ಲಿ, ಕೋರ್ಟ್ ನಿಗದಿಪಡಿಸಿರುವ ಗೃಹಪಾಲನೆಯ ಮೌಲ್ಯವನ್ನು ಆಕೆಯ ಮಾಸಿಕ ಆದಾಯಕ್ಕೆ ಹೆಚ್ಚುವರಿಯಾಗಿ ಸೇರಿಸಬೇಕು ಎಂದೂ ನಿರ್ದೇಶಿಸಿದೆ.
ಗೃಹಿಣಿಯರು ತಮ್ಮ ಗೃಹ ಕೃತ್ಯಕ್ಕೆ ವ್ಯಯಿಸುವ ಸಮಯದ ಅಧ್ಯಯನ ನಡೆಸಿರುವ 2019ರ 'ಟೈಮ್ ಯೂಸ್ ಸಮೀಕ್ಷೆಯ ಉಲ್ಲೇಖವನ್ನೂ ತೀರ್ಪಿನಲ್ಲಿ ಮಾಡಲಾಗಿದೆ. 15ರಿಂದ 59 ವಯಸ್ಸಿನ ಮಹಿಳೆಯರು ಯಾವುದೇ ಸಂಬಳ ಇಲ್ಲದೆ ಪ್ರತಿ ದಿನ ಏಳು ಗಂಟೆಗಿಂತಲೂ ಹೆಚ್ಚಿನ ಸಮಯವನ್ನು ಗೃಹಕೃತ್ಯಗಳಲ್ಲಿ ಕಳೆಯುತ್ತಾರೆ. ದಿನಕ್ಕೆ ಮೂರು ತಾಸು ಗೃಹ ಕೃತ್ಯಕ್ಕೆ ವ್ಯಯಿಸುವ ಪುರುಷರನ್ನು ಇದಕ್ಕೆ ಹೋಲಿಸಿದರೆ ಗೃಹಿಣಿಯರ ಶ್ರಮದ ಹೋಲಿಕೆ ಅಜಗಜಾಂತರ ಎಂಬುದನ್ನು ಸುಪ್ರೀಂ ಕೋರ್ಟ್ ಬೊಟ್ಟು ಮಾಡಿದೆ.
ಕುಟುಂಬಕ್ಕೆ ಆರ್ಥಿಕ ಕೊಡುಗೆ ನೀಡುವ ಸಂದರ್ಭಗಳಲ್ಲಿಯೂ, ಪುರುಷರಿಗಿಂತ 2.6 ಪಟ್ಟು ಹೆಚ್ಚು ಮನೆಕೆಲಸ ಹಾಗೂ ಅರೈಕೆ ಸೇವೆಗಳನ್ನು ಮಹಿಳೆ ನಿರ್ವಹಿಸುತ್ತಾರೆ ಎಂದೂ ಸಮೀಕ್ಷೆ ಹೇಳಿದೆ. ಮಹಿಳೆಯರ ಸಂಬಳರಹಿತ ಸೇವೆ ಭಾರತದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 15ರಿಂದ 17ರಷ್ಟು ಕೊಡುಗೆ ನೀಡುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ, ಗೃಹಿಣಿಯರ ಈ ಕೊಡುಗೆಗೆ ಸೂಕ್ತ ಮಾನ್ಯತೆ ದೊರೆತಿಲ್ಲ.
ಮಹಿಳೆಯರ ಅಸ್ಮಿತೆಯ ಬಗ್ಗೆ ಪೂರ್ವಗ್ರಹವುಳ್ಳ ಪುರುಷಪ್ರಧಾನ ಸಮಾಜವು, ಅವರ ದುಡಿಮೆಯ ಮೌಲ್ಯವನ್ನೂ ಕಡೆಗಣ್ಣಿನಿಂದ ನೋಡುತ್ತದೆ. ಸಂಪ್ರದಾಯಗಳು ಹಾಗೂ ಸಾಮಾಜಿಕ ರೂಢಿಗಳು ತಮ್ಮ ಬಗೆಗಿನ ನಿರ್ಲಕ್ಷ್ಯವನ್ನು ಮಹಿಳೆಯರು ಮೌನವಾಗಿ ಒಪ್ಪಿಕೊಳ್ಳುವಂತೆ ಮಾಡಿವೆ. ಕುಟುಂಬ ವ್ಯವಸ್ಥೆಯಲ್ಲಿನ ಆರ್ಥಿಕ ಸಮೀಕರಣವನ್ನು ಸುಪ್ರೀಂ ಕೋರ್ಟ್ ತೀರ್ಪು ಬದಲಿಸದಿರಬಹುದು; ಆದರೆ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರವನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನೆರವಿಗೆ ಬರಲಿದೆ.
ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಇಲ್ಲಿಯವರೆಗೆ ನಿರ್ಲಕ್ಷ್ಯಕ್ಕೊಳಗಾದ, ಸದ್ದಿಲ್ಲದೆ ಕುಟುಂಬದ ಆಧಾರಸ್ತಂಬವಾಗಿ ನಿಂತಿರುವ ಮಹಿಳೆಯರ ಶ್ರಮದ ಆರ್ಥಿಕ ಮೌಲ್ಯಕ್ಕೆ ಕಾನೂನುಬದ್ಧ ಚೌಕಟ್ಟನ್ನು ಒದಗಿಸಿರುವುದು ಸುಪ್ರೀಂ ಕೋರ್ಟ್ ಈ ತೀರ್ಪಿನ ವಿಶೇಷ ಸಾಧನೆಯಾಗಿದೆ.
ಶಂಕರ್ ದತ್ ವಿರುದ್ಧ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂ.ಲಿ. (ಸುಪ್ರೀಂ ಕೋರ್ಟ್ 24-06-2026)
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠ ನೀಡಿದ ಮೈಲುಗಲ್ಲಾದ ಮತ್ತೊಂದು ತೀರ್ಪು ಇದು. ರಸ್ತೆ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಾಯಾಳು ಆದಾಯ ನಷ್ಟ ಪರಿಗಣನೆ ಮಾಡಲು ಮತ್ತು ಪರಿಹಾರದ ಲೆಕ್ಕಾಚಾರಕ್ಕೆ ಈ ತೀರ್ಪು ಹೊಸ ಸೂತ್ರವನ್ನು ರೂಪಿಸಿತು.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ "ಅಂಗವೈಕಲ್ಯ ಪ್ರಮಾಣ" ಮಾತ್ರ ಪರಿಗಣಿಸದೆ ಆ ವ್ಯಕ್ತಿಯ ವೃತ್ತಿ ಮತ್ತು ಅದರಿಂದ ಬರುತ್ತಿದ್ದ ಆದಾಯದಲ್ಲಿ ಆದ ನಷ್ಟವನ್ನು ಗಣನೆಗೆ ತೆಗೆದುಕೊಂಡು ಪರಿಹಾರವನ್ನು ಲೆಕ್ಕಾಚಾರ ಮಾಡಬೇಕು' ಎಂದು ತೀರ್ಪು ಸ್ಪಷ್ಟಪಡಿಸಿತು.
ವೈದ್ಯಕೀಯ ವೆಚ್ಚ, ಆದಾಯ ನಷ್ಟದ ಜೊತೆಗೆ, ಭವಿಷ್ಯದ ದೃಷ್ಟಿಯಿಂದಲೂ ಪರಿಹಾರವನ್ನು ಲೆಕ್ಕಾಚಾರ ಮಾಡಬೇಕು. ಸಾಮಾನ್ಯ ಜೀವನ ನಡೆಸಲು ಕಷ್ಟವಾಗುವಂಥ ಸ್ಥಿತಿ, ಕಾಲು ಕಳೆದುಕೊಂಡಿದ್ದರಿಂದ ಆದ ನೋವು, ಭಯ ಮತ್ತು ಸಂಕಟವನ್ನೂ ಪರಿಗಣಿಸಬೇಕು ಸುಪ್ರೀಂ ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ.
ರಸ್ತೆ ಅಪಘಾತಗಳಲ್ಲಿ ಶಾಶ್ವತವಾಗಿ ಅಂಗವೈಕಲ್ಯ ಅನುಭವಿಸಿದ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಭಾರೀ ಅನುಕೂಲವಾಗಲಿದೆ.
ಈ ಮೇಲಿನ ಎರಡು ಪ್ರಕರಣಗಳು ಅಪಘಾತ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸುವ ಅಪಘಾತ ಸಂತ್ರಸ್ತರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.