ನಿರೀಕ್ಷಣಾ ಜಾಮೀನಿನ ರಕ್ಷಣೆ ಚಾರ್ಜ್‌ಶೀಟ್ ಸಲ್ಲಿಕೆ ಬಳಿಕವೂ ಮುಂದುವರಿಯಲಿದೆ: ಕರ್ನಾಟಕ ಹೈಕೋರ್ಟ್
ನಿರೀಕ್ಷಣಾ ಜಾಮೀನಿನ ರಕ್ಷಣೆ ಚಾರ್ಜ್‌ಶೀಟ್ ಸಲ್ಲಿಕೆ ಬಳಿಕವೂ ಮುಂದುವರಿಯಲಿದೆ: ಕರ್ನಾಟಕ ಹೈಕೋರ್ಟ್
ಆರೋಪಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ ಎಂಬ ಕಾರಣಕ್ಕೆ ಆರೋಪಿಯು ನ್ಯಾಯಾಲಯಕ್ಕೆ ಶರಣಾಗಿ ರೆಗ್ಯೂಲರ್ ಜಾಮೀನು ಪಡೆಯಬೇಕೆಂಬ ಅವಶ್ಯಕತೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದ್ದು, ನಿರೀಕ್ಷಣಾ ಜಾಮೀನಿನ ರಕ್ಷಣೆ ಚಾರ್ಜ್‌ಶೀಟ್ ಸಲ್ಲಿಕೆ ಬಳಿಕವೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು ವಿಚಾರಣೆ ಪೂರ್ಣಗೊಳ್ಳುವವರೆಗೂ ಮುಂದುವರಿಯಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು ರದ್ದಾಗುವುದಕ್ಕೂ ಮೊದಲು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.
ನಿರೀಕ್ಷಣಾ ಜಾಮೀನಿದ್ದರೂ ಬಂಧನಕ್ಕೆ ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದ್ದು, ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿ, ವಿಶೇಷ ನ್ಯಾಯಾಲಯದ ಬಂಧನ ಆದೇಶವನ್ನು ರದ್ದುಪಡಿಸಿತು.
ಕ್ರಿಮಿನಲ್ ಪ್ರಕರಣದಲ್ಲಿ ಒಮ್ಮೆ ಮಂಜೂರಾದ ನಿರೀಕ್ಷಣಾ ಜಾಮೀನು, ಪ್ರಕರಣದ ತನಿಖೆ ಮುಗಿದು ಆರೋಪಪಟ್ಟಿ ಸಲ್ಲಿಕೆಯಾದ ಬಳಿಕವೂ ಮುಂದುವರೆಯಲಿದೆ. ನಿರೀಕ್ಷಣಾ ಜಾಮೀನು ಮಂಜೂರಾದ ಪ್ರಕರಣದಲ್ಲಿ, ಸರ್ಕಾರ ಯಾ ಸಂತ್ರಸ್ತೆ ಪರವಾಗಿ ನಿರೀಕ್ಷಣಾ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸದಿದ್ದರೂ, ಆರೋಪಿಯನ್ನು ವಶಕ್ಕೆ ಪಡೆಯುವಂತೆ ನಿರ್ದೇಶಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ ಎಂದು ಪೀಠ ಹೇಳಿದೆ.