-->
How to change DOB in Service Book- ಸರ್ಕಾರಿ ನೌಕರರಿಗೆ ಉಪಯುಕ್ತ ಕಾನೂನು ಮಾಹಿತಿ: ಸೇವಾ ಪುಸ್ತಕದಲ್ಲಿ ಜನ್ಮ ದಿನ ಬದಲಾವಣೆ ಹೇಗೆ..?

How to change DOB in Service Book- ಸರ್ಕಾರಿ ನೌಕರರಿಗೆ ಉಪಯುಕ್ತ ಕಾನೂನು ಮಾಹಿತಿ: ಸೇವಾ ಪುಸ್ತಕದಲ್ಲಿ ಜನ್ಮ ದಿನ ಬದಲಾವಣೆ ಹೇಗೆ..?ಸರಕಾರಿ ನೌಕರರ ಸೇವಾ ಪುಸ್ತಕದಲ್ಲಿ ದಾಖಲಾದ ಜನ್ಮ ದಿನಾಂಕವನ್ನು ಬದಲಾಯಿಸಲು ಸಾಧ್ಯವಿದೆಯೇ?ಈ ಕುರಿತು ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳು ನೀಡಿದ ತೀರ್ಪುಗಳ ಕುರಿತು ಮಾಹಿತಿಸರಕಾರಿ ಸೇವೆಗೆ ಸೇರಿದಾಗ ತಮ್ಮ ಜನ್ಮ ದಿನಾಂಕವನ್ನು ಸೂಕ್ತ ದಾಖಲಾತಿಗಳ ಜೊತೆ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸುವುದು ಸೇವಾ ಕಾನೂನಿನಡಿ ಪ್ರತಿಯೊಬ್ಬ ಸರಕಾರಿ ನೌಕರನ ಹೊಣೆಗಾರಿಕೆಯಾಗಿದೆ. ಈ ರೀತಿ ಜನ್ಮ ದಿನಾಂಕದ ಕುರಿತು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಸದರಿ ಜನ್ಮ ದಿನಾಂಕವನ್ನು ಅಂಗೀಕರಿಸಿ ಸೇವಾ ಪುಸ್ತಕ(ಸರ್ವಿಸ್ ಬುಕ್‌)ದಲ್ಲಿ ದಾಖಲಿಸುವುದು ನೇಮಕಾತಿ ಪ್ರಾಧಿಕಾರದ ಹಾಗೂ ಸಕ್ಷಮ ಅಧಿಕಾರಿಗಳ ಕರ್ತವ್ಯವಾಗಿದೆ.


ಈ ರೀತಿ ಒಮ್ಮೆ ಅಂಗೀಕೃತಗೊಂಡು ಸೇವಾ ಪುಸ್ತಕದಲ್ಲಿ ದಾಖಲಿಸಲಾದ ಜನ್ಮ ದಿನಾಂಕವನ್ನು ಬದಲಾಯಿಸಲು ಸರಕಾರಿ ನೌಕರನಿಗೆ ಅವಕಾಶವಿದೆಯೇ? ಈ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪು ಗಳಲ್ಲಿರುವ ಮುಖ್ಯ ಅಂಶಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.


ಕರ್ನಾಟಕ ಸರಕಾರಿ ನೌಕರರ (ವಯಸ್ಸು ನಿಗದಿಪಡಿ ಪಡಿಸುವಿಕೆ) ಕಾಯಿದೆ 1974 ರಡಿ ಸರಕಾರಿ ನೌಕರರಿಗೆ ತಮ್ಮ ಸೇವಾ ಪುಸ್ತಕದಲ್ಲಿ ದಾಖಲಾದ ಜನ್ಮದಿನಾಂಕ ಬದಲಾವಣೆಗೆ ಅವಕಾಶವಿದೆ. ಜನ್ಮದಿನಾಂಕ ಬದಲಾವಣೆ ಕುರಿತು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸದರಿ ಕಾಯ್ದೆಯ ಕಲಂ 3 ರಡಿ ವಿವರಿಸಲಾಗಿದೆ. ಸದರಿ ಕಾಯಿದೆಯ ಕಲ೦ 5(2) ರ ಪ್ರಕಾರ ಸರಕಾರಿ ನೌಕರರು ತಮ್ಮ ಜನ್ಮ ದಿನಾಂಕದಲ್ಲಿ ಯಾವುದೇ ಮಾರ್ಪಾಡು ಮಾಡಲು ಇಚ್ಛಿಸಿದಲ್ಲಿ ಸರಕಾರಿ ಸೇವೆಗೆ ಸೇರಿದ 3 ವರ್ಷದೊಳಗೆ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಪರಿಗಣಿಸಲು ಅವಕಾಶವಿದೆ. 3 ವರ್ಷಗಳ ಬಳಿಕ ಸಲ್ಲಿಸಲಾದ ಅರ್ಜಿಗಳನ್ನು ಪುರಸ್ಕರಿಸಲು ಅವಕಾಶವಿಲ್ಲ. ಸದರಿ ಕಾಯ್ದೆಯ ನಿಯಮ 6 ರ ಪ್ರಕಾರ ಸರಕಾರ ನೌಕರರ ಜನ್ಮ ದಿನಾಂಕವನ್ನು ಘೋಷಿಸುವ ಅಧಿಕಾರ ವ್ಯಾಪ್ತಿ ಸಿವಿಲ್ ನ್ಯಾಯಾಲಯಕ್ಕೆ ಇರುವುದಿಲ್ಲ.


ಸರಕಾರಿ ನೌಕರರ ಜನ್ಮದಿನಾಂಕ ಬದಲಾವಣೆಯ ಕುರಿತು ಪ್ರತ್ಯೇಕ ಕಾಯ್ದೆ ಅಸ್ತಿತ್ವದಲ್ಲಿದ್ದರೂ ಬಹುತೇಕ ಸರಕಾರಿ ನೌಕರರು ತಮ್ಮ ಸರಿಯಾದ ಜನ್ಮ ದಿನಾಂಕವನ್ನು ಘೋಷಿಸಿ ಡಿಕ್ರಿಯನ್ನು ನೀಡಬೇಕೆಂದು ಪ್ರಾಥಿ೯ಸಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವುದನ್ನು ಕಾಣಬಹುದು. ಕರ್ನಾಟಕ ಹೈಕೋರ್ಟಿನ ವಿಭಾಗೀಯ ಪೀಠವು *ಕರ್ನಾಟಕ ರಾಜ್ಯ ಸರಕಾರ ವಿರುದ್ಧ ಟಿ. ಶ್ರೀನಿವಾಸ್* ಈ ಪ್ರಕರಣದಲ್ಲಿ ನೀಡಿದ ತೀರ್ಪಿನ ಪ್ರಕಾರ ಸರಕಾರಿ ನೌಕರರ ಸೇವಾ ಸ್ಥಿತಿಗತಿಗಳಿಗೆ ಸಂಬಂಧಪಟ್ಟಂತೆ ಜನ್ಮದಿನಾಂಕ ಅಥವಾ ವಯಸ್ಸನ್ನು ಮಾರ್ಪಡಿಸುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಇರುವುದಿಲ್ಲ. ಸರಕಾರಿ ನೌಕರರನ್ನು ಹೊರತುಪಡಿಸಿ ಶಾಲಾ ದಾಖಲಾತಿಗಳಲ್ಲಿ ಜನ್ಮದಿನಾಂಕ ಅಥವಾ ಹೆಸರನ್ನು ಬದಲಾವಣೆ ಕೋರಿ ವಿದ್ಯಾರ್ಥಿಗಳ ಪರವಾಗಿ ಅವರ ಪೋಷಕರು ಅಥವಾ ಜನಸಾಮಾನ್ಯರು ಹೂಡಿರುವ ದಾವೆಗಳ ಇತ್ಯರ್ಥಕ್ಕೆ ಇತ್ಯರ್ಥಪಡಿಸಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಇದೆ. ಆದರೆ ಸೇವಾ ಪುಸ್ತಕದಲ್ಲಿದಾಖಲಾಗಿರುವ ಜನ್ಮ ದಿನಾಂಕ ಅಥವಾ ವಯಸ್ಸಿಗೆ ಸಂಬಂಧಪಟ್ಟಂತೆ ಬದಲಾವಣೆ ಕೋರಿ ಸಲ್ಲಿಸುವ ದಾವೆಗಳನ್ನು ಹೊರತುಪಡಿಸಿ ಉಳಿದ ವಿಷಯಗಳಿಗೆ ಸಂಬಂಧಪಟ್ಟಂತೆ ಸಿವಿಲ್ ನ್ಯಾಯಾಲಯದಲ್ಲಿ ಸರಕಾರಿ ನೌಕರನು ಹೂಡಿರುವ ದಾವೆಯನ್ನು ಇತ್ಯರ್ಥ ಪಡಿಸಲು ಸಿವಿಲ್ ನ್ಯಾಯಾಲಯವು ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.ಜನ್ಮ ದಿನಾಂಕ ಬದಲಾವಣೆ: ಅನುಸರಿಸಬೇಕಾದ ಕ್ರಮಗಳು


ಸರಕಾರಿ ಸೇವೆಗೆ ಸೇರಿದ 3 ವರ್ಷಗಳೊಳಗೆ ತನ್ನ ಜನ್ಮದಿನಾಂಕ ಬದಲಾವಣೆ ಕೋರಿ ಪೂರಕ ದಾಖಲಾತಿಗಳೊ೦ದಿಗೆ ಸರಕಾರಿ ನೌಕರನು ತನ್ನ ನೇಮಕಾತಿ ಪ್ರಾಧಿಕಾರಕ್ಕೆ ನಿಯಮಾನುಸಾರ ಅಜಿ೯ ಸಲ್ಲಿಸಬೇಕು. ಈ ರೀತಿ ಸಲ್ಲಿಸಿದ ಅರ್ಜಿಯನ್ನು ನೇಮಕಾತಿ ಪ್ರಾಧಿಕಾರವು ಪರಿಶೀಲಿಸಿ ವಿಚಾರಣೆಗೆ ಅರ್ಹವೆಂದು ಪರಿಗಣಿಸಿದಲ್ಲಿ ವಿಚಾರಣಾ ಅಧಿಕಾರಿಯನ್ನು ನೇಮಿಸತಕ್ಕದ್ದು. ಸದರಿ ವಿಚಾರಣೆಯಲ್ಲಿ ನೇಮಕಾತಿ ಪ್ರಾಧಿಕಾರವನ್ನು ಪ್ರತಿನಿಧಿಸುವ ಸಲುವಾಗಿ ಮಂಡನಾಧಿಕಾರಿ ಯವರನ್ನು ಕೂಡ ನೇಮಿಸತಕ್ಕದ್ದು. ಜನ್ಮದಿನಾಂಕ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿದ ಸರಕಾರಿ ನೌಕರರ ಸಾಕ್ಷ್ಯವನ್ನು ದಾಖಲಿಸಿ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ವಿಚಾರಣಾಧಿಕಾರಿಯವರು ತಮ್ಮ ವರದಿಯನ್ನು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.ವಿಚಾರಣಾ ಅಧಿಕಾರಿಯವರು ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಜನ್ಮ ದಿನಾಂಕ ಬದಲಾವಣೆಗೆ ಅರ್ಹ ಪ್ರಕರಣವೆಂದು ಮನವರಿಕೆಯಾದಲ್ಲಿ ನೇಮಕಾತಿ ಪ್ರಾಧಿಕಾರವು ಸರಕಾರಿ ನೌಕರನ ಸೇವಾ ಪುಸ್ತಕದಲ್ಲಿ ಜನ್ಮದಿನಾಂಕ ಬದಲಾವಣೆ ಮಾಡುವ೦ತೆ ಸೂಕ್ತ ಆದೇಶವನ್ನು ಹೊರಡಿಸಬಹುದು.ಒಂದು ವೇಳೆ ಹಾಜರುಪಡಿಸಲಾದ ದಾಖಲೆಗಳು ಸಮರ್ಪಕವಾಗಿರದೇ ಇದ್ದಲ್ಲಿ ಅಥವಾ ವಿಚಾರಣಾಧಿಕಾರಿಯ ವರದಿಯು ವ್ಯತಿರಿಕ್ತವಾಗಿದ್ದಲ್ಲಿ ನೇಮಕಾತಿ ಪ್ರಾಧಿಕಾರವು ಸರಕಾರಿ ನೌಕರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಬಹುದಾಗಿದೆ.


ವಿಳಂಬ ಮನ್ನಿಸಲು ಸರಕಾರ ಅಥವಾ ವಿಚಾರಣಾ ಪ್ರಾಧಿಕಾರಗಳು ಅಧಿಕಾರ ವ್ಯಾಪ್ತಿ ಹೊಂದಿವೆಯೇ?


ಬಸವರಾಜ್ ವಿರುದ್ಧ ಕರ್ನಾಟಕ ಸರಕಾರ ಈ ಪ್ರಕರಣಗಳಲ್ಲಿ ಮಾನ್ಯ ಕನಾ೯ಟಕ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಕನಾ೯ಟಕ ಸರಕಾರಿ ನೌಕರರ (ವಯಸ್ಸು ನಿಗದಿಪಡಿಸುವಿಕೆ) ಕಾಯಿದೆ 1974 ರ ಕಲಂ 5(2)ರ ಪ್ರಕಾರ ಅರ್ಜಿಯನ್ನು ಜನ್ಮದಿನಾಂಕವು ನೇಮಕಾತಿ ಪ್ರಾಧಿಕಾರದಿ೦ದ ಅಂಗೀಕಾರಗೊಂಡು ಸೇವಾವಹಿಯಲ್ಲಿ ದಾಖಲಾದ 3 ವರ್ಷಗಳೊಳಗೆ ಸಲ್ಲಿಸತಕ್ಕದ್ದು. 3 ವರ್ಷ ಕಳೆದ ಬಳಿಕ ಸಲ್ಲಿಸಲಾದ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸುವಂತಿಲ್ಲ. ಮಾನ್ಯ ಕರ್ನಾಟಕ ಹೈಕೋರ್ಟ್ ಬಸವರಾಜು ವಿರುದ್ಧ ಕರ್ನಾಟಕ ಸರಕಾರ ಈ ಪ್ರಕರಣದಲ್ಲಿ ದಿನಾಂಕ 8.7.1999 ರ೦ದು ನೀಡಿದ ತೀಪು೯ ಉಲ್ಲೇಖನೀಯ.


*ಸಿ. ಪಿ. ಗೋವಿಂದರಾಜನ್ ವಿರುದ್ಧ ಕರ್ನಾಟಕ ರಾಜ್ಯ ಸರಕಾರ* ಈ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠವು ನೀಡಿದ ತೀರ್ಪಿನಂತೆ ಕಾಲಮಿತಿ ಅಧಿನಿಯಮ 5 ರಡಿ ವಿಳಂಬವನ್ನು ಮನ್ನಿಸುವ ಅಧಿಕಾರ ಕೇವಲ ನ್ಯಾಯಾಲಯಗಳು ಮಾತ್ರ ಹೊಂದಿದೆ. ಉಳಿದಂತೆ ರಾಜ್ಯ ಸರಕಾರವು ನೇಮಿಸಿದ ವಿಚಾರಣಾ ಅಧಿಕಾರಿಗಳು ಕಾಲಮಿತಿ ಅಧಿನಿಯಮ 5 ರಡಿ ಪ್ರದತ್ತ ಅಧಿಕಾರವನ್ನು ಬಳಸಿ ವಿಳಂಬವನ್ನು ಮನ್ನಿಸುವ ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ. ಏಕೆಂದರೆ ವಿಚಾರಣಾ ಅಧಿಕಾರಿಯು ನ್ಯಾಯಾಲಯದ ಸ್ಥಾನಮಾನವನ್ನು ಹೊಂದಿರುವುದಿಲ್ಲ.


ನಿವೃತ್ತಿಯ ಅಂಚಿನಲ್ಲಿರುವ ಬಹುತೇಕ ಸರಕಾರಿ ನೌಕರರು ತಮ್ಮ ಜನ್ಮದಿನಾಂಕ ಬದಲಾವಣೆ ಕೋರಿ ಅರ್ಜಿ ಸಲ್ಲಿಸುವುದನ್ನು ಕೂಡ ಕಾಣಬಹುದು. *ಭಾರತ್ ಕೊಕಿಂಗ್ ಕೋಲ್ ಲಿಮಿಟೆಡ್ ವಿರುದ್ಧ ಶಾಮ್ ಕಿಶೋರ್ ಸಿಂಗ್* ಈ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು ದಿನಾಂಕ 5.2.2020 ರಂದು ನೀಡಿದ ತೀರ್ಪು ಮಹತ್ವದ್ದಾಗಿದೆ. ಈ ಪ್ರಕರಣದಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎ. ಎಸ್. ಬೋಪಣ್ಣ ಮತ್ತು ಶ್ರೀಮತಿ ಆರ್. ಭಾನುಮತಿ ಇವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಸೇವೆಗೆ ಸೇರಿದ ಮೂವತ್ತು ವರ್ಷಗಳ ಬಳಿಕ ಜನುಮ ದಿನಾಂಕ ಬದಲಾವಣೆ ಕೋರಿ ಸಲ್ಲಿಸಿದ ಅರ್ಜಿ ಹಾಗೂ ನಿವೃತ್ತಿಯ ಬಳಿಕ ಸಲ್ಲಿಸಿದ ರಿಟ್ ಅರ್ಜಿಯು ನಿಗದಿಪಡಿಸಲಾದ ಕಾಲಮಿತಿಯನ್ನು ಮೀರಿರುವುದರಿಂದ ತಿರಸ್ಕರಿಸಲು ಅರ್ಹವಾದ ಪ್ರಕರಣವೆಂಬ ತೀರ್ಪನ್ನು ನೀಡಿತು.✍ ಪ್ರಕಾಶ್ ನಾಯಕ್, ಅಧ್ಯಕ್ಷರು, ದಿ ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ್‌ ಕೋ ಅಪರೇಟಿವ್ ಬ್ಯಾಂಕ್, ಮಂಗಳೂರು ಮೊಬೈಲ್- 9844898381

Ads on article

Advertise in articles 1

advertising articles 2

Advertise under the article