ಪರ್ಯಾಯ ನಿವೇಶನದ ಕ್ರಯಪತ್ರಕ್ಕೆ ಮುದ್ರಾಂಕ, ನೋಂದಣಿ ಶುಲ್ಕ ಅನಗತ್ಯ: ಹೈಕೋರ್ಟ್ ಆದೇಶ
ಪರ್ಯಾಯ ನಿವೇಶನದ ಕ್ರಯಪತ್ರಕ್ಕೆ ಮುದ್ರಾಂಕ, ನೋಂದಣಿ ಶುಲ್ಕ ಅನಗತ್ಯ: ಹೈಕೋರ್ಟ್ ಆದೇಶ
"ಸಾರ್ವಜನಿಕ ಉದ್ದೇಶಕ್ಕಾಗಿ ಸರಕಾರ ಅಥವಾ ಮಹಾನಗರ ಪಾಲಿಕೆಗಳು ಭೂ ಸ್ವಾಧೀನ ಮಾಡಿಕೊಂಡಾಗ ಭೂಮಿ ಕಳೆದು ಕೊಂಡ ಭೂ ಮಾಲೀಕರಿಗೆ ಪರಿಹಾರದ ರೂಪದಲ್ಲಿ ನೀಡುವ ಪರ್ಯಾಯ ನಿವೇಶನದ ಕ್ರಯಪತ್ರಕ್ಕೆ ಯಾವುದೇ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ವಿಧಿಸುವಂತಿಲ್ಲ'' ಎಂದು ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಬೆಳಗಾವಿಯ ತಿಲಕವಾಡಿ ನಿವಾಸಿ. ನಾರಾಯಣ್ ಹರಿಶ್ಚಂದ್ರ ಪೈ ಸಲ್ಲಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ, ''ಭೂಸ್ವಾಧೀನ ಕಾಯಿದೆ-1894ರ ಸೆಕ್ಷನ್ 51ರ ಪ್ರಕಾರ, ಭೂಸ್ವಾಧೀನ ಪ್ರಕ್ರಿಯೆ ಯಡಿ ನಡೆಯುವ ಯಾವುದೇ ಒಪ್ಪಂದ ಅಥವಾ ಆದೇಶಗಳಿಗೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕದಿಂದ ವಿನಾಯಿತಿ ಇರಲಿದೆ. ಪಾಲಿಕೆಯು ಅದನ್ನು ಸಾಮಾನ್ಯ ಹಕ್ಕು ವರ್ಗಾವಣೆ ಪತ್ರ ಎಂದು ಕರೆದ ತಕ್ಷಣ ವಿನಾಯಿತಿ ಇಲ್ಲದಾಗುವುದಿಲ್ಲ. ಇದು ವ್ಯಾಪಾರಕ್ಕಾಗಿ ನಡೆದ ಮಾರಾಟವಲ್ಲ. ಭೂಮಿ ಕಳೆದುಕೊಂಡವರಿಗೆ ನೀಡಿದ ಪರಿಹಾರವಾಗಿದೆ'' ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, "ಪಾಲಿಕೆ ಕಾನೂನುಬಾಹಿರವಾಗಿ ಭೂಮಿ ಪಡೆದು, 30 ವರ್ಷಗಳ ಕಾಲ ಸಂತ್ರಸ್ತರನ್ನು ನ್ಯಾಯಾಂಗ ಹೋರಾಟ ಮಾಡುವಂತೆ ಮಾಡಿದೆ. ಪಾಲಿಕೆ ಮಾಡಿದ ತಪ್ಪಿಗಾಗಿ ಭೂಮಿ ಕಳೆದುಕೊಂಡವರಿಂದ ತೆರಿಗೆ ವಸೂಲಿ ಮಾಡುವುದು ಸಂವಿಧಾನದ ಪರಿಚ್ಛೇದ 300 'ಎ' (ಆಸ್ತಿಯ ಹಕ್ಕು) ಉಲ್ಲಂಘಿಸಿದಂತಾಗಲಿದೆ. ಒಂದು ವೇಳೆ ಶುಲ್ಕ ಕಟ್ಟಲೇಬೇಕಾಗಿದ್ದರೂ ಅದನ್ನು ಪಾಲಿಕೆಯೇ ಭರಿಸಬೇಕಿತ್ತು,'' ಎಂದು ನ್ಯಾಯಪೀಠ ಹೇಳಿದೆ.
"ಸಂತ್ರಸ್ತರಿಂದ ಕಾನೂನುಬಾಹಿರವಾಗಿ ಪಡೆದಿದ್ದ 5,04,784 ರೂ. ಮುದ್ರಾಂಕ ಶುಲ್ಕ ಮತ್ತು 90,140 ರೂ. ನೋಂದಣಿ ಶುಲ್ಕ ಸೇರಿ ಒಟ್ಟು 5.94 ಲಕ್ಷ ರೂ.ಗಳನ್ನು ಆದೇಶ ತಲುಪಿದ 8 ವಾರಗಳಲ್ಲಿ ಅರ್ಜಿ ದಾರರಿಗೆ ಹಿಂತಿರುಗಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಮರುಪಾವತಿಸ ದಿದ್ದರೆ ಶೇ.6ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಹಣ ನೀಡಬೇಕಾಗುತ್ತದೆ,'' ಎಂದು ನ್ಯಾಯಾಲಯ ಸರಕಾರಕ್ಕೆ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿ ತಿಲಕವಾಡಿಯ ನಾರಾಯಣ್ ಹರಿಶ್ಚಂದ್ರ ಪೈ ಎಂಬುವವರ ಜಮೀನನ್ನು ರಸ್ತೆ ಅಗಲೀಕರಣಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆಯು 1994 ರಲ್ಲಿ ಸ್ವಾಧಿ ಶ್ರೀನಪಡಿಸಿಕೊಂಡಿತ್ತು. ಅದಕ್ಕೆ ಪರಿಹಾರವಾಗಿ ಪಾಲಿಕೆಯು ಪರ್ಯಾಯ ನಿವೇಶನ ನೀಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಪಾಲಿಕೆಯು ನಿವೇಶನದ ಸಂಪೂರ್ಣ ಹಕ್ಕು ಹಸ್ತಾಂತರ ಮಾಡದಿದ್ದಾಗ ಸಂತ್ರಸ್ತರು ಸುದೀರ್ಘ ಕಾನೂನು ಹೋರಾಟ ನಡೆಸಿ, ಕೊನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಪರ ತೀರ್ಪು ಪಡೆದಿದ್ದರು.