Advocated Covid fund- ಕೋವಿಡ್ ಬಿಕ್ಕಟ್ಟು: ಸಂತ್ರಸ್ತ ವಕೀಲರ ನೆರವಿಗೆ 4 ಕೋಟಿ- ಹೈಕೋರ್ಟಿಗೆ ರಾಜ್ಯ ಸರ್ಕಾರ ಮಾಹಿತಿ
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ವಕೀಲರಿಗೆ ಆರ್ಥಿಕ ನೆರವು ನೀಡಲು ನಾಲ್ಕು ಕೋಟಿ ರೂ.ಗಳ ಅನುದಾನ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಭರವಸೆ ನೀಡಿದೆ.
ರಾಜ್ಯ ಸರ್ಕಾರ ಸಚಿವ ಸಂಪುಟ ರಚನೆಯಾದ ಕೂಡಲೇ ಈ ಅನುದಾನದ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಹೈಕೋರ್ಟ್ ಪೀಠಕ್ಕೆ ಲಿಖಿತ ಭರವಸೆ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನ್ಯಾಯಪೀಠ, ಸರ್ಕಾರದಿಂದ ಮಾಹಿತಿ ಪಡೆದಿದ್ದು, ಮೂರು ವಾರದಲ್ಲಿ ಈ ಪ್ರಕ್ರಿಯೆಯನ್ನು ಮುಗಿಸಬೇಕೆಂದು ತಾಕೀತು ಮಾಡಿತು.
ಇದೇ ವೇಳೆ, ನೋಂದಾಯಿತ ವಕೀಲರ ಗುಮಾಸ್ತರಿಗೂ ಆರ್ಥಿಕ ನೆರವು ಕಲ್ಪಿಸಲು ಸುಮಾರು 10 ಲಕ್ಷ ರೂ.ಗಳ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಸರ್ಕಾರ ಪರ ವಕೀಲರು ಹೈಕೋರ್ಟ್ ಮುಂದೆ ಲಿಖಿತವಾಗಿ ಹೇಳಿದರು.
ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯ್ದೆ-1983ಯನ್ವಯ ಸಮಿತಿಯೊಂದನ್ನು ರೂಪಿಸಿ ಷೆಡ್ಯೂಲ್ ಬ್ಯಾಂಕಿನಲ್ಲಿ ಖಾತೆ ತೆರದು ಈ ನಿಧಿಯ ನ್ಯಾಯೋಚಿತ ನಿರ್ವಹಣೆ ಮಾಡಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಲಾಗಿದೆ.
ಕಳೆದ ವರ್ಷ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ವಕೀಲರ ನೆರವಿಗೆ ರಾಜ್ಯ ಸರ್ಕಾರ ಐದು ಕೋಟಿ ರೂ.ಗಳ ನೆರವನ್ನು ಘೋಷಿಸಿತ್ತು.